ಲಾಂಗ್‌ಜಂಪ್ ಸ್ಪರ್ಧೆಯಲ್ಲಿ ಚಿನ್ನ ಗೆದ್ದ ಮೈಸೂರು ವಿಭಾಗದ ಶ್ವೇತಾ ಪೂಜಾರಿ ಜಿಗಿದ ಕ್ಷಣ
-ಪ್ರಜಾವಾಣಿ ಚಿತ್ರ/ಅನೂಪ್ ರಾಘ.ಟಿ.
ಹನಮಕೊಂಡ (ತೆಲಂಗಾಣ): ಕೇರಳದ ಲಾಂಗ್‌ಜಂಪರ್ ಸಿ.ವಿ.ಅನುರಾಗ್ ಅವರು ಶುಕ್ರವಾರ ಇಂಡಿಯನ್ ಓಪನ್ 23 ವರ್ಷದೊಳಗಿನವರ ಅಥ್ಲೆಟಿಕ್ ಕೂಟದಲ್ಲಿ 8.06 ಮೀ. ದೂರ ಜಿಗಿದು ಚಿನ್ನ ಗೆದ್ದರು. ಎಂಟು ಮೀಟರ್ ಜಿಗಿದವರ ಕ್ಲಬ್‌ಗೆ ಸಾಲಿಗೆ ಹೊಸದಾಗಿ ಸೇರ್ಪಡೆಯಾದರು.
ಇದು 21 ವರ್ಷ ವಯಸ್ಸಿನ ಅನುರಾಗ್ ಅವರ ವೈಯಕ್ತಿಕ ಶ್ರೇಷ್ಠ ಸಾಧನೆಯಾಗಿದ್ದು ಎರಡನೇ ಯತ್ನದಲ್ಲಿ ಈ ದೂರ ದಾಖಲಿಸಿದರು. ಆ ಮೂಲಕ 2024ರಲ್ಲಿ ತಾವೇ ಸ್ಥಾಪಿಸಿದ್ದ 7.87 ಮೀ.ಗಳ ದಾಖಲೆಯನ್ನು ಅವರು ಸುಧಾರಿಸಿದರು.
ಮೊದಲ ಯತ್ನದಲ್ಲಿ 7.88 ಮಿ. ಜಿಗಿದಿದ್ದರು. ಎರಡನೇ ಯತ್ನದಲ್ಲಿ 8.06 ಮೀ. ಜಿಗಿದ ಅವರು ನಂತರದ ಯತ್ನಗಳಲ್ಲಿ ಕ್ರಮವಾಗಿ 7.96 ಮೀ, 6.62 ಮೀ ಮತ್ತು 7.88 ಮೀ. ದೂರ ಜಿಗಿದರು.
ತಮಿಳುನಾಡಿನ ಶರನ್ ಜೆ. (7.82 ಮೀ.) ಮತ್ತು ಪೊಲೀಸ್ ತಂಡದ ಆರ್ಯನ್ ಚೌಧರಿ (7.67 ಮೀ.) ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನ ಗಳಿಸಿದರು.
ಕರ್ನಾಟಕಕ್ಕೆ 4 ಪದಕ:
ಎರಡನೇ ದಿನ ಕರ್ನಾಟಕದ ಅಥ್ಲೀಟುಗಳು ಮೂರು ಬೆಳ್ಳಿ, ಒಂದು ಕಂಚಿನ ಪದಕ ಗೆದ್ದುಕೊಂಡರು.
ಪುರುಷರ ಡಿಸ್ಕಸ್ ಥ್ರೊನಲ್ಲಿ ನಾಗೇಂದ್ರ ಎ. ಅವರು 52.48 ಮೀ. ದೂರಕ್ಕೆ ಡಿಸ್ಕ್ ಎಸೆದು ಬೆಳ್ಳಿ ಗೆದ್ದುಕೊಂಡರು. ಜೆಎಸ್‌ಡಬ್ಲ್ಯು ತಂಡದ ಉಜ್ವಲ್ 53.60 ಮೀ. ದಾಖಲಿಸಿ ಚಿನ್ನ ಗೆದ್ದರು.
ಹೈಜಂಪ್‌ನಲ್ಲಿ ಸುದೀಪ್ 2.11 ಮೀ. ಜಿಗಿದು ಬೆಳ್ಳಿ ಗೆದ್ದರು. ಹರಿಯಾಣದ ಶಿವ್ ಭಗವಾನ್ (2.13 ಮೀ.) ಚಿನ್ನ ತಮ್ಮದಾಗಿಸಿಕೊಂಡರು.
ಮಹಿಳೆಯರ ವಿಭಾಗದ 400 ಮೀ. ಓಟವನ್ನು 54.71 ಸೆ.ಗಳಲ್ಲಿ ಪೂರೈಸಿದ ಪ್ರಿಯಾ ಬೆಳ್ಳಿ ಗೆದ್ದರು. ಉತ್ತರ ಪ್ರದೇಶದ ಆಯುಷಿ (53.62 ಸೆ.) ಚಿನ್ನ ಗೆದ್ದರು.
100 ಮೀ ಹರ್ಡಲ್ಸ್‌ನಲ್ಲಿ ಶ್ರೀಯಾ ರಾಜೇಶ್ 13.90 ಸೆ.ಗಳಲ್ಲಿ ದೂರ ಕ್ರಮಿಸಿ ಕಂಚಿನ ಪದಕ ತಮ್ಮದಾಗಿಸಿಕೊಂಡರು. ಜೆೆೆಎಸ್‌ಡಬ್ಲ್ಯು ಪ್ರತಿನಿಧಿಸಿದ ಪ್ರಾಂಜಲಿ ಆರ್. (13.73 ಸೆ.) ಮತ್ತು ತಮಿಳುನಾಡಿನ ಅಕ್ಷ್‌ಚಿ ದಾಸ್ (13.90 ಸೆ.) ಕ್ರಮವಾಗಿ ಮೊದಲ ಎರಡು ಸ್ಥಾನ ಪಡೆದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.