ADVERTISEMENT

ಚೊಚ್ಚಲ ಕೊಕ್ಕೊ ವಿಶ್ವಕಪ್‌ನಲ್ಲಿ ಕುರುಬೂರಿನ ಮಿಂಚು; ಇದು ಚಿಗರಿ 'ಚೈತ್ರಾ' ಕಾಲ..

ಮೋಹನ್ ಕುಮಾರ ಸಿ.
Published 25 ಜನವರಿ 2025, 23:30 IST
Last Updated 25 ಜನವರಿ 2025, 23:30 IST
   

‘ನಮ್ಮೂರ ಹೆಣ್ಮಕ್ಳು ಎಲ್ಲಾದ್ರೂ ಆಡಕ್‌ ವೋಯ್ತಾರಂದ್ರೆ ಕಪ್ಪೂ, ಪ್ರೈಜ್ ಜೊತ್ಗೀಯೇ ಬರಾದೂ..  ಏನ್ನೂ ಬುಡದಿಲ್ಲ ಅವು.. ಅಂತ ಊರೋರು ಯೋಳವ್ರು. ಬಂದ್ಮೇಲೆ ಜಾಸ್ತಿ ಖುಸಿ ಪಡೋರು. ಹೇಳ್ಳಿಲ್ವ ಅಂತ.. ವರ್ಲ್ಡ್‌ ಕಪ್‌ ಗೆದ್‌ ಐದ್‌ ದಿನಾಯ್ತು. ದಿನಾ ನೂರಾರು ಫೋನ್‌ ಕಾಲ್‌ಗಳು, ಯಾವಾಗ್‌ ಬತ್ತೀಯಂತ’

ಕೊಕ್ಕೊ ವಿಶ್ವಕಪ್‌ ವಿಜೇತ ಮಹಿಳಾ ತಂಡದಲ್ಲಿ ‘ಡ್ರೀಮ್ ರನ್ನರ್’ ಎಂದೇ ಹೆಸರಾದ ಮೈಸೂರು ಜಿಲ್ಲೆಯ ತಿ.ನರಸೀಪುರ ತಾಲ್ಲೂಕಿನ ಕುರುಬೂರಿನ ಪ್ರತಿಭೆ ಬಿ.ಚೈತ್ರಾ ಅವರ ಮಾತುಗಳಿವು.

4ನೇ ತರಗತಿಯಲ್ಲಿದ್ದಾಗ ಕೊಕ್ಕೊ ಕಲಿಯಲು ಆರಂಭಿಸಿದಾಗಿನಿಂದಲೂ ಬೆಂಬಲವಾಗಿ ನಿಂತಿರುವ ಊರಿನ ಜನರನ್ನು ನೋಡುವ ಕಾತರದಲ್ಲಿದ್ದ ಅವರು, ಕೊಕ್ಕೊ ಆಟ–ಓಟದ ನೆನಪಿನ ಬುತ್ತಿಯನ್ನು ಬಿಚ್ಚಿಟ್ಟರು.

ADVERTISEMENT

ಊರಿನ ವಿದ್ಯಾದರ್ಶಿನಿ ಕಾನ್ವೆಂಟ್‌ನ ಅಂಗಳದಲ್ಲಿ ಬರಿಗಾಲಿನಲ್ಲಿ ನಿತ್ಯ ಎಂಟು ಗಂಟೆ ಅಭ್ಯಾಸ ನಡೆಸುತ್ತಿರುವ ಅವರಿಗೆ ಹಲವು ಕನಸುಗಳಿವೆ. ಊರಿನಲ್ಲಿ ಸುಸಜ್ಜಿತ ಕೋರ್ಟ್‌ ಆಗಬೇಕು. ಹಳ್ಳಿಗಾಡಿನಿಂದ ಬಂದವರಿಗೆ ಉತ್ತಮ ಸೌಲಭ್ಯ ಸಿಗಬೇಕು. ಕೊಕ್ಕೊ ಕ್ರೀಡೆಯು ಏಷ್ಯನ್‌ ಗೇಮ್ಸ್, ಒಲಿಂಪಿಕ್‌ನಲ್ಲಿ ಸ್ಥಾನ ಪಡೆದರೆ ತನ್ನಂತೆಯೇ ಆಡುವ ತೇಜಸ್ವಿನಿ, ನಿಸರ್ಗಾ, ಮೋನಿಕಾ ಸೇರಿದಂತೆ ಎಲ್ಲರೂ ಅಂತರರಾಷ್ಟ್ರೀಯ ಟೂರ್ನಿಗಳಲ್ಲಿ ಭಾರತವನ್ನು ಗೆಲ್ಲಿಸಬೇಕು. 

‘ಅಣ್ಣ ಚೇತನ್‌ ಕೊಕ್ಕೊ ಆಡುತ್ತಿದ್ದನ್ನು ನೋಡುತ್ತಿದ್ದೆ. ನನಗಿಂತ ಮೂರ್ನಾಲ್ಕು ವರ್ಷ ದೊಡ್ಡವರಾದ ವೀಣಕ್ಕ, ಮೇಧಕ್ಕ ಅವರಂತೆ ನಾನೂ ಆಡ್ಬೇಕಂತ ಆಗ ಕನ್ಸು. ವಿದ್ಯಾದರ್ಶಿನಿ ಶಾಲೆಯಲ್ಲಿ ಗಣಿತ ಹೇಳಿಕೊಡುತ್ತಿದ್ದ ಮಂಜುನಾಥ್‌ ಸರ್‌ ಒಳ್ಳೆ ತರಬೇತಿ ಕೊಟ್ರು. ಅವರಿಂದ್ಲೇ ವರ್ಲ್ಡ್‌ಕಪ್‌ ಟೂರ್ನಿವರ್ಗೂ ಬರುವಂತಾಯ್ತು. ಈ ಸಾಧನೆಗೆ ಅವರೇ ಕಾರಣ. ಹೀಗಾಗಿ ಅವರ ಮೇಲೆ ಹೆಚ್ಚು ಗೌರವ’ ಎಂದು ಅವರು ಕೃತಜ್ಞತೆ ಸಲ್ಲಿಸಿದರು.

ಬರಿಗಾಲಿನಲ್ಲೇ ಅಭ್ಯಾಸ

ಕುರುಬೂರಿನ ಕೊಕ್ಕೊ ಆಟಗಾರ್ತಿಯರು ರೈತರು, ಕೃಷಿ ಕಾರ್ಮಿಕರ ಮಕ್ಕಳು. ನಿತ್ಯ ಕೊಕ್ಕೊ ಆಟ, ಓಟದ ಧ್ಯಾನ. ಬರಿಗಾಲಿನಲ್ಲೇ ಅಭ್ಯಾಸ ಮಾಡುತ್ತಾರೆ. ಈ ಪರಿಪಾಟ 2008 ರಿಂದಲೂ ಇದೆ. ಬೆಳಿಗ್ಗೆ 5.30ರಿಂದ 7.30ರವರೆಗೆ ಕ್ರೀಡಾಭ್ಯಾಸ ಮಾಡಿದ ನಂತರ, ಶಾಲೆಗೆ ಸಿದ್ಧರಾಗಿ ಬಂದು ಮತ್ತೆ 8.30 ರಿಂದ 9.30 ರ ವರೆಗೂ ಶಾಲಾ ಸಹಪಾಠಿಗಳೊಂದಿಗೆ ಅಭ್ಯಾಸ ನಡೆಸುವುದನ್ನು ತಪ್ಪಿಸುವುದಿಲ್ಲ. ಮತ್ತೆ ಶಾಲೆ ಬಿಟ್ಟ ನಂತರ ಸಂಜೆ 4 ರಿಂದ 7 ಗಂಟೆವರೆಗೂ ಅಭ್ಯಾಸ ನಡೆಸುತ್ತಾರೆ. ಕಳೆದ 12 ವರ್ಷದಿಂದಲೂ ಚೈತ್ರಾ ಹೀಗೆಯೇ ಅಭ್ಯಾಸ ಮಾಡಿದ್ದಾರೆ. 

ಬರಿಗಾಲಿನಲ್ಲೇ ಅಭ್ಯಾಸ ಮಾಡಿದ್ದರಿಂದ ಶೂ ಧರಿಸಿ ಆಡುವುದು ಆರಂಭದಲ್ಲಿ ಅವರಿಗೆ ಕಷ್ಟವಾಗಿತ್ತು. ರಾಷ್ಟ್ರೀಯ, ಅಂತರರಾಷ್ಟ್ರೀಯ ಟೂರ್ನಿಗಳಲ್ಲಿ ಕಡ್ಡಾಯವಾಗಿ ಶೂ ಧರಿಸಿಯೇ ಆಡಬೇಕಿದ್ದರಿಂದ ಅದಕ್ಕೆ ಒಗ್ಗಿಕೊಂಡರು. ಮ್ಯಾಟ್‌ನ ಅಂಗಳದಲ್ಲಿ ಕಾಲು ಜಾರುವುದು ಅದರಿಂದ  ತಪ್ಪಿತು.

ಚೈತ್ರಾ ಅವರೊಂದಿಗೆ ನಿಸರ್ಗಾ ಹಾಗೂ ಮೋನಿಕಾ ಕೂಡ ವಿಶ್ವಕಪ್‌ಗೆ ಮುನ್ನ ಆಯೋಜಿಸಿದ್ದ ತರಬೇತಿ ಶಿಬಿರಕ್ಕೆ ಆಯ್ಕೆ ಆಗಿದ್ದರು. ಈ ಮೂವರಲ್ಲಿ ಅವಕಾಶ ಸಿಕ್ಕಿದ್ದು ಚೈತ್ರಾಗೆ. ಆಯ್ಕೆಯನ್ನು ಆಟದ ಮೂಲಕವೇ ಸಮರ್ಥಿಸಿಕೊಂಡ ಅವರು, ಫೈನಲ್‌ ಪಂದ್ಯದಲ್ಲಿ ಐದು ನಿಮಿಷಕ್ಕೂ ಹೆಚ್ಚು ಕಾಲ ಉತ್ತಮ ಡಿಫೆಂಡರ್‌ ಆಗಿ ಅಂಕಗಳು ನೇಪಾಳದ ಪಾಲಾಗದಂತೆ ಕಾಯ್ದರು. ಮೂರು ನಿಮಿಷ ಕಳೆಯುತ್ತಿದ್ದಂತೆ ಪ್ರೇಕ್ಷಕರು ಎದ್ದು ನಿಂತಾಗ, ಶಿಳ್ಳೆ– ಚಪ್ಪಾಳೆಯ ಪ್ರೋತ್ಸಾಹ ಮುಗಿಲುಮುಟ್ಟಿದ್ದಾಗ ಇನ್ನಷ್ಟು ಉತ್ತೇಜಿತರಾದರು. ಸಿಕ್ಕ ಪ್ರೋತ್ಸಾಹ ಇನ್ನೆರಡು ನಿಮಿಷ ಎದುರಾಳಿಗಳಿಗೆ ಸಿಗದಂತೆ ಮಾಡಿದ್ದು ತಮ್ಮ ಜೀವನದ ಮರೆಯಲಾಗದ ಕ್ಷಣವೆಂದು ನೆನೆಯುತ್ತಾರೆ.

ಬರಿಗಾಲಿನಲ್ಲಿ ಓಡುತ್ತಿದ್ದರಿಂದ ಪಾದದಲ್ಲಿ ಗಾಯಗಳು ಹೆಚ್ಚಾಗಿ ಆಗುತ್ತಿದ್ದವು. ಅಪ್ಪ ಬಸವಣ್ಣ, ಅಮ್ಮ ನಾಗರತ್ನ ರಾತ್ರಿ ಮಲಗುವಾಗ ಔಷಧ ಹಚ್ಚುವಾಗ ಮಗಳ ನೋವಿಗೆ ಕಣ್ಣೀರಾಗುತ್ತಿದ್ದರು. 2018ರಲ್ಲಿ ಮಂಡಿಚಿಪ್ಪಿನಲ್ಲಿನ ಸ್ನಾಯು (ಎಸಿಎಲ್‌) ನೋವನ್ನು ನಿರ್ಲಕ್ಷಿಸಿದ್ದರಿಂದ 2023ರಲ್ಲಿ ಚಿಕಿತ್ಸೆಗೆ ಒಳಗಾಗಿ ಎರಡು ತಿಂಗಳು ವಿಶ್ರಾಂತಿ ಪಡೆಯಬೇಕಾಯಿತು. ಬಳಿಕ ಚೇತರಿಸಿಕೊಂಡು ಭಾರತದ ಚಿಗರಿಯಾಗಿ ಚಿಮ್ಮಿದರು.

‘ಅಪ್ಪ‍ ರೈತ್ರು. ಅವರಿಗೆ ಐದು ವರ್ಷದಿಂದ ಹುಷಾರಿಲ್ಲ. ಕಾಲಿಗೆ ಮುಳ್ಳು ಚುಚ್ಚಿ, ಕೀವು ತುಂಬಿ ಬೆರಳುಗಳನ್ನು ತೆಗೆಯಲಾಗಿದೆ. ಮೊದಲಿನಂತೆ ಅವರಿಗೆ ಗದ್ದೆಯಲ್ಲಿ ಕೆಲಸ ಮಾಡಲು ಆಗುವುದಿಲ್ಲ. ನಾನು ಅವರನ್ನ ಹಾಗೂ ಮಂಜುನಾಥ್ ಸರ್ ಅವರನ್ನು ಪದಕದೊಂದಿಗೆ ನೋಡಬೇಕು’ ಎಂದು  ಭಾವುಕರಾದರು.

‘ಸಾಯ್‌’, ‘ಎನ್‌ಐಎಸ್‌’ ಕೋಚ್‌ಗಿಂತಲೂ ನಮ್ಮ ಮಂಜುನಾಥ್‌ ಸರ್ ಕಡಿಮೆಯಿಲ್ಲ. ಈಗಲೂ ತರಬೇತಿ ಕೊಡುತ್ತಿರೋದು ಅವರೇ. ರಾಜ್ಯ ಕೊಕ್ಕೊ ಸಂಸ್ಥೆ ಅಧ್ಯಕ್ಷ ಲೋಕೇಶ್ವರ್, ಕಾರ್ಯದರ್ಶಿ ಮಲ್ಲಿಕಾರ್ಜುನ ಅವರು ತರಬೇತಿಯಲ್ಲಿ ಪ್ರೋತ್ಸಾಹ ನೀಡಿದ್ದಾರೆ. ಮುಂದಿನ ಟೂರ್ನಿಗೆ ನನ್ನೊಂದಿಗೆ ನಿಸರ್ಗಾ, ಮೋನಿಕಾ, ತೇಜಸ್ವಿನಿ ಇರುತ್ತಾರೆ’ ಎಂದು ವಿಶ್ವಾಸದಿಂದ ಹೇಳಿದರು.

ಊರಿಗೊಂದು ಕೋರ್ಟ್ ಬೇಕಿದೆ

ಕುರುಬೂರಿನ ಶಾಲೆ ಅಂಗಳದಲ್ಲೇ ಅಭ್ಯಾಸ ಮಾಡುತ್ತಿರುವ ಕೊಕ್ಕೊ ಆಟಗಾರ್ತಿಯರಿಗೆ ಕ್ರೀಡಾ ಮೈದಾನ ಬೇಕಿದೆ. ಮೊದಲು 40 ಮಕ್ಕಳು ಅಭ್ಯಾಸ ಮಾಡುತ್ತಿದ್ದರು. ಇದೀಗ ನಿತ್ಯ 120 ಮಕ್ಕಳಿದ್ದಾರೆ. ಸೀಹಳ್ಳಿ, ಮಾಡ್ರಳ್ಳಿ, ಕೊತ್ತೇಗಾಲ, ಕನ್ನಹಳ್ಳಿ, ಕನ್ನಹಳ್ಳಿ ಮೋಳೆ ಸೇರಿ ಆರೇಳು ಊರುಗಳಿಂದ ಮಕ್ಕಳು ತರಬೇತಿಗೆ ಬರುತ್ತಿದ್ದಾರೆ. ಅವರೆಲ್ಲರೂ ಬಡ ರೈತರ ಮಕ್ಕಳೇ. ಅವರಿಗೆಲ್ಲ ಉತ್ತಮ ಸೌಲಭ್ಯ ಸಿಗಬೇಕು ಎಂಬುದು ಅವರ ಕನಸು.

ಕೋಚ್‌ ಮಂಜುನಾಥ್ ಅವರೇ ತಮ್ಮ ಕೈಯಿಂದ ಹಣ ಹಾಕಿಕೊಂಡು ಮಕ್ಕಳನ್ನು ಟೂರ್ನಿಗಳು, ಕ್ರೀಡಾಕೂಟಗಳು, ಮ್ಯಾರಥಾನ್‌ಗಳಿಗೆ ಕರೆದುಕೊಂಡು ಹೋಗುತ್ತಿದ್ದಾರೆ. ಅದಕ್ಕೆ ಪೋಷಕರು, ಊರಿನವರೂ ಸಹಾಯ ಮಾಡುತ್ತಿದ್ದಾರೆ. ಬಹುಮಾನಗಳೊಂದಿಗೆ ಬರುವ ಮಕ್ಕಳನ್ನು ನೋಡಿ ಇಡೀ ಊರಿನವರು ಸಂಭ್ರಮಿಸುತ್ತಾರೆ.

‘ಚಿಕ್ಕಂದಿನಲ್ಲಿ ವೀಣಕ್ಕ, ಮೇಧಕ್ಕ ಎಲ್ಲರೂ ಇಂಟರ್‌ನ್ಯಾಷನಲ್‌ನಲ್ಲಿ ಆಡುತ್ತಿದ್ದರು. ಅಲ್ಲಿ ನಾನೂ ಆಡ್ಬೇಕು ಅಂತ ಅಂದುಕೊಳ್ಳುತ್ತಿದ್ದೆ. ಮನೆಯಲ್ಲೂ ಅದೇ ಚಿಂತೆ. ಅಮ್ಮಂಗಂತೂ ಅದೇ ಕನಸಾಗಿತ್ತು. ಆಗೆಲ್ಲ ನಮ್ಮ ಸರ್ ಯೋಳವ್ರು ನಿಂಗೆ ದೊಡ್ದೇ ಸಿಗುತ್ತಂತ. ಅದು ವರ್ಲ್ಡ್‌ಕಪ್‌ ಅಲ್ಲಿ ನಿಜವಾಯ್ತು’ ಎಂದು ಚೈತ್ರಾ ನೆನಪಿಸಿಕೊಂಡರು.

‘‘ಎ’ ಗ್ರೇಡ್‌ ಸರ್ಕಾರಿ ಕೆಲಸವನ್ನು ಎಲ್ಲ ರಾಜ್ಯಗಳು ಆಟಗಾರ್ತಿಯರಿಗೆ ನೀಡಿವೆ. ನಾನೂ ಅದೇ ನಿರೀಕ್ಷೆಯಲ್ಲಿದ್ದೇನೆ. ಪಾಂಡವಪುರದ ಶಂಭುಲಿಂಗೇಶ್ವರ ಕಾಲೇಜಿನಲ್ಲಿ ಬಿಪಿಇಡಿ ಪದವಿ ಓದುತ್ತಿದ್ದೇನೆ. ಪರೀಕ್ಷೆ ಬರೆದು ಯಾವುದಾದರೂ ನೌಕರಿ ಸೇರುವೆ’ ಎಂದರು. 

‘ಹಳ್ಳಿಗಾಡಿನ ಮಕ್ಕಳಿಗೆ ಆಡುವ ಶಕ್ತಿಯಿದೆ. ಅಮ್ಮ ಮಾಡುವ ಚಪಾತಿ, ಕಾಳು, ಮುದ್ದೆ.. ಏನೈತೋ ಅದನ್ನೇ ತಿನ್ನುತ್ತೇವೆ. ಕ್ರೀಡಾ ಸೌಲಭ್ಯಗಳು ನಮ್ಮೂರಿನಂತ ಹಳ್ಳಿಗಳಿಗೆ ತಲುಪಬೇಕಿದೆ’ ಎಂದು ಮತ್ತೆ ಹೇಳುವುದನ್ನು ಅವರು ಮರೆಯಲಿಲ್ಲ.

ಚೈತ್ರಾ ಅವರ ಸಾಲಿಗೆ ಸೇರಲು ಇನ್ನೂ ಹತ್ತಾರು ಹುಡುಗಿಯರು ಕನಸುಗಣ್ಣಿನಿಂದ ಕಾಯುತ್ತಿದ್ದಾರೆ. ಅವರಿಗೆ ಮಂಜುನಾಥ್‌ ಅವರಂಥ ಕೋಚ್‌, ಚೈತ್ರಾರಂಥ ಪೋಷಕರು, ಕುರುಬೂರಿನಂಥ ಗ್ರಾಮಸ್ಥರು ಬೇಕು ಅಷ್ಟೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.