ADVERTISEMENT

ಬ್ಯಾಡ್ಮಿಂಟನ್ ಟೂರ್ನಿ: ಕ್ವಾರ್ಟರ್ ಫೈನಲ್‌ಗೆ ಲಕ್ಷ್ಯ ಸೇನ್

ಆಲ್ ಇಂಗ್ಲೆಂಡ್‌ ಓ‍ಪನ್ ಬ್ಯಾಡ್ಮಿಂಟನ್ ಟೂರ್ನಿ: ಎರಡನೇ ಸುತ್ತಿನಲ್ಲಿ ಹೊರಬಿದ್ದ ಪ್ರಣಯ್‌

ಪಿಟಿಐ
Published 18 ಮಾರ್ಚ್ 2021, 13:27 IST
Last Updated 18 ಮಾರ್ಚ್ 2021, 13:27 IST
ಲಕ್ಷ್ಯ ಸೇನ್‌
ಲಕ್ಷ್ಯ ಸೇನ್‌   

ಬರ್ಮಿಂಗ್‌ಹ್ಯಾಂ: ಭಾರತದ ಯುವ ಆಟಗಾರ ಲಕ್ಷ್ಯ ಸೇನ್‌, ಆಲ್ ಇಂಗ್ಲೆಂಡ್‌ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌ನ ಪುರುಷರ ವಿಭಾಗದಲ್ಲಿ ಗುರುವಾರ ಕ್ವಾರ್ಟರ್ ಫೈನಲ್ ಪ್ರವೇಶಿಸಿದರು. ಆದರೆ ಎಚ್‌.ಎಸ್‌.ಪ್ರಣಯ್ ಎರಡನೇ ಸುತ್ತಿನಲ್ಲಿ ಸೋತು ಹೊರಬಿದ್ದರು.

2019ರಲ್ಲಿ ಒಟ್ಟು ಐದು ಪ್ರಶಸ್ತಿಗಳನ್ನು ಗೆದ್ದು ಗಮನ ಸೆಳೆದಿದ್ದ 19 ವರ್ಷದ ಲಕ್ಷ್ಯಸೇನ್ ಇಲ್ಲಿ 21-18, 21-16ರಲ್ಲಿ ಫ್ರಾನ್ಸ್‌ನ ಥಾಮಸ್ ರುಕ್ಸಲ್ ಎದುರು ಜಯ ಗಳಿಸಿದರು.

ಮೊದಲ ಸುತ್ತಿನಲ್ಲಿ ಕಿದಂಬಿ ಶ್ರೀಕಾಂತ್ ಅವರನ್ನು ಮಣಿಸಿದ್ದ ಜಪಾನ್‌ನ ಕೆಂಟೊ ಮೊಮೊಟಾ 21–15, 21–14ರಲ್ಲಿ ಪ್ರಣಯ್ ವಿರುದ್ಧ ಗೆಲುವು ಸಾಧಿಸಿದರು. ಈ ಪಂದ್ಯ ಕೇವಲ 48 ನಿಮಿಷಗಳಲ್ಲಿ ಮುಗಿಯಿತು.

ADVERTISEMENT

ಸಾತ್ವಿಕ್ ಸಾಯಿರಾಜ್ ರಣಕಿರೆಡ್ಡಿ ಮತ್ತು ಅಶ್ವಿನಿ ಪೊನ್ನಪ್ಪ ಜೋಡಿ ಮಿಶ್ರ ಡಬಲ್ಸ್‌ನಲ್ಲಿ ಜಪಾನ್‌ನ ಯೂಕಿ ಕನೇಕೊ ಮತ್ತು ಮಿಸಾಕಿ ಮಸುಟೊಮೊ ಎದುರು 19-21, 9-21ರಲ್ಲಿ ಸೋತ‌ರು.

ಹಿಂದೆ ಸರಿದ ಸೈನಾ ನೆಹ್ವಾಲ್‌

ಮಹಿಳೆಯರ ವಿಭಾಗದ ಮೊದಲ ಸುತ್ತಿನ ಪಂದ್ಯದ ಅರ್ಧದಲ್ಲೇ ಭಾರತದ ಸೈನಾ ನೆಹ್ವಾಲ್ ಹಿಂದೆ ಸರಿದರು. ಡೆನ್ಮಾರ್ಕ್‌ನ ಮಿಯಾ ಬ್ಲಿಚ್‌ಫೆಲ್ಟ್ ಎದುರಿನ ಪಂದ್ಯದಲ್ಲಿ 8–21, 4–10ರ ಹಿನ್ನಡೆ ಅನುಭವಿಸಿದ್ದ ಸಂದರ್ಭದಲ್ಲಿ ಬಲಗಾಲಿನ ತೊಡೆಯಲ್ಲಿ ನೋವು ಕಾಣಿಸಿಕೊಂಡ ಕಾರಣ ಅವರು ನಿವೃತ್ತರಾಗಲು ನಿರ್ಧರಿಸಿದರು.

ಮಿಶ್ರ ಡಬಲ್ಸ್‌ನ ಮತ್ತೊಂದು ಪಂದ್ಯದಲ್ಲಿ ಪ್ರಣವ್ ಜೆರೆ ಛೋಪ್ರಾ ಮತ್ತು ಎನ್‌.ಸಿಕ್ಕಿ ರೆಡ್ಡಿ 15-21, 17-21ರಲ್ಲಿ ಡೆನ್ಮಾರ್ಕ್‌ನ ರಸ್ಮಸ್ ಎಸ್ಪೆರ್ಸನ್‌ ಮತ್ತು ಕ್ರಿಸ್ಟಿನ್ ಬುಶ್‌ ಎದುರು ಸೋತರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.