ADVERTISEMENT

ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್: ಪ್ರಶಸ್ತಿ ಸುತ್ತಿಗೆ ಲಕ್ಷ್ಯ ಸೇನ್ ಲಗ್ಗೆ

ಫೈನಲ್ ತಲುಪಿದ ಭಾರತದ ಮೂರನೇ ಆಟಗಾರ

ಪಿಟಿಐ
Published 19 ಮಾರ್ಚ್ 2022, 20:01 IST
Last Updated 19 ಮಾರ್ಚ್ 2022, 20:01 IST
ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆಯುತ್ತಿರುವ ಆಲ್‌ ಇಂಗ್ಲೆಂಡ್ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌ನ ಪುರುಷರ ಸಿಂಗಲ್ಸ್‌ ಸೆಮಿಫೈನಲ್‌ನಲ್ಲಿ ಭಾರತದ ಲಕ್ಷ್ಯ ಸೇನ್ ಆಟದ ಸೊಗಸು –ಎಎಫ್‌ಪಿ ಚಿತ್ರ
ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆಯುತ್ತಿರುವ ಆಲ್‌ ಇಂಗ್ಲೆಂಡ್ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌ನ ಪುರುಷರ ಸಿಂಗಲ್ಸ್‌ ಸೆಮಿಫೈನಲ್‌ನಲ್ಲಿ ಭಾರತದ ಲಕ್ಷ್ಯ ಸೇನ್ ಆಟದ ಸೊಗಸು –ಎಎಫ್‌ಪಿ ಚಿತ್ರ   

ಬರ್ಮಿಂಗ್‌ಹ್ಯಾಮ್: ಚಿಗುರುಮೀಸೆಯ ತರುಣ ಲಕ್ಷ್ಯ ಸೇನ್ ಆಲ್‌ ಇಂಗ್ಲೆಂಡ್ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌ ಪುರುಷರ ಸಿಂಗಲ್ಸ್‌ ಫೈನಲ್‌ಗೆ ಲಗ್ಗೆ ಇಟ್ಟರು.

ಶನಿವಾರ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಭಾರತದ ಲಕ್ಷ್ಯ 21–13, 12–21, 21–19 ರಿಂದ ಹಾಲಿ ಚಾಂಪಿಯನ್, ಮಲೇಷ್ಯಾದ ಲೀ ಜೀ ಜಿಯಾ ಅವರಿಗೆ ಆಘಾತ ನೀಡಿದರು. ಪ್ರಕಾಶ್ ಪಡುಕೋಣೆ ಮತ್ತು ಪುಲ್ಲೇಲಾ ಗೋಪಿಚಂದ್ ನಂತರ ಈ ಪ್ರತಿಷ್ಠಿತ ಟೂರ್ನಿಯ ಪ್ರಶಸ್ತಿ ಸುತ್ತಿಗೆ ಸಾಗಿದ ಆಟಗಾರನೆಂಬ ಹೆಗ್ಗಳಿಕೆ ಲಕ್ಷ್ಯಗೆ ಸಂದಿದೆ.

ಪ್ರಕಾಶ್ ಮತ್ತು ಗೋಪಿಚಂದ್ ಅವರು ಚಾಂಪಿಯನ್ ಆಗಿದ್ದರು. 2015ರಲ್ಲಿ ಮಹಿಳೆಯರ ಸಿಂಗಲ್ಸ್‌ನಲ್ಲಿ ಭಾರತದ ಸೈನಾ ನೆಹ್ವಾಲ್ ಫೈನಲ್ ತಲುಪಿದ್ದರು.ಲಕ್ಷ್ಯ ಕಳೆದ ಆರು ತಿಂಗಳುಗಳಲ್ಲಿ ಒಂದರ ಹಿಂದೊಂದು ಮಹತ್ವದ ಸಾಧನೆಗಳನ್ನು ಮಾಡಿದ್ದಾರೆ. ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಕಂಚಿನ ಪದಕ, ಸೂಪರ್ 500 ಟೂರ್ನಿಯಲ್ಲಿ ಪ್ರಶಸ್ತಿ ಮತ್ತು ಹೋದ ವಾರವಷ್ಟೇ ಜರ್ಮನ್ ಓಪನ್ ಟೂರ್ನಿಯಲ್ಲಿ ರನ್ನರ್ ಅಪ್ ಪ್ರಶಸ್ತಿ ಪಡೆದಿದ್ದರು.

ADVERTISEMENT

ಬೆಂಗಳೂರಿನ ಪ್ರಕಾಶ್ ಪಡುಕೋಣೆ ಅಕಾಡೆಮಿಯಲ್ಲಿ ತರಬೇತಿ ಪಡೆಯುತ್ತಿರುವ ಲಕ್ಷ್ಯ ತಮಗಿಂತಲೂ ಅನುಭವಿ ಎದುರಾಳಿಯನ್ನು ಚುರುಕಿನ ಆಟದಿಂದ ಮಣಿಸಿದರು.

ಮೊದಲ ಗೇಮ್‌ನಲ್ಲಿಯೇ ತಮ್ಮ ಕೌಶಲ ಮೆರೆದ ಲಕ್ಷ್ಯ ಎಂಟು ಅಂಕಗಳ ಅಂತರದಿಂದ ಜಯಿಸಿದರು.ಆದರೆ, ಎರಡನೇ ಗೇಮ್‌ನಲ್ಲಿ ಮಲೇಷ್ಯಾದ ಆಟಗಾರ ಭರ್ಜರಿ ತಿರುಗೇಟು ನೀಡಿದರು. ಒಂಬತ್ತು ಅಂಕಗಳ ಅಂತರದಿಂದ ಈ ಗೇಮ್‌ನಲ್ಲಿ ಸೋಲನುಭವಿಸಿದರೂ ಲಕ್ಷ್ಯ ವಿಚಲಿತರಾಗಲಿಲ್ಲ. ಕೊನೆಯ ಮತ್ತು ನಿರ್ಣಾಯಕ ಗೇಮ್‌ನಲ್ಲಿ ತಮ್ಮ ಶ್ರೇಷ್ಠ ಸಾಮರ್ಥ್ಯವನ್ನು ಮೆರೆದರು.

ಮಲೇಷ್ಯಾ ಆಟಗಾರ ಕಠಿಣ ಪೈಪೋಟಿಯನ್ನು ಮೀರಿ ನಿಂತರು.ರಭಸದ ಸ್ಮ್ಯಾಷ್‌ಗಳಿಂದ ಗಮನ ಸೆಳೆದ ಲಕ್ಷ್ಯ, ಬೇಸ್‌ಲೈನ್ ಗೇಮ್‌ನಲ್ಲಿಯೂ ಮೇಲುಗೈ ಸಾಧಿಸಿದರು. ರೋಚಕ ಹಣಾಹಣಿಯಲ್ಲಿ ಕೇವಲ ಮೂರು ಪಾಯಿಂಟ್‌ಗಳ ಅಂತರದಿಂದ ಗೇಮ್ ಗೆದ್ದರು. ಭಾನುವಾರ ಫೈನಲ್ ಪಂದ್ಯಗಳು ನಡೆಯಲಿವೆ. ಭಾರತೀಯ ಕಾಲಮಾನದ ಪ್ರಕಾರ ಮಧ್ಯಾಹ್ನ 3.30ರಿಂದ ಆರಂಭವಾಗಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.