ADVERTISEMENT

ಅಖಿಲ ಭಾರತ ಅಂತರ ವಿವಿ ಅಥ್ಲೆಟಿಕ್ಸ್‌: ‘ಕೊನೆಹಳ್ಳಿ’ ಹುಡುಗಿಯ ಚಿನ್ನದ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 14 ಜನವರಿ 2026, 15:45 IST
Last Updated 14 ಜನವರಿ 2026, 15:45 IST
<div class="paragraphs"><p> ಹಾಫ್ ಮ್ಯಾರಥಾನ್‌ನ ಚಿನ್ನ ವಿಜೇತೆ ಭಾಗೀರಥಿ&nbsp;</p></div>

ಹಾಫ್ ಮ್ಯಾರಥಾನ್‌ನ ಚಿನ್ನ ವಿಜೇತೆ ಭಾಗೀರಥಿ 

   

ಮೂಡುಬಿದಿರೆ (ದಕ್ಷಿಣ ಕನ್ನಡ): ಭಾರತದ ಕೊನೆಯ ಹಳ್ಳಿ, ಉತ್ತರಾಖಂಡದ ಚಮೋಲಿ ಜಿಲ್ಲೆಯ ಮಾಣಾ ನಿವಾಸಿ ಕೆ.ಎಂ ಭಾಗೀರಥಿ ಅವರು ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ಅಥ್ಲೆಟಿಕ್ಸ್‌ನಲ್ಲಿ ಮಂಗಳೂರು ವಿವಿಗೆ ಚಿನ್ನ ಗೆದ್ದುಕೊಟ್ಟರು.

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಸಹಯೋಗದಲ್ಲಿ ರಾಜೀವಗಾಂಧಿ ಆರೋಗ್ಯ ವಿವಿ ಇಲ್ಲಿನ ಸ್ವರಾಜ್ಯ ಮೈದಾನದಲ್ಲಿ ಆಯೋಜಿಸಿರುವ ಕೂಟದ ಮೂರನೇ ದಿನವಾದ ಬುಧವಾರ ಹಾಫ್ ಮ್ಯಾರಥಾನ್‌ನ ಮಹಿಳೆಯರ ವಿಭಾಗದಲ್ಲಿ ಭಾಗೀರಥಿ  1ತಾಸು 21 ನಿಮಿಷ 49.95ಸೆಕೆಂಡುಗಳಲ್ಲಿ ಗುರಿ ತಲುಪಿದರು.

ADVERTISEMENT

‘ಡೆಲ್ಲಿ ಮ್ಯಾರಥಾನ್‌’ ಜಯಶಾಲಿ, ರಾಷ್ಟ್ರೀಯ ಚಾಂಪಿಯನ್ ಭಾಗೀರಥಿ ಅವರು ಚಂಡೀಗಢ, ಕಾಶ್ಮೀರ, ಅಮೃತಸರ, ಹೈದರಾಬಾದ್ ಮ್ಯಾರಥಾನ್‌ ವಿಜೇತೆಯೂ ಆಗಿದ್ದಾರೆ. ಭಾರತ–ಟಿಬೆಟ್‌ ಗಡಿ ಗ್ರಾಮದ ನಿವಾಸಿ ಭಾಗೀರಥಿ ದತ್ತು ಯೋಜನೆಯಡಿ ಕಳೆದ ವರ್ಷ ಮೂಡುಬಿದಿರೆಯ ಆಳ್ವಾಸ್ ಕಾಲೇಜು ಸೇರಿದ್ದರು. 3ನೇ ವಯಸ್ಸಿನಲ್ಲಿ ತಂದೆಯನ್ನು ಕಳೆದುಕೊಂಡ ಅವರಿಗೆ ಶಾಲೆಯಲ್ಲಿ ಬಿಸಿಯೂಟ ಬಡಿಸುವ ತಾಯಿಯೇ ಆಸರೆ.

‘ಬಡ ಕುಟುಂಬದಲ್ಲಿ ಭಾಗೀರಥಿ ಸೇರಿ ಐವರು ಮಕ್ಕಳನ್ನು ಸಾಕುವ ಜವಾಬ್ದಾರಿ ತಾಯಿಯ ಹೆಗಲ ಮೇಲಿದೆ. ಭಾಗೀರಥಿ ಸಾಧನೆಗಳೇ ಇಡೀ ಕುಟುಂಬಕ್ಕೆ ಈಗ ಸಂತಸ ತರುತ್ತಿರುವ ವಿಷಯ’ ಎಂದು ಕೋಚ್, ಅಲ್ಟ್ರಾ ಮ್ಯಾರಥಾನ್ ಅಥ್ಲೀಟ್‌ ಸುನಿಲ್ ಶರ್ಮಾ ‘ಪ್ರಜಾವಾಣಿ’ಗೆ ತಿಳಿಸಿದರು.

ಮಿಶ್ರ ರಿಲೆಯಲ್ಲಿ ಚಿನ್ನ ಗೆದ್ದ ಮಂಗಳೂರು ವಿವಿಯ ಆಕಾಶ್‌, ರೇಖಾ ಬಸಪ್ಪ, ಮನೀಷಾ ಮತ್ತು ಸಾಕೇತ್‌ 

ರಿಲೆಯಲ್ಲಿ ಪಾರಮ್ಯ: 

ಸಂಜೆ ನಡೆದ ಮಿಶ್ರ ರಿಲೆಯಲ್ಲಿ ಮಂಗಳೂರು ವಿವಿ ಪಾರಮ್ಯ ಮೆರೆಯಿತು. ಮೂರನೇ ಲೇನ್‌ನಲ್ಲಿ ಓಟ ಆರಂಭಿಸಿದ ಸಾಕೇತ್‌ ಅವರು ತಂದುಕೊಟ್ಟ ಅಮೋಘ ಮುನ್ನಡೆಯನ್ನು ಉಳಿಸಿಕೊಂಡು ರೇಖಾ ಬಸಪ್ಪ ಮತ್ತು ಆಕಾಶ್‌ ಮುನ್ನುಗ್ಗಿದರು. ಕೊನೆಯ ಲ್ಯಾಪ್‌ನಲ್ಲಿ ಪಂಬಾಬಿ ವಿವಿ ಓಟಗಾರ್ತಿ ಭಾರಿ ಪೈಪೋಟಿ ನೀಡಿದರು. ಅಂತಿಮ 100 ಮೀಟರ್‌ನಲ್ಲಿ ಮಿಂಚು ಹರಿಸಿದ ಮನೀಶಾ 4 ಸೆಮಿಸೆಮಿಸೆಕೆಂಡುಗಳಲ್ಲಿ ರೇಸ್ ಗೆದ್ದರು.

ಮೂರನೇ ದಿನದ ಅಂತ್ಯಕ್ಕೆ ಮಂಗಳೂರು ವಿವಿ 74 ಪಾಯಿಂಟ್‌ಗಳೊಂದಿಗೆ ಮುನ್ನಡೆಯಲ್ಲಿದೆ. ಮದ್ರಾಸ್ ವಿವಿ (60) ಮತ್ತು ಚಂಡೀಗಢ ವಿವಿ (57) ಕ್ರಮವಾಗಿ 2 ಮತ್ತು 3ನೇ ಸ್ಥಾನದಲ್ಲಿವೆ. 

3ನೇ ದಿನದ ಫಲಿತಾಂಶಗಳು: 

ಪುರುಷರು: 400ಮೀ ಓಟ: ಅಜಯ್‌ ಡಿ (ಮದ್ರಾಸ್‌)–1. ಕಾಲ: 46.83ಸೆ, ತರಣ್‌ದೀಪ್ ಸಿಂಗ್ (ಪಂಜಾಬಿ)–2, ಆಕಾಶ್ ರಾಜ್‌ (ಮಂಗಳೂರು)–3; ಹಾಫ್‌ ಮ್ಯಾರಥಾನ್‌: ರವಿ ಕುಮಾರ್ ಪಾಲ್ (ಲಖನೌ)–1. ಕಾಲ: 1ತಾಸು 6 ನಿಮಿಷ 52.42 ಸೆಕೆಂಡು, ಪ್ರವೀಣ್‌ಬಾಬನ್ ಕಾಂಬ್ಳೆ (ಶಿವಾಜಿ)–2, ಸತೀಶ್ ಕುಮಾರ್ ವರ್ಮಾ (ವೀರ್ ಬಹದ್ದೂರ್‌)–3; 3000 ಮೀ ಸ್ಟೀಪಲ್‌ ಚೇಸ್‌: ರಣವೀರ್ ಸಿಂಗ್‌ (ಸ್ವರ್ಣಿಮ್ ಗುಜರಾತ್‌)–1. ಕಾಲ: 8ನಿ 45.94ಸೆ, ಮನೋಜ್ ಕುಮಾರ್ (ಕ್ಯಾಲಿಕಟ್‌)–2, ನವರತನ್‌ (ವೀರ್ ಬಹದ್ದೂರ್ ಸಿಂಗ್‌)–3; ಟ್ರಿಪಲ್ ಜಂಪ್‌: ಮೋಹನ್‌ ರಾಜ್‌ (ಮದ್ರಾಸ್‌)–1. ಅಂತರ: 16.09ಮೀ, ವಿಕಾಸ್ ಕಣ್ಣನ್‌ (ಮದುರೈ ಕಾಮರಾಜ್‌)–2, ಡೊನಾಲ್ಡ್‌ ಎಂ (ಕ್ಯಾಲಿಕಟ್‌)–3; ಡಿಸ್ಕಸ್ ಥ್ರೋ: ಉಜ್ವಲ್ ಚೌಧರಿ (ಮಂಗಳೂರು)–1. ದೂರ: 54.16ಮೀ, ಋತಿಕ್‌ (ಚಂಡೀಗಢ)–2, ನಾಗೇಂದ್ರ ಅಣ್ಣಪ್ಪ (ಮಂಗಳೂರು)–3.

ನಾಗೇಂದ್ರ ಅಣ್ಣಪ್ಪ 

ಮಹಿಳೆಯರು: 400ಮೀ ಓಟ: ಪ್ರಿಯಾ ಠಾಕೂರ್‌ (ಚಂಡೀಗಢ)–1. ಕಾಲ: 53.33ಸೆ, ಅಂಜಲಿ (ಎಂ.ಡಿ, ರೋಹ್ಟಕ್‌)–2, ಆಯುಷಿ (ಮಾ ಶಾಕಾಂಬರಿ)–3; ಹಾಫ್ ಮ್ಯಾರಥಾನ್‌: ಕೆ.ಎಂ ಭಾಗೀರಥಿ (ಮಂಗಳೂರು)–1. ಕಾಲ 1ತಾಸು 21ನಿ 49.95ಸೆಕೆಂಡು, ಮಾಯಾ (ಸೋಬನ್‌ಸಿಂಗ್‌)–2, ಗಂಗಾ  (ಚೌಧರಿ ಚರಣ್‌ಸಿಂಗ್‌)–3; ಜಾವೆಲಿನ್ ಥ್ರೋ: ದೀಪಿಕಾ (ಚಂಡೀಗಢ)–1. ದೂರ: 54.64ಮೀ, ಜ್ಯೋತಿ (ಗುರುಕಾಶಿ)–2, ಪೂನಂ (ಚಂಡೀಗಢ)–3; ಡೆಕಾಥ್ಲಾನ್‌: ಮನೋಜ್ ಕುಮಾರ್‌ (ಮದ್ರಾಸ್‌)–1. ಪಾಯಿಂಟ್ಸ್‌ 6872, ಹರೀಶ್‌ (ಜೈನ್ ಬೆಂಗಳೂರು)–2, ಚಮನ್‌ಜ್ಯೋತ್ ಸಿಂಗ್ (ಮಂಗಳೂರು)–3.
4x400 ಮೀ ಮಿಶ್ರ ರಿಲೆ: ಮಂಗಳೂರು ವಿವಿ–1. ಕಾಲ: 3ನಿಮಿಷ 24.83ಸೆ, ಪಂಜಾಬ್ ವಿವಿ–2, ಗುರುನಾನಕ್ ದೇವ್‌ ವಿವಿ–3.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.