ಬೆಂಗಳೂರು: ಕರ್ನಾಟಕದ ಎಂ.ಎಸ್.ಸಿಂಚನಾ ಅವರು ತೆಲಂಗಾಣದ ಹನುಮಕೊಂಡದಲ್ಲಿ ಗುರುವಾರ ಆರಂಭಗೊಂಡ ಇಂಡಿಯಾ ಓಪನ್ 23 ವರ್ಷದೊಳಗಿನವರ ಅಥ್ಲೆಟಿಕ್ಸ್‌ನ ಮಹಿಳೆಯರ ಲಾಂಗ್‌ಜಂಪ್ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಗೆದ್ದುಕೊಂಡರು.
ಲಕ್ಷದ್ವೀಪದ ಮುಬಸ್ಸಿನಾ ಮೊಹಮ್ಮದ್ ಅವರು 6.36 ಮೀ. ಜಿಗಿಯುವುದರೊಂದಿಗೆ ಸ್ವರ್ಣ ಜಯಿಸಿದರೆ, ಸಿಂಚನಾ (6.22 ಮೀ.) ಅವರು ರಜತ ಪದಕ ತಮ್ಮದಾಗಿಸಿಕೊಂಡರು. ಕೇರಳದ ಅಭಿರಾಮಿ ವಿ.ಎಂ. (5.98 ಮೀ) ಕಂಚು ಗೆದ್ದರು.
ಪುರುಷರ 10 ಸಾವಿರ ಮೀ. ಓಟದಲ್ಲಿ ರಾಜ್ಯದ ಶಿವಾಜಿ ಕಾಶುರಾಮ್ ಅವರು ಕಂಚು ಜಯಿಸಿದರು.
ರಿಲೇ ತಂಡಕ್ಕೆ ಪೂವಮ್ಮ ಆಯ್ಕೆ: ಕರ್ನಾಟಕದ ಎಂ.ಆರ್.ಪೂವಮ್ಮ ಹಾಗೂ ಪ್ರಿಯಾ ಮೋಹನ್ ಅವರು ದಕ್ಷಿಣ ಏಷ್ಯಾ ಸೀನಿಯರ್ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ನಲ್ಲಿ ಕಣಕ್ಕಿಳಿಯಲಿರುವ ಭಾರತ 4x400ಮೀ. ರಿಲೇ ತಂಡಕ್ಕೆ ಆಯ್ಕೆಯಾಗಿದ್ದಾರೆ. ಕೂಟವು ರಾಂಚಿಯಲ್ಲಿ ಇದೇ 24ರಂದು ಆರಂಭಗೊಳ್ಳಲಿದೆ.
ರಾಜ್ಯದ ಕೃಷಿಕ್ ಎಂ.(ಪುರುಷರ 110ಮೀ. ಹರ್ಡಲ್ಸ್), ಸುಪ್ರಿಯ ಎಸ್.ಬಿ.(ಮಹಿಳೆಯರ ಹೈಜಂಪ್) ಹಾಗೂ ಕರೀಷ್ಮಾ ಎಸ್.(ಮಹಿಳೆಯರ ಜಾವೆಲಿನ್) ಅವರೂ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.