ADVERTISEMENT

ಖೇಲೊ ಇಂಡಿಯಾ ಚಳಿಗಾಲದ ಕ್ರೀಡಾಕೂಟಕ್ಕೆ ತೆರೆ: ಕರ್ನಾಟಕಕ್ಕೆ ನಾಲ್ಕು ಪದಕ

​ಪ್ರಜಾವಾಣಿ ವಾರ್ತೆ
Published 26 ಜನವರಿ 2026, 14:16 IST
Last Updated 26 ಜನವರಿ 2026, 14:16 IST
ಸ್ಪೀಡ್‌ ಸ್ಕೇಟಿಂಗ್‌ ಲಾಂಗ್‌ ಟ್ರ್ಯಾಕ್‌ 1000 ಮೀಟರ್‌ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದ ಕರ್ನಾಟಕದ ಶ್ರೀವತ್ಸ ಎಸ್‌.ರಾವ್‌. 
ಸ್ಪೀಡ್‌ ಸ್ಕೇಟಿಂಗ್‌ ಲಾಂಗ್‌ ಟ್ರ್ಯಾಕ್‌ 1000 ಮೀಟರ್‌ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದ ಕರ್ನಾಟಕದ ಶ್ರೀವತ್ಸ ಎಸ್‌.ರಾವ್‌.    

ಲೇಹ್ (ಲಡಾಕ್‌): ಕರ್ನಾಟಕದ ಸ್ಪರ್ಧಿಗಳು ಇಲ್ಲಿ ಸೋಮವಾರ ಮುಕ್ತಾಯಗೊಂಡ ಖೇಲೊ ಇಂಡಿಯಾ ಚಳಿಗಾಲದ ಕ್ರೀಡಾಕೂಟದಲ್ಲಿ ಒಂದು ಚಿನ್ನ ಸೇರಿದಂತೆ ನಾಲ್ಕು ಪದಕಗಳನ್ನು ಗೆದ್ದು ಪದಕ ಪಟ್ಟಿಯಲ್ಲಿ ಐದನೇ ಸ್ಥಾನದೊಂದಿಗೆ ಅಭಿಯಾನ ಮುಗಿಸಿತು.

ಕರ್ನಾಟಕಕ್ಕೆ ಐದೂ ಪದಕಗಳು ಸ್ಪೀಡ್‌ ಸ್ಕೇಟಿಂಗ್‌ನಲ್ಲೇ ಲಭಿಸಿತು. ಲಾಂಗ್‌ ಟ್ರ್ಯಾಕ್‌ 1000 ಮೀಟರ್‌ ಸ್ಪರ್ಧೆಯಲ್ಲಿ ರಾಜ್ಯದ ಶ್ರೀವತ್ಸ ಎಸ್‌.ರಾವ್‌. ಚಿನ್ನದ ಸಾಧನೆ ಮೆರೆದರು. ಲಾಂಗ್‌ ಟ್ರ್ಯಾಕ್‌ 500 ಮೀಟರ್‌ ಸ್ಪರ್ಧೆಯಲ್ಲಿ ಹರ್ಷಿತ್‌ ಬಿ.ಟಿ. ಕಂಚಿನ ಪದಕ ಗೆದ್ದರು. ‌ಪುರುಷರ ಮತ್ತು ಮಹಿಳೆಯರ ರಿಲೆನಲ್ಲಿ ಕರ್ನಾಟಕ ತಂಡಗಳು ತಲಾ ಬೆಳ್ಳಿ ಪದಕ ಗೆದ್ದವು. ರಾಜ್ಯದ ಮಿಶ್ರ ರಿಲೆ ತಂಡವು ಕಂಚಿನ ಸಾಧನೆ ಮಾಡಿತು. 

ಹರಿಯಾಣ ತಂಡವು ಒಟ್ಟಾರೆ 7 (4 ಚಿನ್ನ, 1 ಬೆಳ್ಳಿ ಹಾಗೂ 2 ಕಂಚು) ಪದಕಗಳನ್ನು ಗೆದ್ದು ಸಮಗ್ರ ಪ್ರಶಸ್ತಿ ಮುಡಿಗೇರಿಸಿಕೊಂಡಿತು. ಆತಿಥೇಯ ಲಡಾಖ್‌ (2 ಚಿನ್ನ, 5 ಬೆಳ್ಳಿ ಹಾಗೂ 4 ಕಂಚು) ಹಾಗೂ ಮಹಾರಾಷ್ಟ್ರ (2 ಚಿನ್ನ, 3 ಬೆಳ್ಳಿ ಹಾಗೂ 2 ಕಂಚು) ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನ ಪಡೆದರೆ, ನಂತರದ ಸ್ಥಾನವನ್ನು ತೆಲಂಗಾಣ (ತಲಾ 2 ಚಿನ್ನ, ಬೆಳ್ಳಿ ಹಾಗೂ ಕಂಚು) ಗಳಿಸಿತು.

ADVERTISEMENT

ಅಂತಿಮ ದಿನ ನಡೆದ ಪುರುಷರ ಐಸ್‌–ಹಾಕಿ ಸ್ಪರ್ಧೆಯ ಫೈನಲ್‌ನಲ್ಲಿ ಭಾರತೀಯ ಸೇನಾ ತಂಡವು 3–2ರಿಂದ ಚಂಡೀಗಢ ತಂಡದ ವಿರುದ್ಧ ರೋಚಕ ಜಯ ಸಾಧಿಸಿತು.

2000 ಮೀ. ಶಾರ್ಟ್‌ ಟ್ರ್ಯಾಕ್‌ ಮಿಶ್ರ ರಿಲೆ ಸ್ಪರ್ಧೆಯಲ್ಲಿ ಮಹಾರಾಷ್ಟ್ರ ತಂಡವು (3 ನಿ., 22.47ಸೆ.) ಸ್ವರ್ಣ ಜಯಿಸಿತು. ಲಡಾಖ್‌ (3ನಿ., 29.34ಸೆ) ಬೆಳ್ಳಿ ಪದಕ ಗೆದ್ದರೆ, ಕರ್ನಾಟಕ (3ನಿ., 57.01ಸೆ.) ಕಂಚಿಗೆ ಕೊರಳೊಡ್ಡಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.