ADVERTISEMENT

ಚಿಂಕಿ ಚಿನ್ನದ ಒಡತಿ

ಐಎಸ್‌ಎಸ್‌ಎಫ್‌ ಶೂಟಿಂಗ್‌ ವಿಶ್ವಕಪ್‌: ತೋಮರ್‌ ಪಾರಮ್ಯ

ಪಿಟಿಐ
Published 24 ಮಾರ್ಚ್ 2021, 12:38 IST
Last Updated 24 ಮಾರ್ಚ್ 2021, 12:38 IST
ಮಹಿಳೆಯರ 25 ಮೀ. ಪಿಸ್ತೂಲ್ ವಿಭಾಗದಲ್ಲಿ ಚಿನ್ನ ಗೆದ್ದ ಚಿಂಕಿ ಯಾದವ್‌ (ಮಧ್ಯೆ), ಬೆಳ್ಳಿ ಪದಕ ವಿಜೇತ ರಾಹಿ ಸರ್ನೋಬತ್ (ಎಡದಿಂದ ಎರಡನೆಯವರು) ಹಾಗೂ ಕಂಚು ಗೆದ್ದ ಮನು ಭಾಕರ್‌. ಕೇಂದ್ರ ಕ್ರೀಡಾ ಸಚಿವ ಕಿರಣ್ ರಿಜಿಜು ಇದ್ದಾರೆ– ಎಎಫ್‌ಪಿ ಚಿತ್ರ
ಮಹಿಳೆಯರ 25 ಮೀ. ಪಿಸ್ತೂಲ್ ವಿಭಾಗದಲ್ಲಿ ಚಿನ್ನ ಗೆದ್ದ ಚಿಂಕಿ ಯಾದವ್‌ (ಮಧ್ಯೆ), ಬೆಳ್ಳಿ ಪದಕ ವಿಜೇತ ರಾಹಿ ಸರ್ನೋಬತ್ (ಎಡದಿಂದ ಎರಡನೆಯವರು) ಹಾಗೂ ಕಂಚು ಗೆದ್ದ ಮನು ಭಾಕರ್‌. ಕೇಂದ್ರ ಕ್ರೀಡಾ ಸಚಿವ ಕಿರಣ್ ರಿಜಿಜು ಇದ್ದಾರೆ– ಎಎಫ್‌ಪಿ ಚಿತ್ರ   

ನವದೆಹಲಿ: ಸಹ ಶೂಟರ್‌ಗಳಾದ ರಾಹಿ ಸರ್ನೋಬತ್‌ ಹಾಗೂ ಮನು ಭಾಕರ್ ಅವರ ಸವಾಲು ಮೀರಿದ ಭಾರತದ ಚಿಂಕಿ ಯಾದವ್‌ ಐಎಸ್‌ಎಸ್ಎಫ್ ವಿಶ್ವಕಪ್‌ನಲ್ಲಿ ಚಿನ್ನದ ಪದಕಕ್ಕೆ ಮುತ್ತಿಟ್ಟರು. ಇಲ್ಲಿಯ ಕರ್ಣಿಸಿಂಗ್‌ ಶೂಟಿಂಗ್‌ ರೇಂಜ್‌ನಲ್ಲಿ ನಡೆಯುತ್ತಿರುವ ಟೂರ್ನಿಯಲ್ಲಿ ಬುಧವಾರ 25 ಮೀಟರ್‌ ಪಿಸ್ತೂಲ್ ವಿಭಾಗದಲ್ಲಿ ಅವರು ಅಗ್ರಸ್ಥಾನ ಗಳಿಸಿದರು.

ಫೈನಲ್ಸ್ ಹಣಾಹಣಿಯಲ್ಲಿ ಚಿಂಕಿ ಹಾಗೂ ಸರ್ನೋಬತ್ ತಲಾ 32 ಪಾಯಿಂಟ್ಸ್ ಗಳಿಸಿದ್ದರು. ಇದರಿಂದಾಗಿ ಶೂಟ್‌ ಆಫ್‌ ಮೊರೆ ಹೋಗಲಾಯಿತು. ಇಲ್ಲಿ 4–3ರಿಂದ ಗೆದ್ದ ಚಿಂಕಿ ಚಿನ್ನದ ಪದಕದ ಒಡತಿಯಾದರು. 28 ಪಾಯಿಂಟ್ಸ್ ಕಲೆಹಾಕಿದ ಮನು ಭಾಕರ್ ಕಂಚಿನ ಪದಕ ತಮ್ಮದಾಗಿಸಿಕೊಂಡರು.

ಭಾರತದ ಈ ಮೂವರು ಶೂಟರ್‌ಗಳು ಈಗಾಗಲೇ ಟೋಕಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಗಿಟ್ಟಿಸಿದ್ದಾರೆ. ಚಿಂಕಿ ಅವರು 2019ರಲ್ಲಿ ದೋಹಾದಲ್ಲಿ ನಡೆದ ಏಷ್ಯನ್ ಚಾಂಪಿಯನ್‌ಷಿಪ್‌ನಲ್ಲಿ 14 ಪಾಯಿಂಟ್ಸ್ ಗಳಿಸಿ, ಎರಡನೇ ಸ್ಥಾನ ಪಡೆಯುವ ಮೂಲಕ ಈ ಸಾಧನೆ ಮಾಡಿದ್ದರು. ಅದೇ ಕೂಟದಲ್ಲಿ ಮನು 13 ಪಾಯಿಂಟ್ಸ್ ಸಂಗ್ರಹಿಸಿ ಟೋಕಿಯೊ ಟಿಕೆಟ್‌ ಪಡೆದಿದ್ದರು.

ADVERTISEMENT

ತೋಮರ್‌ ಪಾರಮ್ಯ: 50 ಮೀ. ರೈಫಲ್‌ 3 ಪೊಸಿಷನ್ಸ್‌ನಲ್ಲಿ ಯುವ ಶೂಟರ್‌ ಐಶ್ವರಿಪ್ರತಾಪ್ ತೋಮರ್‌ ಚಿನ್ನದ ಪದಕಕ್ಕೆ ಗುರಿಯಿಟ್ಟರು. ಭೋಪಾಲ್‌ನ 20 ವರ್ಷದ ತೋಮರ್‌ ಫೈನಲ್ಸ್ ಹಣಾಹಣಿಯಲ್ಲಿ 462.5 ಪಾಯಿಂಟ್ಸ್ ಕಲೆಹಾಕಿದರು. ಬೆಳ್ಳಿ ಪದಕ ಗೆದ್ದ ಹಂಗರಿಯ ತಾರಾ ಶೂಟರ್‌ ಇಸ್ತವಾನ್ ಪೆನಿ 461.6 ಮತ್ತು ಕಂಚು ವಿಜೇತ ಡೆನ್ಮಾರ್ಕ್‌ನ ಸ್ಟೆಫನ್ ಓಲ್ಸೆನ್‌ 450.9 ಪಾಯಿಂಟ್ಸ್ ಗಳಿಸಿದರು.

ಈ ವಿಭಾಗದ ಫೈನಲ್ಸ್‌ಗೆ ಅರ್ಹತೆ ಗಿಟ್ಟಿಸಿದ್ದ ಭಾರತದ ಸಂಜೀವ್ ರಜಪೂತ್ ಹಾಗೂ ನೀರಜ್ ಕುಮಾರ್ ಕ್ರಮವಾಗಿ ಆರು ಮತ್ತು ಎಂಟನೇ ಸ್ಥಾನ ಗಳಿಸಿದರು.

ತೋಮರ್ ಅವರು 2019ರಲ್ಲಿ ನಡೆದ ಏಷ್ಯನ್ ಶೂಟಿಂಗ್ ಚಾಂಪಿಯನ್‌ಷಿಪ್‌ನ 50 ಮೀ. ರೈಫಲ್‌ 3 ಪೊಸಿಷನ್ಸ್‌ನಲ್ಲಿ ಕಂಚಿನ ಪದಕ ಗೆದ್ದು ಒಲಿಂಪಿಕ್ ಕೂಟಕ್ಕೆ ಅರ್ಹತೆ ಪಡೆದಿದ್ದಾರೆ.

ಮೂರು ದಿನಗಳ ತೋಮರ್ ಅವರು ದೀಪಕ್ ಕುಮಾರ್ ಹಾಗೂ ಪಂಕಜ್ ಕುಮಾರ್ ಜೊತೆಗೂಡಿ ಪುರುಷರ ತಂಡ ವಿಭಾಗದ ಏರ್ ರೈಫಲ್ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಕೊರಳಿಗೇರಿಸಿಕೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.