ADVERTISEMENT

Tokyo Olympics: ಪದಕದ ಹೊಳಪಿನ ‘ಒಲಿಂಪಿಯನ್‌ ನಿವಾಸ’

ವಿಕ್ರಂ ಕಾಂತಿಕೆರೆ
Published 31 ಜುಲೈ 2021, 19:30 IST
Last Updated 31 ಜುಲೈ 2021, 19:30 IST
ಅಬ್ದುಲ್ಲ ಅಲ್‌ ರಶೀದಿ...ಪದಕದ ಸಂಭ್ರಮ –ರಾಯಿಟರ್ಸ್ ಚಿತ್ರ
ಅಬ್ದುಲ್ಲ ಅಲ್‌ ರಶೀದಿ...ಪದಕದ ಸಂಭ್ರಮ –ರಾಯಿಟರ್ಸ್ ಚಿತ್ರ   

ಐದು ವರ್ಷಗಳ ಹಿಂದೆ, ಬ್ರೆಜಿಲ್‌ನ ರಿಯೊ ಡಿ ಜನೈರೊದಲ್ಲಿ ಒಲಿಂಪಿಕ್ಸ್‌ಗೆ ಸಿದ್ಧತೆ ನಡೆಯುತ್ತಿದ್ದ ಕಾಲ. ಪದಕದ ಕನಸು ಹೊತ್ತುಕೊಂಡು ಜಗತ್ತಿನ ಮೂಲೆ ಮೂಲೆಯಲ್ಲೂ ಕ್ರೀಡಾಪಟುಗಳು ಕಠಿಣ ಅಭ್ಯಾಸದಲ್ಲಿ ನಿರತರಾಗಿದ್ದ ಸಂದರ್ಭ. ಹೀಗಿರಲು, ಅತ್ತ ಕುವೈತ್‌ನಲ್ಲಿ ಅಬ್ದುಲ್ಲ ಅಲ್‌ ರಶೀದಿ ಅವರ ತರಬೇತಿಯೂ ಜೋರಾಗಿ ನಡೆಯುತ್ತಿತ್ತು. ಗಾಳಿಯಲ್ಲಿ ಓಲಾಡುವ ‘ಗುರಿ’ಯನ್ನು ಭೇದಿಸಿ ಪಾಯಿಂಟ್ ಗಳಿಸುವ ಪ್ರಯತ್ನಕ್ಕೆ ಬಿಡುವೇ ಇರಲಿಲ್ಲ. ಆ ಪ್ರಯತ್ನದ ಫಲವಾಗಿ ಅವರಿಗೆ ಒಲಿಂಪಿಕ್ಸ್‌ನಲ್ಲಿ ಪದಕ ಒಲಿಯಿತು.

ಈ ವರ್ಷ ಟೋಕಿಯೊದಲ್ಲೂಅಬ್ದುಲ್ಲ ಅಲ್‌ ರಶೀದಿ ಕಾಣಿಸಿಕೊಂಡರು. ಸ್ಕೀಟ್‌ನಲ್ಲಿ ಪಾಲ್ಗೊಂಡರು, ಮತ್ತೆ ಕೊರಳಿಗೆ ಪದಕ ಹಾಕಿಕೊಂಡರು. ಈ ಬಾರಿ ಅವರೊಂದಿಗೆ ದೊಡ್ಡ ಮಗ ಮನ್ಸೂರ್ ಅಲ್ ರಶೀದಿ ಮತ್ತು ಸಣ್ಣ ಮಗ ತಲಾಲ್ ಅಲ್ ರಶೀದಿ ಕೂಡ ಇದ್ದರು. ಮೂವರೂ ಸ್ಪರ್ಧಾಳುಗಳಾಗಿಯೇ ಟೋಕಿಯೊಗೆ ಹೊರಟಿದ್ದರು. ಅಬ್ದುಲ್ಲ, ದೊಡ್ಡ ಮಗನನ್ನು ಹಿಂದಿಕ್ಕಿ ಪದಕ ಗೆದ್ದುಕೊಂಡಿದ್ದರೆ ತಲಾಲ್, ಟ್ರ್ಯಾಪ್ ವಿಭಾಗದಲ್ಲಿ ಕಣಕ್ಕೆ ಇಳಿದಿದ್ದರು.

ಶೂಟಿಂಗ್‌ನಲ್ಲಿ ಚಿನ್ನ ಗೆದ್ದ, ಇರಾನ್‌ನಲ್ಲಿ ಶುಶ್ರೂಷಕ ವೃತ್ತಿಯಲ್ಲಿ ತೊಡಗಿರುವ 41 ವರ್ಷದ ಜವಾದ್ ಫರೋಗಿ, ಫಿಲಿಪ್ಪೀನ್ಸ್‌ಗೆ ಒಲಿಂಪಿಕ್ಸ್‌ನಲ್ಲಿ ಮೊದಲ ಚಿನ್ನದ ಪದಕ ಗೆದ್ದುಕೊಟ್ಟ ವೇಟ್‌ಲಿಫ್ಟರ್ ಹಿದಿಲಿನ್ ಡಯಾಜ್, ಯುದ್ಧಪೀಡಿತ ಸಿರಿಯಾದಿಂದ ಬಂದು ಟೇಬಲ್‌ ಟೆನಿಸ್‌ನಲ್ಲಿ ಪಾಲ್ಗೊಂಡ 12ರ ಹರೆಯದ ಬಾಲಕಿ ಹೆಂಡ್‌ ಜಾಜಾ, ಈಜು ಸ್ಪರ್ಧೆಯ 400 ಮೀಟರ್ಸ್ ಫ್ರೀಸ್ಟೈಲ್‌ ವಿಭಾಗದಲ್ಲಿ ಚಾಂಪಿಯನ್ ಆದಟ್ಯುನೀಷಿಯಾದ 18 ವರ್ಷದ ಅಹಮ್ಮದ್ ಹಫ್ನೋಯಿ ಮುಂತಾದವರಂತೆಯೇಅಬ್ದುಲ್ಲ ಅಲ್‌ ರಶೀದಿ ಅವರದೂ ಒಲಿಂಪಿಕ್ಸ್ ಅಂಗಣದಲ್ಲಿ ಭಿನ್ನ ಕಥೆ.

ADVERTISEMENT

1996ರಲ್ಲಿ ಅಟ್ಲಾಂಟದಿಂದ ಶುರುವಾದಅಬ್ದುಲ್ಲ ಅವರ ಒಲಿಂಪಿಕ್ಸ್‌ ಯಾನ, ಟೋಕಿಯೊವರೆಗೆ ಬಂದು ತಲುಪಿದೆ. ಅವರಿಗೆ ಈಗ 58ರ ಹರೆಯ. ಬತ್ತದ ಯುವತ್ವದೊಂದಿಗೆ ಇನ್ನಷ್ಟು ಉತ್ಸಾಹಿಯಾಗಿರುವ ಅವರು ಮುಂದಿನ ಒಲಿಂಪಿಕ್ಸ್‌ನಲ್ಲೂ ಪಾಲ್ಗೊಳ್ಳುವು
ದಾಗಿ ಈಗಾಗಲೇ ತಿಳಿಸಿದ್ದಾರೆ. ಚಿನ್ನ ಗೆಲ್ಲುವವರೆಗೆ ವಿರಮಿಸುವುದಿಲ್ಲ ಎಂಬುದು ಅವರ ನೀತಿ; ಹಟ.

1996ರಿಂದ ಒಲಿಂಪಿಕ್ಸ್‌ಗಳಲ್ಲಿ ಸತತವಾಗಿ ಪಾಲ್ಗೊಂಡಿದ್ದರೂ ರಿಯೊದಲ್ಲಿ ಅಬ್ದುಲ್ಲ ಅಲ್‌ ರಶೀದಿ ಹೆಚ್ಚು ಸುದ್ದಿಯಾಗಿದ್ದರು. ಯಾಕೆಂದರೆ ಆ ವರ್ಷ ಅವರು ‘ಸ್ವತಂತ್ರ’ ಸ್ಪರ್ಧಿಯಾಗಿ ಕಣಕ್ಕೆ ಇಳಿದಿದ್ದರು. ಸರ್ಕಾರವು ಕ್ರೀಡಾ ಕ್ಷೇತ್ರದ ಮೇಲೆ ಸುಖಾಸುಮ್ಮನೆ ಮೂಗು ತೂರಿಸುತ್ತಿದೆ ಎಂದು ಆರೋಪಿಸಿ ಕುವೈತ್‌ ಮೇಲೆ ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿ ನಿಷೇಧ ಹೇರಿತ್ತು. ಹೀಗಾಗಿ ರಾಷ್ಟ್ರಧ್ವಜದ ಲಾಂಛನದಡಿ ಸ್ಪರ್ಧಿಸಲು ಅಬ್ದುಲ್ಲ ಅವರಿಗೆ ಸಾಧ್ಯವಾಗಲಿಲ್ಲ. ಇಂಗ್ಲಿಷ್ ಪ್ರೀಮಿಯರ್ ಲೀಗ್‌ ಟೂರ್ನಿಯಲ್ಲಿ ಆಡುವ ಆರ್ಸೆನಲ್ಫುಟ್‌ಬಾಲ್ ಕ್ಲಬ್‌ ತಂಡದ ಜೆರ್ಸಿ ತೊಟ್ಟುಕೊಂಡು ಗುರಿ ಇಟ್ಟಿದ್ದ ಅವರು ಅಂದು ಸಾಮಾಜಿಕ ಜಾಲತಾಣಗಳಲ್ಲಿ ತುಂಬಿನಿಂತಿದ್ದರು. ಅಂದಿನಿಂದ ಅವರ ಅಭಿಮಾನಿಗಳ ಸಂಖ್ಯೆ ಹೆಚ್ಚುತ್ತಾ ಹೋಗಿತ್ತು. ಪ್ರೀಮಿಯರ್ ಲೀಗ್‌ ಟೂರ್ನಿಯಲ್ಲಿ ಆರ್ಸೆನಲ್ ತಂಡದ ಸಾಧನೆಯನ್ನು ಅಬ್ದುಲ್ಲ ಅವರ ಸಾಮರ್ಥ್ಯದೊಂದಿಗೆ ಹೋಲಿಸಿ ನೆಟ್ಟಿಗರು ಹರಿಯಬಿಟ್ಟ ಪೋಸ್ಟ್‌ಗಳು ವೈರಲ್ ಆಗಿದ್ದವು.

ಸಂಭ್ರಮ ಹೆಚ್ಚಿಸಿದ ರಾಷ್ಟ್ರಧ್ವಜ
ರಿಯೊದಲ್ಲಿ ‍ಪ‍ದಕ ಗೆದ್ದರೂ ಅಬ್ದುಲ್ಲ ಅವರ ಒಳಗೆ ಬೇಗುದಿ ತುಂಬಿತ್ತು. ಪದಕ ಪ್ರದಾನ ಸಮಾರಂಭದಲ್ಲಿ ರಾಷ್ಟ್ರಧ್ವಜದ ಬದಲು ಒಲಿಂಪಿಕ್ ಧ್ವಜ ಮೇಲೇರಿದಾಗ ಮತ್ತು ರಾಷ್ಟ್ರಗೀತೆ ಮೊಳಗದೇ ಇದ್ದಾಗ ಅನುಭವಿಸಿದ ನೋವು ಕಾಡುತ್ತಲೇ ಇತ್ತು. ಹೀಗಾಗಿ ದೇಶಕ್ಕಾಗಿಯೂ ಪದಕವೊಂದನ್ನು ಗೆಲ್ಲುವ ಛಲ ಹೆಚ್ಚಾಗಿತ್ತು. ಮಕ್ಕಳಿಗೂ ತರಬೇತಿ ಕೊಡಿಸಿ ಮನೆಯನ್ನೇ ಒಲಿಂಪಿಯನ್ನರ ನಿವಾಸವಾಗಿಸಿಕೊಂಡಿದ್ದರು. ಮಗನೂ ಸ್ಪರ್ಧಿಸಿದ್ದ ವಿಭಾಗದಲ್ಲಿ ಗೆದ್ದ ಪದಕದೊಂದಿಗೆ ರಾಷ್ಟ್ರಧ್ವಜದ ಸೊಂಪೂ ರಾಷ್ಟ್ರಗೀತೆಯ ಇಂಪೂ ಸೇರಿದಾಗ ಮನದಲ್ಲಿ ಸಾವಿರ ಮೊಲ್ಲೆಗಳು ಅರಳಿದವು; ಸಾವಿರದ ನೆನಪಿನ ಬುತ್ತಿಗೆ ಕಂಪು ತುಂಬಿದವು.

ಶೂಟಿಂಗ್‌ನಲ್ಲಿ ಅಬ್ದುಲ್ಲ ಅವರದು ಗಮನಾರ್ಹ ಸಾಧನೆ. 1995ರ ವಿಶ್ವಕಪ್‌ನಿಂದಲೇ ಅವರು ಪದಕಗಳನ್ನು ಗೆಲ್ಲುತ್ತ ಬಂದಿದ್ದಾರೆ.

ಹೆಗಲಲ್ಲಿ ನಾಲ್ಕು ಬಣ್ಣಗಳ ಧ್ವಜವನ್ನು ಹಾಕಿಕೊಂಡು ಪದಕ ಮತ್ತು ಹೂಗುಚ್ಛ ಎತ್ತಿಹಿಡಿದು ಸಂಭ್ರಮಿಸುವ ಅಬ್ದುಲ್ಲ ಅವರ ನಗೆಯಲ್ಲಿ ಹಲವು ಭಾವಗಳಿವೆ. ಮುಂದಿನ ಒಲಿಂಪಿಕ್ಸ್‌ ವೇಳೆಗೆ ಅವರ ಹಣೆಯಲ್ಲಿ ಇನ್ನಷ್ಟು ನೆರಿಗೆಗಳು ಕಾಣಿಸಿಕೊಳ್ಳುವುದು ಸಹಜ. 60 ದಾಟುವ ಮುಖದಲ್ಲಿ ಮೂಡುವ ಆ ನಗುವಿನಲ್ಲಿ 18ರ ಹರೆಯದ ಮುಗ್ಧತನ ಮೇಳೈಸಿದರೆ ಅದುವೇ ಕ್ರೀಡೆಯ ಗೆಲುವು; ಒಲಿಂಪಿಕ್ಸ್‌ ಚೆಲುವು.

ಅಬ್ದುಲ್ಲ ಅಲ್‌ ರಶೀದಿ...ಗುರಿಯಿಡಲು ಸಿದ್ಧತೆ –ರಾಯಿಟರ್ಸ್ ಚಿತ್ರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.