ADVERTISEMENT

kho kho world cup 2025: ಭಾರತ ತಂಡಗಳಿಗೆ ಕೊಕ್ಕೊ ವಿಶ್ವಕಪ್‌ ಕಿರೀಟ

ಮೋಡಿ ಮಾಡಿದ ಕರ್ನಾಟಕದ ಚೈತ್ರಾ: ಎರಡೂ ವಿಭಾಗಗಳಲ್ಲೂ ನೇಪಾಳ ರನ್ನರ್ಸ್‌ ಅಪ್‌

ಪ್ರದೀಶ್ ಎಚ್.ಮರೋಡಿ
Published 19 ಜನವರಿ 2025, 20:33 IST
Last Updated 19 ಜನವರಿ 2025, 20:33 IST
ಕೊಕ್ಕೊ ವಿಶ್ವಕಪ್‌
ಕೊಕ್ಕೊ ವಿಶ್ವಕಪ್‌    

ನವದೆಹಲಿ: ಕರ್ನಾಟಕದ ಚೈತ್ರಾ ಬಿ. ಅವರ ಅಮೋಘ ಆಟದ ಬಲದಿಂದ ಭಾರತದ ಮಹಿಳೆಯರ ತಂಡವು ಕೊಕ್ಕೊ ವಿಶ್ವಕಪ್‌ನ ಫೈನಲ್‌ ಪಂದ್ಯದಲ್ಲಿ ಜಯಭೇರಿ ಬಾರಿಸಿತು. ಅದರ ಬೆನ್ನಲ್ಲೇ ಪುರುಷರ ತಂಡವೂ ಸಾಂಘಿಕ ಆಟ ಪ್ರದರ್ಶಿಸಿ ದೇಸಿ ಕ್ರೀಡೆಯ ಚೊಚ್ಚಲ ವಿಶ್ವಕಿರೀಟ ಧರಿಸಿತು.

ಇಂದಿರಾ ಗಾಂಧಿ ಒಳಾಂಗಣ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಪ್ರಶಸ್ತಿ ಸುತ್ತಿನ ಹಣಾಹಣಿಯಲ್ಲಿ ತವರಿನ ಪ್ರೇಕ್ಷಕರ ಮುಂದೆ ಪ್ರಿಯಾಂಕಾ ಇಂಗ್ಳೆ ಮತ್ತು ಪ್ರತೀಕ್‌ ವೈಕರ್‌ ಬಳಗವು ಗೆದ್ದು ಬೀಗಿತು. ಎರಡೂ ವಿಭಾಗಗಳಲ್ಲೂ ನೇಪಾಳ ತಂಡವು ರನ್ನರ್ಸ್‌ ಅಪ್‌ ಆಯಿತು. ಆತಿಥೇಯ ತಂಡಗಳು ಜಯ ಸಾಧಿಸುತ್ತಿದ್ದಂತೆ ಕಿಕ್ಕಿರಿದು ಸೇರಿದ್ದ ಕ್ರೀಡಾಭಿಮಾನಿಗಳು ಎದ್ದು ನಿಂತು ಚಪ್ಪಾಳೆ ತಟ್ಟಿ, ರಾಷ್ಟ್ರಧ್ವಜದೊಂದಿಗೆ ಕುಣಿದು ಕುಪ್ಪಳಿಸಿದರು.

19 ತಂಡಗಳಿದ್ದ ಮಹಿಳೆಯರ ವಿಭಾಗದಲ್ಲಿ ಭಾರತ ಮತ್ತು ನೇಪಾಳವು ಅಜೇಯವಾಗಿ ಫೈನಲ್‌ ಪ್ರವೇಶಿಸಿದ್ದವು. ಹೀಗಾಗಿ, ಅವುಗಳ ಸೆಣಸಾಟ ಭಾರೀ ಕುತೂಹಲ ಮೂಡಿಸಿತ್ತಾದರೂ, ಅಂತಿಮವಾಗಿ 78–40ರಿಂದ ಆತಿಥೇಯ ಬಳಗವು ಪಾರಮ್ಯ ಮೆರೆಯಿತು. 

ADVERTISEMENT

ಪುರುಷರ ವಿಭಾಗದ ಉದ್ಘಾಟನಾ ಪಂದ್ಯದಲ್ಲಿ ಭಾರತ ತಂಡವು ನೇಪಾಳವನ್ನು ಮಣಿಸಿ ಅಭಿಯಾನವನ್ನು ಆರಂಭಿಸಿತ್ತು. ನಂತರದ ಪಂದ್ಯಗಳನ್ನು ಸತತವಾಗಿ ಗೆದ್ದು ಫೈನಲ್‌ಗೆ ಬಂದಿದ್ದ ಅದೇ ತಂಡವನ್ನು ಫೈನಲ್‌ನಲ್ಲಿ 54–36ರಿಂದ ಭಾರತ ಮಣಿಸಿ, ಅಜೇಯವಾಗಿ ಉಳಿಯಿತು. ಪುರುಷರ ವಿಭಾಗದಲ್ಲಿ 20 ತಂಡಗಳು ಭಾಗವಹಿಸಿದ್ದವು.

ಭಾರತದ ವನಿತೆಯರು ಆರಂಭದಲ್ಲೇ ಚುರುಕಿನ ಆಟಕ್ಕೆ ಒತ್ತು ನೀಡಿದರು. ಮೊದಲ ನಿಮಿಷದಲ್ಲೇ ಎದುರಾಳಿ ತಂಡದ ಮೂರು ಡಿಫೆಂಡರ್‌ಗಳನ್ನು ಹೊರದಬ್ಬಿ ಉತ್ತಮ ಆರಂಭ ಪಡೆದರು. ಆಕರ್ಷಕ ಪ್ಲೈಯಿಂಗ್‌ ಜಂಪ್‌, ಸ್ಕೈಡೈವ್‌ ಮಾಡಿದ ತರುಣಿಯರು ಮೊದಲ ಸರದಿಯಲ್ಲೇ 34 ಅಂಕ ಸಂಪಾದಿಸಿದರು.

ಎರಡನೇ ಸರದಿಯಲ್ಲಿ ರಕ್ಷಣೆಗೆ ಇಳಿದ ಭಾರತ ತಂಡಕ್ಕೆ ಮೈಸೂರು ಜಿಲ್ಲೆಯ ಟಿ.ನರಸೀಪುರದ ಚೈತ್ರಾ ಆಸರೆಯಾದರು. ಆರಂಭದಲ್ಲೇ ಕಣಕ್ಕೆ ಇಳಿದ ಅವರು ಚುರುಕಿನ ಪಾದಚಲನೆ ಮೂಲಕ ಸುಮಾರು ಮೂರುವರೆ ನಿಮಿಷಗಳ ಕಾಲ ನೇಪಾಳ ತಂಡದ ಆಟಗಾರ್ತಿಯರು ಇನ್ನಿಲ್ಲದಂತೆ ಕಾಡಿದರು. ಹೀಗಾಗಿ, ವಿರಾಮದ ವೇಳೆಗೆ ಭಾರತ 35–24 ಮುನ್ನಡೆ ಪಡೆಯಲು ಸಾಧ್ಯವಾಯಿತು.

ಮೂರನೇ ಸರದಿಯಲ್ಲೂ ಆತಿಥೇಯ ತಂಡವು ಉತ್ತಮ ಆಟ ಪ್ರದರ್ಶಿಸಿ ಅಂತರವನ್ನು 73–24ಕ್ಕೆ ವಿಸ್ತರಿಸಿಕೊಂಡಿತು. ಕೊನೆಯ ಸರದಿಯಲ್ಲಿ ಮತ್ತೆ ಚೈತ್ರಾ ಮೋಡಿ ಮಾಡಿದರು. ಐದು ನಿಮಿಷಕ್ಕೂ ಅಧಿಕ ಸಮಯ ರಕ್ಷಣೆಯಲ್ಲಿ ಮಿಂಚು ಹರಿಸಿದರು. ಒಂದು ಹಂತದಲ್ಲಿ ಚೈತ್ರಾ ಆಟಕ್ಕೆ ಮನಸೋತ ಪ್ರೇಕ್ಷಕರು ಎದ್ದುನಿಂತು ಚಪ್ಪಾಳೆ ತಟ್ಟಿದರು.

ಪುರುಷರ ತಂಡವೂ ಮೊದಲು ದಾಳಿಗಿಳಿದು ಆಕರ್ಷಕ ನೆಗೆತ, ಸ್ಕೈಡೈವ್‌ ಮೂಲಕ ಆರಂಭದ ಸರದಿಯಲ್ಲಿ 26 ಅಂಕಗಳನ್ನು ಕಲೆ ಹಾಕಿ, ಆರಂಭದಲ್ಲೇ ಪಾರಮ್ಯ ಮೆರೆದರು. ಎರಡನೇ ಸರಣಿಯಲ್ಲಿ ಎದುರಾಳಿ ತಂಡವು 18 ಅಂಕ ಪಡೆದರೆ, ಮೂರನೇ ಸರದಿಯಲ್ಲಿ ಮತ್ತೆ ಆತಿಥೇಯ ತಂಡದ ಆಟಗಾರರು 28 ಅಂಕ ಸಂಪಾದಿಸಿ ಅಂತರವನ್ನು ಹಿಗ್ಗಿಸಿಕೊಂಡರು. ಅಂತಿಮ ಸರದಿಯಲ್ಲೂ ಎದುರಾಳಿ ತಂಡ ಹೆಚ್ಚಿನ ಪ್ರತಿರೋಧ ತೋರಲು ಅವಕಾಶ ನೀಡಲಿಲ್ಲ.

ಚೊಚ್ಚಲ ವಿಶ್ವಕಪ್‌ ಟೂರ್ನಿ ನಿರೀಕ್ಷೆಗಿಂತ ಯಶಸ್ವಿಯಾಗಿದೆ. 2028ರ ಏಷ್ಯನ್‌ ಕ್ರೀಡಾಕೂಟ, 2032ರ ಒಲಿಂಪಿಕ್ಸ್‌ನಲ್ಲಿ ಈ ಕ್ರೀಡೆಯಲ್ಲಿ ಸೇರ್ಪಡೆಗೊಳಿಸಲು ಪ್ರಯತ್ನ ನಡೆಸಲಾಗುವುದು.
ಸುಧಾಂಶು ಮಿತ್ತಲ್‌, ಭಾರತ ಕೊಕ್ಕೊ ಫೆಡರೇಷನ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.