ಶೆನ್‌ಝೆನ್ (ಚೀನಾ): ಭಾರತದ ಅಗ್ರಮಾನ್ಯ ತಾರೆಗಳಾದ ಪಿ.ವಿ.ಸಿಂಧು ಮತ್ತು ಲಕ್ಷ್ಯ ಸೇನ್ ಅವರು ಚೀನಾ ಮಾಸ್ಟರ್ಸ್ ಸೂಪರ್ 750 ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಬುಧವಾರ ಭಿನ್ನ ರೀತಿಯ ಗೆಲುವುಗಳೊಂದಿಗೆ ಕ್ರಮವಾಗಿ ಮಹಿಳೆಯರ ಮತ್ತು ಪುರುಷರ ಸಿಂಗಲ್ಸ್ ಎರಡನೇ ಸುತ್ತಿಗೆ ತಲುಪಿದರು.
ವಿಶ್ವ ಕ್ರಮಾಂಕದಲ್ಲಿ 36ನೇ ಸ್ಥಾನದಲ್ಲಿರುವ ಮಾಳವಿಕಾ ಬನ್ಸೋಡ್, ತಮಗಿಂತ ಮೇಲಿನ ಕ್ರಮಾಂಕದ ಆಟಗಾರ್ತಿಯನ್ನು ಮಣಿಸಿ ಎರಡನೇ ಸುತ್ತಿಗೆ ಮುನ್ನಡೆದರು.
29 ವರ್ಷ ವಯಸ್ಸಿನ ಸಿಂಧು 21–17, 21–19 ರಿಂದ ತಮಗಿಂತ ಮೇಲಿನ ಕ್ರಮಾಂಕದ ಬುಸಾನನ್ ಒಂಗ್ಬಾಮ್‌ರುಂಗ್‌ಫಾನ್ ಅವರನ್ನು ಸೋಲಿಸಿದರು. ವಿಶ್ವ ಕ್ರಮಾಂಕಪಟ್ಟಿಯಲ್ಲಿ 19ನೇ ಸ್ಥಾನದಲ್ಲಿರುವ ಸಿಂಧ ಅವರಿಗೆ ಇದು ಥಾಯ್ಲೆಂಡ್ ಆಟಗಾರ್ತಿಯ ವಿರುದ್ಧ ಆಡಿದ 21 ಪಂದ್ಯಗಳಲ್ಲಿ 20ನೇ ಗೆಲುವು ಆಗಿದೆ.
ಹೈದರಾಬಾದಿನ ಆಟಗಾರ್ತಿ ಮುಂದಿನ ಸುತ್ತಿನಲ್ಲಿ ಸಿಂಗಪುರದ ಯೊ ಜಿಯಾ ಮಿನ್ ಅವರನ್ನು ಎದುರಿಸಲಿದ್ದಾರೆ. ಮಾಳವಿಕಾ ಇನ್ನೊಂದು ಪಂದ್ಯದಲ್ಲಿ ಎಂಟನೇ ಶ್ರೇಯಾಂಕದ ಸುಪನಿದಾ ಕಟೆಥಾಂಗ್ ಅವರ ವಿರುದ್ಧ ಆಡಲಿದ್ದಾರೆ.
ಮಾಳವಿಕಾ ಇನ್ನೊಂದು ಪಂದ್ಯದಲ್ಲಿ ಡೆನ್ಮಾರ್ಕ್‌ನ ಲಿನಿ ಹೊಜ್ಮಾರ್ಕ್ ಜಾರ್ಸ್‌ಫೆಲ್ಡ್ ಅವರನ್ನು 20–22, 23–21, 21–16 ರಿಂದ ಪರಾಭವಗೊಳಿಸಿದರು.
ಲಕ್ಷ್ಯ ಪುರುಷರ ಸಿಂಗಲ್ಸ್ ಮೊದಲ ಸುತ್ತಿನಲ್ಲಿ 21–14 13–21, 21–13 ರಿಂದ ಮಲೇಷ್ಯಾದ ಲೀ ಝಿ ಜಿಯಾ ಅವರನ್ನು ಹಿಮ್ಮೆಟ್ಟಿಸಿದರು. ಆ ಮೂಲಕ ಪ್ಯಾರಿಸ್ ಒಲಿಂಪಿಕ್ಸ್ ಕಂಚಿನ ಪದಕಕ್ಕೆ ನಡೆದ ಪಂದ್ಯದಲ್ಲಿ ಅನುಭವಿಸಿದ ಸೋಲಿಗೆ ಪ್ರತೀಕಾರ ತೀರಿಸಿಕೊಂಡರು. ಲಕ್ಷ್ಯ 57 ನಿಮಿಷಗಳಲ್ಲಿ ಜಯಶಾಲಿಯಾದರು. ಲಕ್ಷ್ಯ ಅವರ ಮುಂದಿನ ಎದುರಾಳಿ ಡೆನ್ಮಾರ್ಕ್‌ನ ರಾಸ್ಮಸ್ ಗೆಮ್ಕೆ. ಡೆನ್ಮಾರ್ಕ್ ಆಟಗಾರ ಇನ್ನೊಂದು ಪಂದ್ಯದಲ್ಲಿ ಜಪಾನ್‌ನ ಕೆಂಟಾ ನಿಶಿಮೊಟೊ ವಿರುದ್ಧ 21–15, 12–21, 26–24 ರಲ್ಲಿ ಜಯಗಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.