
ದಿಯು: ಬೆಂಗಳೂರಿನ ಈಜುಪಟುಗಳಾದ ಅಶ್ಮಿತಾ ಚಂದ್ರ ಮತ್ತು ದ್ರುಪದ್ ರಾಮಕೃಷ್ಣ ಅವರು ಇಲ್ಲಿನ ಘೋಘ್ಲಾ ಕಡಲ ಕಿನಾರೆಯಲ್ಲಿ ‘ಚಿನ್ನದ ಮೀನಿ’ನಂತೆ ಕಂಗೊಳಿಸಿದರು. ಅವರ ನೆರವಿನಿಂದ ಕರ್ನಾಟಕ ತಂಡವು ಶನಿವಾರ ಮುಕ್ತಾಯಗೊಂಡ ಎರಡನೇ ಆವೃತ್ತಿಯ ಖೇಲೊ ಇಂಡಿಯಾ ಬೀಚ್ ಗೇಮ್ಸ್‌ನಲ್ಲಿ ಸಮಗ್ರ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು.
ಪದಕ ಪಟ್ಟಿಯಲ್ಲಿ ಗುರುವಾರ 18ನೇ ಸ್ಥಾನದಲ್ಲಿದ್ದ ಕರ್ನಾಟಕ ಕೊನೆಯ ಎರಡು ದಿನಗಳಲ್ಲಿ ನಡೆದ ಓಪನ್ ವಾಟರ್ ಸ್ವಿಮ್ಮಿಂಗ್‌ನಲ್ಲಿ ಮಿಂಚಿನ ಸಂಚಲನ ಮೂಡಿಸಿತು. 10 ಕಿಲೋ ಮೀಟರ್ ಮತ್ತು 5 ಕಿ.ಮೀ. ಪುರುಷರ ಹಾಗೂ ಮಹಿಳೆಯರ ಈಜು ಸ್ಪರ್ಧೆಯಲ್ಲಿದ್ದ ಒಟ್ಟು 12 ಪದಕಗಳ ಪೈಕಿ ಎಂಟನ್ನು ಬಾಚಿಕೊಂಡಿತು. ಹೀಗಾಗಿ, 11 ಪದಕಗಳೊಂದಿಗೆ ಅಭಿಯಾನವನ್ನು ಅತ್ಯಂತ ಯಶಸ್ವಿಯಾಗಿ ಮುಗಿಸಿತು. ಕಳೆದ ಆವೃತ್ತಿಯಲ್ಲಿ ನಾಲ್ಕು (2 ಚಿನ್ನ, 2 ಕಂಚು) ಪದಕ ಗೆದ್ದು 11ನೇ ಸ್ಥಾನ ಗಳಿಸಿತ್ತು.
ಅಶ್ಮಿತಾಗೆ ಚಿನ್ನ ಡಬಲ್: 10 ಕಿ.ಮೀ. ಸ್ಪರ್ಧೆಯಲ್ಲಿ ಚಿನ್ನ ಗೆದ್ದಿದ್ದ 20 ವರ್ಷದ ಅಶ್ಮಿತಾ, ಕೂಟದ ಕೊನೆಯ ದಿನ 5 ಕಿ.ಮೀ.ನಲ್ಲೂ ಚಾಂಪಿಯನ್ ಆದರು. ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ನಾಲ್ಕು ಬಾರಿ ಭಾರತವನ್ನು ಪ್ರತಿನಿಧಿಸಿದ್ದ ಅವರು 1 ಗಂಟೆ 35:11 ನಿಮಿಷದಲ್ಲಿ ಗುರಿ ತಲುಪಿದರು. ಅವರಿಗೆ ಮಹಾರಾಷ್ಟ್ರದ ದೀಕ್ಷಾ ಸಂದೀಪ್ ಅವರಿಂದ ಪ್ರಬಲ ಸ್ಪರ್ಧೆ ಎದುರಾಯಿತು. ಆರಂಭದಿಂದಲೇ ಮುಂಚೂಣಿಯಲ್ಲಿ ಸಾಗಿದ ಅಶ್ಮಿತಾ ಮುಖಕ್ಕೆ ಬಡಿಯುತ್ತಿದ್ದ ತೀವ್ರ ಸ್ವರೂಪದ ಅಲೆಗಳ ಜೊತೆ ಹೋರಾಟ ನಡೆಸಿ ಗೆಲುವಿನ ನಗೆ ಬೀರಿದರು.
ಬೆಂಗಳೂರಿನ ಮತ್ತೊಬ್ಬ ಸ್ಪರ್ಧಿ ಆಶ್ರಾ ಸುಧೀರ್ ಅವರಿಗೂ ಅವಳಿ ಪದಕಗಳ ಸಂಭ್ರಮ. 10 ಕಿ.ಮೀ.ನಲ್ಲಿ ಬೆಳ್ಳಿ ಗೆದ್ದಿದ್ದ 18 ವರ್ಷದ ಆಶ್ರಾ (1ಗಂ.39:14ನಿ.) 5.ಕಿ.ಮೀ.ನಲ್ಲಿ ಕಂಚಿನ ಸಾಧನೆ ಮಾಡಿದರು. ದೀಕ್ಷಾ (1ಗಂ.35:53ನಿ.) ಬೆಳ್ಳಿ ತಮ್ಮದಾಗಿಸಿಕೊಂಡರು.
‘ಬೀಚ್ ಗೇಮ್ಸ್‌ನಲ್ಲಿ ರಾಜ್ಯವನ್ನು ಪ್ರತಿನಿಧಿಸಿ ಎರಡು ಚಿನ್ನ ಗೆದ್ದಿರುವುದು ಖುಷಿ ತಂದಿದೆ. ಈಜುಕೊಳದಲ್ಲಿ ಅಭ್ಯಾಸ ನಡೆಸಿ, ಸಮುದ್ರದಲ್ಲಿ ಬೃಹತ್ ಗಾತ್ರದ ಅಲೆಗಳ ಜೊತೆ ಗುದ್ದಾಟ ನಡೆಸುವುದು ಕಷ್ಟದಾಯಕ. ಸಮುದ್ರದಲ್ಲೇ ಅಭ್ಯಾಸಕ್ಕೆ ಅವಕಾಶ ಸಿಕ್ಕರೆ ಇನ್ನಷ್ಟು ಸಾಧನೆ ಮಾಡಬಹುದು’ ಎಂದು ಇನ್‌ಸ್ಪೈರ್ ಇನ್‌ಸ್ಟ್ರಿಟ್ಯೂಟ್‌ನಲ್ಲಿ ತರಬೇತಿ ಪಡೆಯುತ್ತಿರುವ ಅಶ್ಮಿತಾ ಹೇಳಿದರು.
ಚಿನ್ನ ಉಳಿಸಿಕೊಂಡ ದ್ರುಪದ್: ಬಸವನಗುಡಿ ಈಜು ಕೇಂದ್ರದ ದ್ರುಪದ್ ಅವರು 5 ಕಿ.ಮೀ. ಸ್ಪರ್ಧೆಯಲ್ಲಿ ಪ್ರಶಸ್ತಿಯನ್ನು ಉಳಿಸಿಕೊಂಡರು. ಕಳೆದ ಆವೃತ್ತಿಯಲ್ಲಿ ಚಿನ್ನ ಗೆದ್ದಿದ್ದ ಅವರು ಈ ಬಾರಿಯೂ 1 ಗಂಟೆ 21:33 ನಿಮಿಷಗಳಲ್ಲಿ ಗುರಿ ತಲುಪಿ ಅಗ್ರಸ್ಥಾನ ಪಡೆದರು.ಸ್ಪರ್ಧೆಯ ಆರಂಭದಿಂದ ಕೊನೆಯ ಹಂತದವರೆಗೂ ಉತ್ತರ ಪ್ರದೇಶದ ಅನುರಾಗ್ ಸಿಂಗ್ (1ಗಂ.21:38ನಿ) ಮುನ್ನಡೆ ಕಾಯ್ದುಕೊಂಡಿದ್ದರು. ಆದರೆ, ಮುಕ್ತಾಯಕ್ಕೆ 150 ಮೀಟರ್ ದೂರ ಇರುವಂತೆ ವೇಗ ಪಡೆದುಕೊಂಡ ದ್ರುಪದ್ ಕೇವಲ ಐದು ಸೆಕೆಂಡ್‌ಗಳ ಅಂತರದಲ್ಲಿ ವಿಜಯಶಾಲಿಯಾದರು. ಕರ್ನಾಟಕದ ಪ್ರಶಂನ್ಸ್ ಎಚ್.ಎಂ. (1ಗಂ.24:35ನಿ) ಕಂಚಿನ ಪದಕ ಗೆದ್ದುಕೊಂಡರು.
ಸಿಂಗಪುರದಲ್ಲಿ ನಡೆದ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಭಾಗವಹಿಸಿದ್ದ 15 ವರ್ಷದ ದ್ರುಪದ್ ಕಳೆದ ಒಂದು ದಶಕದಿಂದ ಈಜು ಅಭ್ಯಾಸದಲ್ಲಿ ತೊಡಗಿಸಿಕೊಂಡಿದ್ದಾರೆ. ಬನಶಂಕರಿ ನ್ಯಾಷನಲ್ ಪಬ್ಲಿಕ್ ಸ್ಕೂಲ್‌ನಲ್ಲಿ 10ನೇ ತರಗತಿ ಓದುತ್ತಿರುವ ಅವರು ಭಾರತವನ್ನು ಪ್ರತಿನಿಧಿಸಿ ಪದಕ ಗೆಲ್ಲುವ ಗುರಿಯನ್ನು ಹೊಂದಿದ್ದಾರೆ. ಆಶ್ರಾ ಮತ್ತು ಪ್ರಶಂನ್ಸ್ ಅವರೂ ಬಸವನಗುಡಿ ಕೇಂದ್ರದಲ್ಲಿ ತರಬೇತಿ ಪಡೆಯುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.