ADVERTISEMENT

ಕೆಪಿಎಲ್‌: ವಾರಿಯರ್ಸ್‌ಗೆ ಒಂದು ರನ್ನಿನ ರೋಚಕ ಜಯ

ಮಹಮ್ಮದ್ ನೂಮಾನ್
Published 31 ಆಗಸ್ಟ್ 2018, 18:03 IST
Last Updated 31 ಆಗಸ್ಟ್ 2018, 18:03 IST
ಶೋಯೆಬ್‌ ಮ್ಯಾನೇಜರ್‌ ಬ್ಯಾಟಿಂಗ್‌ ವೈಖರಿ –ಪ್ರಜಾವಾಣಿ ಚಿತ್ರ: ಬಿ.ಆರ್‌.ಸವಿತಾ
ಶೋಯೆಬ್‌ ಮ್ಯಾನೇಜರ್‌ ಬ್ಯಾಟಿಂಗ್‌ ವೈಖರಿ –ಪ್ರಜಾವಾಣಿ ಚಿತ್ರ: ಬಿ.ಆರ್‌.ಸವಿತಾ   

ಮೈಸೂರು: ಟ್ವೆಂಟಿ–20 ಕ್ರಿಕೆಟ್‌ನ ಸಂಪೂರ್ಣ ಸೌಂದರ್ಯ ಹೊರಹೊಮ್ಮಿದ ಪಂದ್ಯದಲ್ಲಿ ಮೈಸೂರು ವಾರಿಯರ್ಸ್‌ಗೆ ಒಂದು ರನ್ನಿನ ರೋಚಕ ಗೆಲುವು. ಅಂತಿಮ ಎಸೆತದವರೆಗೆ ಕೆಚ್ಚೆದೆಯಿಂದ ಹೋರಾಡಿದ ಬೆಳಗಾವಿ ಪ್ಯಾಂಥರ್ಸ್‌ಗೆ ಎದುರಾಗಿದ್ದು ನಿರಾಸೆ ಮಾತ್ರ.

ಗಂಗೋತ್ರಿ ಗ್ಲೇಡ್ಸ್‌ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಕೆಪಿಎಲ್‌ ಪಂದ್ಯದಲ್ಲಿ ವಾರಿಯರ್ಸ್‌ ನೀಡಿದ್ದ 202 ರನ್‌ಗಳ ಗುರಿ ಬೆನ್ನಟ್ಟಿದ ಪ್ಯಾಂಥರ್ಸ್ 8 ವಿಕೆಟ್‌ಗೆ 200 ರನ್‌ ಪೇರಿಸಿ ಸೋಲೊಪ್ಪಿಕೊಂಡಿತು. ಮೂರನೇ ಜಯ ಸಾಧಿಸಿದ ಜೆ.ಸುಚಿತ್‌ ಬಳಗ ಆರು ಪಾಯಿಂಟ್‌ಗಳೊಂದಿಗೆ ಮೂರನೇ ಸ್ಥಾನಕ್ಕೇರಿತು.

ಭಾರಿ ಮೊತ್ತ ಬೆನ್ನಟ್ಟಿದ ಪ್ಯಾಂಥರ್ಸ್‌ ತಂಡಕ್ಕೆ ದೀಕ್ಷಾನ್ಶು ನೇಗಿ (60 ರನ್‌, 33ಎ., 3ಬೌಂ, 5ಸಿ.) ಬಿರುಸಿನ ಆರಂಭ ನೀಡಿದರು. ಸ್ಟಾಲಿನ್‌ ಹೂವರ್ (24 ರನ್‌, 24ಎಸೆತ) ಜತೆ ಮೊದಲ ವಿಕೆಟ್‌ಗೆ 8 ಓವರ್‌ಗಳಲ್ಲಿ 74 ರನ್‌ ಸೇರಿಸಿದರು.

ADVERTISEMENT

ತಂಡದ ಮಧ್ಯಮ ಕ್ರಮಾಂಕ ವೈಫಲ್ಯ ಅನುಭವಿಸಿತು. 15ನೇ ಓವರ್‌ ಕೊನೆಗೊಂಡಾಗ 129 ರನ್‌ಗಳಿಗೆ ಆರು ವಿಕೆಟ್‌ಗಳನ್ನು ಕಳೆದುಕೊಂಡಿತು. ಆದರೆ ಎಂ.ನಿಧೀಶ್ (ಔಟಾಗದೆ 44, 19ಎಸೆತ, 2ಬೌಂ., 4ಸಿ.) ಮತ್ತು ಅಕ್ಷಯ್‌ ಬಲ್ಲಾಳ್‌ (21, 9ಎಸೆತ) ಏಳನೇ ವಿಕೆಟ್‌ಗೆ 20 ಎಸೆತಗಳಲ್ಲಿ 54 ರನ್‌ ಜತೆಯಾಟ ನೀಡಿದರು.

ಕೊನೆಯ ಎರಡು ಓವರ್‌ಗಳಲ್ಲಿ ಜಯಕ್ಕೆ 20 ರನ್‌ಗಳು ಬೇಕಿದ್ದವು. 19ನೇ ಓವರ್‌ನಲ್ಲಿ ವೈಶಾಖ್‌ ವಿಜಯಕುಮಾರ್ ಐದು ರನ್‌ ಬಿಟ್ಟುಕೊಟ್ಟು ಎರಡು ವಿಕೆಟ್‌ ಪಡೆದರು. ಪ್ರತೀಕ್‌ ಜೈನ್‌ ಬೌಲ್‌ ಮಾಡಿದ ಕೊನೆಯ ಓವರ್‌ನ ಅಂತಿಮ ಎಸೆತದಲ್ಲಿ 4 ರನ್‌ಗಳು ಬೇಕಿದ್ದವು. ಪ್ಯಾಂಥರ್ಸ್‌ ಕೇವಲ ಎರಡು ರನ್‌ಗಳಿಸಲಷ್ಟೇ ಶಕ್ತವಾಯಿತು.

ಶೋಯೆಬ್‌ ಮಿಂಚು: ಮೊದಲು ಬ್ಯಾಟ್‌ ಮಾಡಿದ ವಾರಿಯರ್ಸ್‌ಗೆ ಅರ್ಜುನ್‌ ಹೊಯ್ಸಳ (37 ರನ್, 36ಎ,, 4ಬೌಂ) ಮತ್ತು ರಾಜು ಭಟ್ಕಳ್ (31, 29ಎಸೆತ) ಉತ್ತಮ ಆರಂಭ ನೀಡಿದರೆ,ಬಳಿಕ ಶೋಯೆಬ್‌ ಮ್ಯಾನೇಜರ್ (56, 24ಎಸೆತ, 7ಬೌಂ, 3ಸಿ.) ಹಾಗೂ ಅಮಿತ್‌ ವರ್ಮಾ (ಔಟಾಗದೆ 43, 22ಎಸೆತ) ಮಿಂಚು ಹರಿಸಿದರು.

ಸಂಕ್ಷಿಪ್ತ ಸ್ಕೋರ್: ಮೈಸೂರು ವಾರಿಯರ್ಸ್ 20 ಓವರ್‌ಗಳಲ್ಲಿ 4 ವಿಕೆಟ್‌ಗೆ 201 (ಅರ್ಜುನ್‌ ಹೊಯ್ಸಳ 37,ರಾಜು ಭಟ್ಕಳ್ 31,ಅಮಿತ್‌ ವರ್ಮಾ ಔಟಾಗದೆ 43,ಶೋಯೆಬ್‌ ಮ್ಯಾನೇಜರ್ 56,ಶುಭಾಂಗ್ ಹೆಗ್ಡೆ 38ಕ್ಕೆ 1,ಎಸ್‌.ಪ್ರಶಾಂತ್ 14ಕ್ಕೆ 1,ಡಿ.ಅವಿನಾಶ್ 39ಕ್ಕೆ 1)

ಬೆಳಗಾವಿ ಪ್ಯಾಂಥರ್ಸ್‌: 20 ಓವರ್‌ಗಳಲ್ಲಿ 8 ವಿಕೆಟ್‌ಗೆ 200(ದೀಕ್ಷಾನ್ಶು ನೇಗಿ 60,ಸ್ಟಾಲಿನ್‌ ಹೂವರ್ 24,ಎಂ.ನಿಧೀಶ್‌ ಔಟಾಗದೆ 44,ಅಕ್ಷಯ್‌ ಬಲ್ಲಾಳ್‌ 21,ವೈಶಾಖ್‌ ವಿಜಯಕುಮಾರ್ 30ಕ್ಕೆ 2,ಅಮಿತ್‌ ವರ್ಮಾ 29ಕ್ಕೆ 2)

ಫಲಿತಾಂಶ: ವಾರಿಯರ್ಸ್‌ಗೆ 1 ರನ್‌ ಜಯ
ಪಂದ್ಯಶ್ರೇಷ್ಠ: ಶೋಯೆಬ್‌ ಮ್ಯಾನೇಜರ್
**
ಇಂದಿನ ಪಂದ್ಯಗಳು
ಬಿಜಾಪುರ ಬುಲ್ಸ್– ಮೈಸೂರು ವಾರಿಯರ್ಸ್
ಆರಂಭ: ಮಧ್ಯಾಹ್ನ 2
*
ಹುಬ್ಬಳ್ಳಿ ಟೈಗರ್ಸ್– ಬೆಳಗಾವಿ ಪ್ಯಾಂಥರ್ಸ್
ಆರಂಭ: ಸಂಜೆ 6.30
ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌ 2
**
ಆರು ಓವರ್‌ಗಳಲ್ಲಿ 99 ರನ್‌!
ಶೋಯೆಬ್‌ ಮತ್ತು ಅಮಿತ್‌ ಅಬ್ಬರದ ಆಟದಿಂದ ವಾರಿಯರ್ಸ್ ತಂಡ ಕೊನೆಯ ಆರು ಓವರ್‌ಗಳಲ್ಲಿ 16.5ರ ಸರಾಸರಿಯಲ್ಲಿ 99 ರನ್‌ ಕಲೆಹಾಕಿತು. 14 ಓವರ್‌ಗಳು ಕೊನೆಗೊಂಡಾಗ ತಂಡ 102 ರನ್‌ ಗಳಿಸಿತ್ತು.
**
ಬ್ಲಾಸ್ಟರ್ಸ್‌ ಜಯಕ್ಕೆ ಸುಲಭ ಗುರಿ
ಪ್ರಭಾವಿ ಬೌಲಿಂಗ್‌ ಪ್ರದರ್ಶನ ನೀಡಿದ ಬೆಂಗಳೂರು ಬ್ಲಾಸ್ಟರ್ಸ್‌ ತಂಡ ಕೆಪಿಎಲ್‌ ಟ್ವೆಂಟಿ–20 ಕ್ರಿಕೆಟ್‌ ಟೂರ್ನಿಯ ಪಂದ್ಯದಲ್ಲಿ ಹುಬ್ಬಳ್ಳಿ ಟೈಗರ್ಸ್‌ ವಿರುದ್ಧ ಗೆಲುವಿಗೆ 118 ರನ್‌ಗಳ ಗುರಿ ಪಡೆದುಕೊಂಡಿದೆ.

ಗಂಗೋತ್ರಿ ಗ್ಲೇಡ್ಸ್‌ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ಟೈಗರ್ಸ್‌ ತಂಡ 18 ಓವರ್‌ಗಳಲ್ಲಿ 9 ವಿಕೆಟ್‌ಗೆ 117 ರನ್‌ ಪೇರಿಸಿತು. ಎದುರಾಳಿ ತಂಡದ ಶಿಸ್ತಿನ ಬೌಲಿಂಗ್‌ ಮುಂದೆ ಅಬ್ಬರದ ಆಟವಾಡಲು ಟೈಗರ್ಸ್‌ ವಿಫಲವಾಯಿತು.

ಪ್ರವೀಣ್‌ ದುಬೆ (48, 46 ಎಸೆತ) ಮಾತ್ರ ಅಲ್ಪ ಹೋರಾಟ ನಡೆಸಿದರು. ವಿ.ಕೌಶಿಕ್‌ ಕೇವಲ 6 ರನ್‌ ನೀಡಿ ಎರಡು ವಿಕೆಟ್‌ ಪಡೆದರು. ಈ ಪಂದ್ಯ ಮಳೆಯಿಂದಾಗಿ ಸುಮಾರು ಒಂದು ಗಂಟೆ ತಡವಾಗಿ ಆರಂಭವಾಯಿತು. ಇದರಿಂದ 18 ಓವರ್‌ಗಳ ಆಟ ನಡೆಸಲು ನಿರ್ಧರಿಸಲಾಯಿತು.

ಸಂಕ್ಷಿಪ್ತ ಸ್ಕೋರ್: ಹುಬ್ಬಳ್ಳಿ ಟೈಗರ್ಸ್‌ 18 ಓವರ್‌ಗಳಲ್ಲಿ 9 ವಿಕೆಟ್‌ಗೆ 117 (ಪ್ರವೀಣ್‌ ದುಬೆ 48, ವಿನಯ್‌ ಕುಮಾರ್ 20, ಕ್ರಾಂತಿ ಕುಮಾರ್ 13, ಎ.ಎಂ.ಕಿರಣ್ 11, ವಿ.ಕೌಶಿಕ್‌ 6 ಕ್ಕೆ 2, ಅಭಿಷೇಕ್‌ ಭಟ್ 30ಕ್ಕೆ 1, ಶ್ರೇಯಸ್‌ ಗೋಪಾಲ್ 32ಕ್ಕೆ 1)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.