ADVERTISEMENT

ಶ್ರೀಕಾಂತ್‌ ಮೇಲೆ ನಿರೀಕ್ಷೆ

ಇಂದಿನಿಂದ ಕೊರಿಯಾ ಮಾಸ್ಟರ್ಸ್ ಬ್ಯಾಡ್ಮಿಂಟನ್‌: ಸೈನಾ ಅಲಭ್ಯ

ಪಿಟಿಐ
Published 18 ನವೆಂಬರ್ 2019, 19:53 IST
Last Updated 18 ನವೆಂಬರ್ 2019, 19:53 IST
ಕಿದಂಬಿ ಶ್ರೀಕಾಂತ್‌–ಎಎಫ್‌ಪಿ ಚಿತ್ರ
ಕಿದಂಬಿ ಶ್ರೀಕಾಂತ್‌–ಎಎಫ್‌ಪಿ ಚಿತ್ರ   

ಗ್ವಾಂಗ್‌ಜು (ಕೊರಿಯಾ): ಹಾಂಗ್‌ಕಾಂಗ್ ಓಪನ್ ಟೂರ್ನಿಯಲ್ಲಿಭಾರತದ ಕಿದಂಬಿ ಶ್ರೀಕಾಂತ್, ಲಯಕ್ಕೆ ಮರಳಿದ್ದರು. ಮಂಗಳವಾರ ಆರಂಭವಾಗುವ ಕೊರಿಯಾ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿಯಲ್ಲೂ ಅವರು ಅದೇ ರೀತಿಯ ಸಾಮರ್ಥ್ಯ ತೋರುವ ವಿಶ್ವಾಸದಲ್ಲಿದ್ದಾರೆ. ಈ ಟೂರ್ನಿಯಲ್ಲಿ ಸೈನಾ ನೆಹ್ವಾಲ್‌ ಆಡುತ್ತಿಲ್ಲ.

ಈ ವರ್ಷದ ಇಂಡಿಯಾ ಓಪನ್‌ ಟೂರ್ನಿಯಲ್ಲಿ ರನ್ನರ್‌ಅಪ್‌ ಆಗಿದ್ದ ಶ್ರೀಕಾಂತ್‌, ಆ ಬಳಿಕದ ಟೂರ್ನಿಗಳಲ್ಲಿ ನಿರಾಸೆ ಕಂಡಿದ್ದೇ ಹೆಚ್ಚು. ಆದರೆ ಹೋದ ವಾರ ಕೊನೆಗೊಂಡ ಹಾಂಗ್‌ಕಾಂಗ್‌ ಓಪನ್‌ ಟೂರ್ನಿಯಲ್ಲಿ ನಾಲ್ಕರ ಘಟ್ಟಕ್ಕೆ ಲಗ್ಗೆಯಿಟ್ಟು ಆತ್ಮವಿಶ್ವಾಸ ಹೆಚ್ಚಿಸಿಕೊಂಡಿದ್ದರು.

ಕೊರಿಯಾ ಓಪನ್‌ ಪುರುಷರ ಸಿಂಗಲ್ಸ್ ಮೊದಲ ಸುತ್ತಿನಲ್ಲಿ ಅವರು ಹಾಂಗ್‌ಕಾಂಗ್‌ನ ವಾಂಗ್‌ ವಿಂಗ್‌ ಕಿ ವಿನ್ಸೆಂಟ್‌ ಎದುರು ಆಡಲಿದ್ದಾರೆ. ವಿನ್ಸೆಂಟ್‌ ವಿರುದ್ಧ ಈವರೆಗೆ 13 ಪಂದ್ಯಗಳನ್ನು ಆಡಿರುವ ಶ್ರೀಕಾಂತ್‌, 10 ಪಂದ್ಯಗಳಲ್ಲಿ ಜಯದ ನಗೆ ಬೀರಿದ್ದಾರೆ.

ADVERTISEMENT

ಮಹಿಳಾ ಸಿಂಗಲ್ಸ್ ವಿಭಾಗದಲ್ಲಿ ಭಾರತದ ಪ್ರಮುಖ ಆಟಗಾರ್ತಿಯಾಗಿರುವ ಸೈನಾ ಈ ಟೂರ್ನಿಯಲ್ಲಿ ಕಣಕ್ಕಿಳಿಯದಿರಲು ನಿರ್ಧರಿಸಿದ್ದಾರೆ. ಆದರೆ ಅವರು ಮುಂದಿನ ವಾರ ಆರಂಭವಾಗುವ ಸೈಯದ್‌ ಮೋದಿ ಟೂರ್ನಿಯಲ್ಲಿ ಆಡುವ ಸಾಧ್ಯತೆಯಿದೆ.

ಸೈನಾ ಅವರ ಅಲಭ್ಯತೆಯೊಂದಿಗೆ ಮಹಿಳಾ ಸಿಂಗಲ್ಸ್‌ನಲ್ಲಿ ಭಾರತದ ಯಾವ ಆಟಗಾರ್ತಿಯರೂ ಆಡುತ್ತಿಲ್ಲವಾಗಿದೆ.

ಪುರುಷರ ಸಿಂಗಲ್ಸ್ ಮೊದಲ ಸುತ್ತಿನಲ್ಲಿ ಸಮೀರ್‌ ವರ್ಮಾ ಅವರಿಗೆ ಚೀನಾದ ಶಿ ಯು ಕಿ ಎದುರಾಗಲಿದ್ದರೆ, ಸಮೀರ್‌ ಸಹೋದರ ಸೌರಭ್ ಅರ್ಹತಾ ಸುತ್ತಿನಲ್ಲಿ ಆಡಲಿದ್ದಾರೆ. ಹೋದ ವರ್ಷ ಸಾರ್‌ಲೊರ್‌ಲಕ್ಷ್‌ ಓಪನ್‌ ಪ್ರಶಸ್ತಿ ವಿಜೇತ ಶುಭಾಂಕರ್‌ ಡೇ, ಮೊದಲ ಸುತ್ತಿನ ಹಣಾಹಣಿಯಲ್ಲಿ ಒಲಿಂಪಿಕ್ಸ್ ಚಾಂಪಿಯನ್‌ ಹಾಗೂ ಎರಡನೇ ಶ್ರೇಯಾಂಕದ ಚೀನಾದ ಚೆನ್‌ ಲಾಂಗ್‌ ಎದುರು ಸೆಣಸಲಿದ್ದಾರೆ.

ಡಬಲ್ಸ್ ವಿಭಾಗದಲ್ಲೂ ಭಾರತದ ಯಾವುದೇಆಟಗಾರರು ಟೂರ್ನಿಯಲ್ಲಿ ಆಡುತ್ತಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.