ADVERTISEMENT

ಕರ್ನಾಟಕ ಮಹಿಳಾ ತಂಡ ಹ್ಯಾಟ್ರಿಕ್‌ ಸಾಧನೆ

ಡಾಜ್‌ಬಾಲ್: ಮೂರು ದೇಶಗಳ ಟೂರ್ನಿಯ ಪ್ರಶಸ್ತಿ ಮಲೇಷ್ಯಾಗೆ; ಕರ್ನಾಟಕ ಪುರುಷ ತಂಡಕ್ಕೆ ನಿರಾಸೆ

​ಪ್ರಜಾವಾಣಿ ವಾರ್ತೆ
Published 28 ಏಪ್ರಿಲ್ 2025, 16:37 IST
Last Updated 28 ಏಪ್ರಿಲ್ 2025, 16:37 IST
   

ಮಂಗಳೂರು: ಕರ್ನಾಟಕ ಮಹಿಳೆಯರ ತಂಡದವರು ಬಂಟ್ವಾಳ ತಾಲ್ಲೂಕಿನ ಮಾಣಿಯ ಬಾಲವಿಕಾಸ ಶಾಲೆಯಲ್ಲಿ ನಡೆದ ರಾಷ್ಟ್ರೀಯ ಡಾಜ್‌ಬಾಲ್ ಚಾಂಪಿಯನ್‌ಷಿಪ್‌ನ ಪ್ರಶಸ್ತಿ ಗೆದ್ದು ಹ್ಯಾಟ್ರಿಕ್ ಸಾಧನೆ ಮಾಡಿದರು. ಎರಡು ಬಾರಿಯ ಚಾಂಪಿಯನ್ ಪುರುಷರ ತಂಡ ನಿರಾಸೆ ಕಂಡಿತು. 

ಭಾರತ ಡಾಜ್‌ ಬಾಲ್ ಫೆಡರೇಷನ್ ಹಾಗೂ ಕರ್ನಾಟಕ ರಾಜ್ಯ ಡಾಜ್‌ ಬಾಲ್ ಸಂಸ್ಥೆಯ ಸಹಯೋಗದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಡಾಜ್‌ ಬಾಲ್ ಸಂಸ್ಥೆ ಆಯೋಜಿಸಿದ್ದ ಚಾಂಪಿಯನ್‌ಷಿಪ್‌ನ ಭಾನುವಾರ ನಡೆದ ಫೈನಲ್‌ನಲ್ಲಿ ಕರ್ನಾಟಕದ ಮಹಿಳೆಯರು 2-0 ಸೆಟ್‌ಗಳಿಂದ ಮಹಾರಾಷ್ಟ್ರವನ್ನು ಮಣಿಸಿದರು. ಪುದುಚೇರಿ ಮತ್ತು ತಮಿಳುನಾಡು ತಂಡಗಳು ಕ್ರಮವಾಗಿ ಮೂರು ಹಾಗೂ ನಾಲ್ಕನೇ ಸ್ಥಾನ ಗಳಿಸಿದವು. 

ಪುರುಷರ ತಂಡಕ್ಕೆ ಸೆಮಿಫೈನಲ್‌ ತಲುಪುವುದಕ್ಕೂ ಸಾಧ್ಯವಾಗಲಿಲ್ಲ. ಹರಿಯಾಣವನ್ನು ಸೋಲಿಸಿದ ಮಹಾರಾಷ್ಟ್ರ ಚಾಂಪಿಯನ್‌ ಪಟ್ಟಕ್ಕೇರಿದರೆ, ಪುದುಚೇರಿ ಮತ್ತು ತಮಿಳುನಾಡು ತಂಡಗಳು ಕ್ರಮವಾಗಿ ಮೂರು ಮತ್ತು ನಾಲ್ಕನೇ ಸ್ಥಾನ ಗಳಿಸಿದವು. ಮಿಶ್ರ ವಿಭಾಗದಲ್ಲಿ ಹರಿಯಾಣ ವಿರುದ್ಧ 4–0ಯಿಂದ ಗೆದ್ದ ಗುಜರಾತ್ ಪ್ರಶಸ್ತಿ ಗೆದ್ದುಕೊಂಡಿತು. ಮಹಾರಾಷ್ಟ್ರ ಮೂರು ಪುದುಚೇರಿ ನಾಲ್ಕನೇ ಸ್ಥಾನ ಗಳಿಸಿದವು.    

ADVERTISEMENT

ಮಹಿಳೆಯರ ವಿಭಾಗದಲ್ಲಿ ಕರ್ನಾಟಕದ ಪೂರ್ವಿತಾ ಉತ್ತಮ ಆಲ್‌ರೌಂಡರ್‌, ಲಿಖಿತಾ ಉತ್ತಮ ಅಟ್ಯಾಕರ್‌ ಮತ್ತು ಮಹಾರಾಷ್ಟ್ರದ ಸೈನಿ ಉತ್ತಮ ಡಿಫೆಂಡರ್ ಎನಿಸಿಕೊಂಡರು.

ಮಲೇಷ್ಯಾಗೆ ಪ್ರಶಸ್ತಿ:

ಇದೇ ಮೊದಲ ಬಾರಿ ನಡೆದ ಮೂರು ದೇಶಗಳ ಟೂರ್ನಿಯಲ್ಲಿ ಮಲೇಷ್ಯಾ ಪ್ರಶಸ್ತಿ ಗೆದ್ದುಕೊಂಡಿತು. ಭಾರತ ರನ್ನರ್ ಆದರೆ ನೇಪಾಳ ಮೂರನೇ ಸ್ಥಾನ ಗಳಿಸಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.