ADVERTISEMENT

ಹಾಕಿಯಲ್ಲಿ ಕೊಡಗು, ಹಾಸನ ಚಾಂಪಿಯನ್

ಮಿನಿ ಒಲಿಂಪಿಕ್ಸ್‌: ಹ್ಯಾಂಡ್‌ಬಾಲ್‌ನಲ್ಲಿ ಹಾವೇರಿ, ತುಮಕೂರು ತಂಡಗಳಿಗೆ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 22 ಮೇ 2022, 13:46 IST
Last Updated 22 ಮೇ 2022, 13:46 IST
ವಿವಿಧ ಕ್ರೀಡೆಗಳಲ್ಲಿ ಚಾಂಪಿಯನ್ ಆದ ತಂಡದವರು ಸಮಾರೋಪ ಸಮಾರಂಭದ ನಂತರ ಒಟ್ಟಾಗಿ ಸಂಭ್ರಮಿಸಿದರು –ಪ್ರಜಾವಾಣಿ ಚಿತ್ರ
ವಿವಿಧ ಕ್ರೀಡೆಗಳಲ್ಲಿ ಚಾಂಪಿಯನ್ ಆದ ತಂಡದವರು ಸಮಾರೋಪ ಸಮಾರಂಭದ ನಂತರ ಒಟ್ಟಾಗಿ ಸಂಭ್ರಮಿಸಿದರು –ಪ್ರಜಾವಾಣಿ ಚಿತ್ರ   

ಬೆಂಗಳೂರು: ಕೊಡಗು ಮತ್ತು ಹಾಸನ ಜಿಲ್ಲಾ ತಂಡಗಳು ರಾಜ್ಯ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯು ಕರ್ನಾಟಕ ಒಲಿಂಪಿಕ್ ಸಂಸ್ಥೆ (ಕೆಒಎ) ಸಹಯೋಗದಲ್ಲಿ ಆಯೋಜಿಸಿದ್ದ ರಾಜ್ಯ ಮಿನಿ ಒಲಿಂಪಿಕ್ಸ್‌ನ ಹಾಕಿಯಲ್ಲಿ ಕ್ರಮವಾಗಿ ಬಾಲಕ ಮತ್ತು ಬಾಲಕಿಯರ ವಿಭಾಗದ ಚಾಂಪಿಯನ್ ಪಟ್ಟ ತಮ್ಮದಾಗಿಸಿಕೊಂಡವು.

ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಬಾಲಕರ ವಿಭಾಗದ ಫೈನಲ್‌ನಲ್ಲಿ ಕೊಡಗು ತಂಡ ಹಾಸನವನ್ನು 3–0ಯಿಂದ ಮಣಿಸಿತು. ದೀಕ್ಷಿತ್ ಎಚ್‌.ಎನ್‌ ಎರಡು ಗೋಲುಗಳೊಂದಿಗೆ ಮಿಂಚಿದರೆ ಜಶನ್ ತಿಮ್ಮಯ್ಯ ಒಂದು ಗೋಲು ಗಳಿಸಿದರು.

ಬಾಲಕಿಯರ ವಿಭಾಗದ ರೌಂಡ್ ರಾಬಿನ್ ಮಾದರಿಯಲ್ಲಿ ಗರಿಷ್ಠ ಪಾಯಿಂಟ್ ಗಳಿಸಿದ ಹಾಸನ ತಂಡವನ್ನು ವಿಜಯಿ ಎಂದು ಘೋಷಿಸಲಾಯಿತು. ಬೆಳಗಾವಿ ಜಿಲ್ಲಾ ತಂಡ ರನ್ನರ್ ಅಪ್ ಆಯಿತು. ಹಾಸನ 15 ಮತ್ತು ಬೆಳಗಾವಿ 12 ಪಾಯಿಂಟ್‌ ಕಲೆ ಹಾಕಿತು.

ADVERTISEMENT

ರೌಂಡ್ ರಾಬಿನ್ ಹಂತದ ಕೊನೆಯ ಪಂದ್ಯದಲ್ಲಿ ಹಾಸನ 5–0ಯಿಂದ ಕೊಡಗು ವಿರುದ್ಧ ಜಯ ಗಳಿಸಿತ್ತು. ಯಶಸ್ವಿನಿ, ಪ್ರಣೀತ, ಅಕ್ಷಿತ, ಯಶಸ್ವಿ ಮತ್ತು ಭಾವನ ಗೋಲು ಗಳಿಸಿದರು. ಬೆಳಗಾವಿ ತಂಡ ಕೊನೆಯ ತನ್ನ ಕೊನೆಯ ಪಂದ್ಯದಲ್ಲಿ ಬಳ್ಳಾರಿ ವಿರುದ್ಧ 11–0ಯಿಂದ ಜಯ ಗಳಿಸಿತು. ವೈಷ್ಣವಿ 5 ಗೋಲುಗಳೊಂದಿಗೆ ಮಿಂಚಿದರೆ ಮಾಯವ್ವ 3 ಬಾರಿ ಚೆಂಡನ್ನು ಗುರಿ ಮುಟ್ಟಿಸಿದರು. ತೃಪ್ತಿ ಕಾಂಬ್ಳೆ 2 ಮತ್ತು ಚೈತ್ರ 1 ಗೋಲು ಗಳಿಸಿದರು.

ಹ್ಯಾಂಡ್‌ಬಾಲ್‌: ಹಾವೇರಿ, ತುಮಕೂರು ಪಾರಮ್ಯ

ಬಾಲಕರ ಹ್ಯಾಂಡ್‌ಬಾಲ್‌ ಫೈನಲ್‌ನಲ್ಲಿ ಹಾವೇರಿ ತಂಡ ಚಿಕ್ಕಮಗಳೂರು ವಿರುದ್ಧ ಜಯ ಗಳಿಸಿತು. ಬಾಲಕಿಯರ ವಿಭಾಗದ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ತುಮಕೂರು ತಂಡ ದಾವಣಗೆರೆ ವಿರುದ್ಧ ಜಯ ಗಳಿಸಿತು. ಬಾಲಕರ ವಿಭಾಗದಲ್ಲಿ ಚಿತ್ರದುರ್ಗ ಮತ್ತು ಬಾಲಕಿಯರ ವಿಭಾಗದಲ್ಲಿ ಬೆಳಗಾವಿ ಮೂರನೇ ಸ್ಥಾನ ಗಳಿಸಿತು.

ಸಮಾರೋಪ ಸಮಾರಂಭ

ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಭಾನುವಾರ ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಕೆ.ಸಿ ನಾರಾಯಣಗೌಡ ಪ್ರಶಸ್ತಿಗಳನ್ನು ವಿತರಿಸಿದರು. ಸಚಿವ ಮುನಿರತ್ನ, ಕರ್ನಾಟಕ ಒಲಿಂಪಿಕ್ ಸಂಸ್ಥೆ ಅಧ್ಯಕ್ಷ ಕೆ. ಗೋವಿಂದರಾಜ್, ಸರ್ಕಾರದ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಟಾರಿಯ, ಕ್ರೀಡಾ ಇಲಾಖೆ ಆಯುಕ್ತ ಗೋಪಾಲಕೃಷ್ಣ ಮತ್ತಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.