
ದಿಯು: ಕರ್ನಾಟಕದ ರಿಷಿತಾ ಜಿ. ಮತ್ತು ದೇಚಮ್ಮ ಸುದಯ ಅವರು ಇಲ್ಲಿನ ಘೋಘ್ಲಾ ಕಡಲ ತೀರದಲ್ಲಿ ನಡೆಯುತ್ತಿರುವ ಎರಡನೇ ಆವೃತ್ತಿಯ ಖೇಲೊ ಇಂಡಿಯಾ ಬೀಚ್ ಗೇಮ್ಸ್‌ನಲ್ಲಿ ಕರ್ನಾಟಕಕ್ಕೆ ಮೊದಲ ಪದಕ ತಂದುಕೊಟ್ಟರು.
ಸ್ಪರ್ಧೆಯ ಎರಡನೇ ದಿನವಾದ ಬುಧವಾರ ನಡೆದ ಪೆಂಕಾಟ್ ಸಿಲಾಟ್‌ನ (ಇದು ಇಂಡೊನೇಷ್ಯಾ ಮತ್ತು ಮಲೇಷ್ಯಾದಲ್ಲಿ ಹುಟ್ಟಿಕೊಂಡ ಒಂದು ಸಾಂಪ್ರದಾಯಿಕ ಕರಾಟೆ ಕಲೆ) ಗಾಂಡಾ ತಂಡ ವಿಭಾಗದಲ್ಲಿ ರಿಷಿತಾ ಮತ್ತು ದೇಚಮ್ಮ ಅವರು ಸತತ ಎರಡನೇ ಬಾರಿ ಕಂಚಿನ ಪದಕಕ್ಕೆ ಕೊರಳೊಡ್ಡಿದರು. ಕರ್ನಾಟಕ ಆಟಗಾರ್ತಿಯು ಕ್ವಾರ್ಟರ್ ಫೈನಲ್‌ನಲ್ಲಿ 512–486 ಅಂಕಗಳಿಂದ ಮಣಿಪುರ ತಂಡವನ್ನು ಮಣಿಸಿ ಸೆಮಿಫೈನಲ್ ಪ್ರವೇಶಿಸುವ ಮೂಲಕ ಕಂಚಿನ ಪದಕವನ್ನು ಖಚಿತಪಡಿಸಿಕೊಂಡಿದ್ದರು.
ನಾಲ್ಕರ ಘಟ್ಟದ ಹಣಾಹಣಿಯಲ್ಲಿ ರಿಷಿತಾ– ದೇಚಮ್ಮ ಉತ್ತಮ ಪ್ರದರ್ಶನ ನೀಡಿದರೂ 540–527ರಿಂದ ಆತಿಥೇಯ ದಿಯು ಮತ್ತು ದಾಮನ್ ತಂಡಕ್ಕೆ ಮಣಿದರು. ಕರ್ನಾಟಕದ ಆಟಗಾರ್ತಿಯರು ಕಳೆದ ಆವೃತ್ತಿಯಲ್ಲೂ ಇದೇ ಸಾಧನೆ ಮೆರೆದಿದ್ದರು. ಈ ಸ್ಪರ್ಧೆಯಲ್ಲಿ ಚಂಡೀಗಢ ಜೋಡಿ ಚಿನ್ನ ಗೆದ್ದರೆ, ದಿಯು ಮತ್ತು ದಾಮನ್ ಜೋಡಿ ಬೆಳ್ಳಿ ಪದಕ ಜಯಿಸಿತು.
‘ಕರ್ನಾಟಕವನ್ನು ಪ್ರತಿನಿಧಿಸಿ ಸತತ ಎರಡನೇ ಬಾರಿ ರಾಜ್ಯವನ್ನು ಪದಕ ಗೆದ್ದಿರುವುದು ಖುಷಿ ತಂದಿದೆ. ಈ ಬಾರಿ ಚಿನ್ನದ ಪದಕದ ಗುರಿಯೊಂದಿಗೆ ನಾವು ಬಂದಿದ್ದೆವು. ಆದರೆ, ಅಲ್ಪ ಅಂತರದಲ್ಲಿ ಸೆಮಿಫೈನಲ್‌ನಲ್ಲಿ ಸೋತೆವು. ರಾಜ್ಯ ಸರ್ಕಾರದಿಂದ ನಮಗೆ ಪ್ರೋತ್ಸಾಹ ದೊರೆತರೆ ಮುಂದಿನ ಬಾರಿ ಇನ್ನಷ್ಟು ತರಬೇತಿಯೊಂದಿಗೆ ಸ್ವರ್ಣ ಗೆಲ್ಲುವ ಗುರಿಯಿದೆ’ ಎಂದು ಕೊಡಗಿನ ದೇಚಮ್ಮ ಮತ್ತು ಬಳ್ಳಾರಿಯ ರಿಷಿತಾ ಅವರು ಪ್ರಜಾವಾಣಿಗೆ ಪ್ರತಿಕ್ರಿಯಿಸಿದರು.
25 ವರ್ಷದ ದೇಚಮ್ಮ ಅವರು ಪ್ರಸ್ತುತ ಬೆಂಗಳೂರಿನಲ್ಲಿ ಸ್ವಾಫ್ಟ್‌ವೇರ್ ಉದ್ಯೋಗಿಯಾಗಿದ್ದಾರೆ. 23 ವರ್ಷದ ರಿಷಿತಾ ಅವರು ಪೀಣ್ಯಾದ ಆಚಾರ್ಯ ಇನ್‌ಸ್ಟಿಟ್ಯೂಟ್‌ನಲ್ಲಿ ದ್ವಿತೀಯ ವರ್ಷದ ಎಂಬಿಎ ವ್ಯಾಸಂಗ ಮಾಡುತ್ತಿದ್ದಾರೆ.
ರಾಜ್ಯದ ಪುರುಷರ ತಂಡವು ಪೆಂಕಾಟ್ ಸಿಲಾಟ್‌ನ ಟ್ಯಾಂಡಿಂಗ್ ಸ್ಪರ್ಧೆಯಲ್ಲಿ ಸೆಮಿಫೈನಲ್ ಪ್ರವೇಶಿಸುವ ಮೂಲಕ ಕನಿಷ್ಠ ಕಂಚಿನ ಪದಕ ಖಚಿತಪಡಿಸಿಕೊಂಡಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.