ವಾಂತಾ, ಫಿನ್ಲೆಂಡ್: ಭಾರತದ ಬ್ಯಾಡ್ಮಿಂಟನ್ ತಾರೆ ಲಕ್ಷ್ಯ ಸೇನ್ ಅವರು ಇಲ್ಲಿ ನಡೆಯುತ್ತಿರುವ ಆರ್ಕಟಿಕ್ ಓಪನ್ ಸೂಪರ್ 500 ಟೂರ್ನಿಯ ಪುರುಷರ ಸಿಂಗಲ್ಸ್‌ನಲ್ಲಿ ಪ್ರಿ ಕ್ವಾರ್ಟರ್ ಫೈನಲ್ ತಲುಪಿದರು.
ಭಾರತದ 23 ವರ್ಷ ವಯಸ್ಸಿನ ಆಟಗಾರ ಬುಧವಾರ ನಡೆದ ಆರಂಭಿಕ ಸುತ್ತಿನಲ್ಲಿ ರಾಸ್ಮಸ್ ಗೆಮ್ಕೆ ಅವರನ್ನು ಎದುರಿಸಬೇಕಿತ್ತು. ಆದರೆ, ಡೆನ್ಮಾರ್ಕ್‌ನ ಆಟಗಾರ ಸ್ಪರ್ಧೆಯಿಂದ ಹಿಂದೆ ಸರಿದಿದ್ದರಿಂದ ಸೇನ್ ಎರಡನೇ ಸುತ್ತಿಗೆ ಮುನ್ನಡೆದರು.
ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕದ ಪ್ಲೇ ಆಫ್ ಸ್ಪರ್ಧೆಯಲ್ಲಿ ಸೋತ ಬಳಿಕ ಮೊದಲ ಬಾರಿ ಸೇನ್ ಸ್ಪರ್ಧಾ ಕಣಕ್ಕೆ ಇಳಿದಿದ್ದಾರೆ. ಅವರು ಮುಂದಿನ ಸುತ್ತಿನಲ್ಲಿ ಚೀನಾ ತೈಪೆಯ ಚೌ ಟಿಯೆನ್ ಚೆನ್ ಮತ್ತು ಫ್ರಾನ್ಸ್‌ನ ಅರ್ನಾಡ್ ಮರ್ಕಲ್ ನಡುವಿನ ವಿಜೇತರ ವಿರುದ್ಧ ಸೆಣಸಲಿದ್ದಾರೆ.
ಮಹಿಳೆಯರ ಸಿಂಗಲ್ಸ್‌ನಲ್ಲಿ ಭಾರತದ ಯುವ ಆಟಗಾರ್ತಿ ಉನ್ನತಿ ಹೂಡಾ ಶುಭಾರಂಭ ಮಾಡಿದರು. ಅವರು ಮೊದಲ ಸುತ್ತಿನಲ್ಲಿ 21-16, 23-25, 21-17ರಿಂದ ಬ್ರೆಜಿಲ್‌ನ ಜೂಲಿಯಾನ ವಿಯಾನಾ ವೈರಾ ವಿರುದ್ಧ ಗೆಲುವು ಸಾಧಿಸಿದರು.
ಅನುಭವಿ ಆಟಗಾರ್ತಿ ಪಿ.ವಿ. ಸಿಂಧು ಮೊದಲ ಸುತ್ತಿನಲ್ಲೇ ಹೊರಬಿದ್ದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.