ADVERTISEMENT

ಲಾಕ್‌ಡೌನ್ ನಂತರ ಕ್ರೀಡೆ: ಕ್ರೀಡಾಪಟುಗಳ ಸಮಸ್ಯೆ ಆಲಿಸಿದ ಕೇಂದ್ರ ಸಚಿವ ರಿಜಿಜು

ಏಜೆನ್ಸೀಸ್
Published 12 ಮೇ 2020, 17:27 IST
Last Updated 12 ಮೇ 2020, 17:27 IST
   

ನವದೆಹಲಿ: ದೇಶದಾದ್ಯಂತ ಲಾಕ್‌ಡೌನ್‌ ತೆರವುಗೊಂಡ ಬಳಿಕ ತರಬೇತಿ ಪ್ರಕ್ರಿಯೆಗಳನ್ನು ಮತ್ತೆ ಆರಂಭಿಸುವ ಸಂಬಂಧಕೇಂದ್ರ ಯುವಜನ ಮತ್ತು ಕ್ರೀಡಾ ಸಚಿವ ಕಿರಣ್‌ ರಿಜಿಜು ಅವರು ಭಾರತೀಯ ಕ್ರೀಡಾ ಪ್ರಾಧಿಕಾರದ ಪಟಿಯಾಲ ಹಾಗೂ ಬೆಂಗಳೂರಿನಲ್ಲಿರುವಕೇಂದ್ರಗಳ ಕ್ರೀಡಾಪಟುಗಳೊಂದಿಗೆ ಸಭೆ ನಡೆಸಿದರು. ಇದೇ ವೇಳೆ ಕ್ರೀಡಾಪಟುಗಳಸಮಸ್ಯೆ ಆಲಿಸಿದ ಅವರು ಸಲಹೆಗಳನ್ನೂ ಕೇಳಿದರು.

ವಿವಿಧ ಕ್ರೀಡೆಗಳನ್ನು ಪ್ರತಿನಿಧಿಸುವ ಹಿಮಾದಾಸ್‌, ನೀರಜ್‌ ಚೋಪ್ರಾ, ಕೆಟಿ ಇರ್ಫಾನ್‌, ಶಿವಪಾಲ್‌ ಸಿಂಗ್‌, ಪೂವಮ್ಮ ಸೇರಿದಂತೆ ಸುಮಾರು 40ಕ್ಕೂ ಹೆಚ್ಚು ಕ್ರೀಡಾಪಟುಗಳೊಂದಿಗೆ ಸಚಿವರು ಮಾತುಕತೆ ನಡೆಸಿದ್ದಾರೆ.

ಜಾಗತಿಕ ಪಿಡುಗು ಕೋವಿಡ್‌–19 ನಿಂದಾಗಿ ಸದ್ಯ ತರಬೇತಿ ನಡೆಸಲಾಗದ ಅಸಹಾಯಕ ಸ್ಥಿತಿ ಬಗ್ಗೆ ಪ್ರತಿಯೊಬ್ಬ ಕ್ರೀಡಾಪಟುವೂ ಮಾತನಾಡಿದ್ದಾರೆ. ಜೊತೆಗೆ ಬೆಂಗಳೂರು ಮತ್ತು ಪಟಿಯಾಲದಲ್ಲಿರುವ ಸಾಯ್‌ ಕೇಂದ್ರಗಳಲ್ಲಿ ತರಬೇತಿಗೆ ಅವಕಾಶ ನೀಡುವಂತೆ ವಿನಂತಿಸಿದ್ದಾರೆ.

ADVERTISEMENT

ಸಭೆಯಲ್ಲಿ ಕ್ರೀಡಾ ಕಾರ್ಯದರ್ಶಿ ರವಿ ಮಿತ್ತಲ್, ಭಾರತದ ಕ್ರೀಡಾ ಪ್ರಾಧಿಕಾರದ ಮಹಾನಿರ್ದೇಶಕ ಸಂದೀಪ್ ಪ್ರಧಾನ್, ಅಥ್ಲೆಟಿಕ್ಸ್ ಫೆಡರೇಷನ್‌ ಆಫ್‌ ಇಂಡಿಯಾದ ಅಧ್ಯಕ್ಷ ಅಡಿಲ್ಲೆ ಸುಮರಿವಾಲಾ ಸೇರಿದಂತೆ ಇನ್ನೂ ಕೆಲವು ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.

ಈ ವೇಳೆ ಮಾತನಾಡಿದ ಅಡಿಲ್ಲೆ, ‘ಕ್ರೀಡಾಪಟುಗಳು ತರಬೇತಿ ಮುಂದುವರಿಸಲು ಬಯಸುತ್ತಿದ್ದಾರೆ. ಆದರೆ, ಸಾಯ್‌ ಮತ್ತು ಕ್ರೀಡಾ ಸಚಿವಾಲಯ ರೂಪಿಸುವ ಆರೋಗ್ಯ ಮಾರ್ಗಸೂಚಿ ಮತ್ತು ಸಾಮಾಜಿಕ ಅಂತರವನ್ನುಕಟ್ಟುನಿಟ್ಟಾಗಿ ಪಾಲಿಸುವಂತೆ ಅವರಿಗೆ ಸ್ಪಷ್ಟವಾಗಿ ತಿಳಿಸಿದ್ದೇವೆ’ ಎಂದು ಹೇಳಿದ್ದಾರೆ.

ಮುಂದುವರಿದು, ‘ಲಾಕ್‌ಡೌನ್‌ ಘೋಷಣೆಯಾದಾಗಿನಿಂದ ಕ್ರೀಡಾಪಟುಗಳು ಸುರಕ್ಷಿತ ವಾತಾವರಣದಲ್ಲಿದ್ದಾರೆ. ಹಾಗಾಗಿ ಲಾಕ್‌ಡೌನ್‌ ಹಿಂಪಡೆದರೂ ಅವರು ತರಬೇತಿ ಶಿಬಿರಗಳಿಂದ ಹೊರಗೆ ಹೋಗುವಂತಿಲ್ಲ. ಏಕೆಂದರೆ ಅವರಿಗೆ ಸೋಂಕು ತಗುಲುವ ಸಾಧ್ಯತೆ ಇದೆ. ಒಂದುವೇಳೆ ಯಾವುದೇ ಕ್ರೀಡಾಪಟು ಶಿಬಿರದಿಂದ ಹೊರಗೆ ಹೋದರೆ, ಅವರಿಗೆ ಮತ್ತೆ ತರಬೇತಿ ನೀಡಲು ಅನುಮತಿಸುವುದಿಲ್ಲ’ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.