ADVERTISEMENT

ವಿಶ್ವ ಈಜು ಚಾಂಪಿಯನ್‌ಷಿಪ್‌: ಈಜುತಾರೆ ಲೆಡೆಕಿಗೆ 22ನೇ ವಿಶ್ವ ಪ್ರಶಸ್ತಿ

ಎರಡನೇ ಪದಕ ಗೆದ್ದ ಅಮೆರಿಕದ ಸ್ಪರ್ಧಿ

ಏಜೆನ್ಸೀಸ್
Published 29 ಜುಲೈ 2025, 16:27 IST
Last Updated 29 ಜುಲೈ 2025, 16:27 IST
<div class="paragraphs"><p>ಮಹಿಳೆಯರ 1,500 ಮೀಟರ್‌ ಫ್ರೀಸ್ಟೈಲ್‌ ಸ್ಪರ್ಧೆಯಲ್ಲಿ ಚಿನ್ನ ಗೆದ್ದ ಅಮೆರಿಕದ ಕೇಟಿ ಲೆಡೆಕಿ </p></div>

ಮಹಿಳೆಯರ 1,500 ಮೀಟರ್‌ ಫ್ರೀಸ್ಟೈಲ್‌ ಸ್ಪರ್ಧೆಯಲ್ಲಿ ಚಿನ್ನ ಗೆದ್ದ ಅಮೆರಿಕದ ಕೇಟಿ ಲೆಡೆಕಿ

   

–ಎಎಫ್‌ಪಿ ಚಿತ್ರ

ಸಿಂಗಪುರ: ಅಮೆರಿಕದ ಈಜುತಾರೆ ಕೇಟಿ ಲೆಡೆಕಿ ಅವರು ಇಲ್ಲಿ ನಡೆಯುತ್ತಿರುವ ವಿಶ್ವ ಈಜು ಚಾಂಪಿಯನ್‌ಷಿಪ್‌ನಲ್ಲಿ ಚಿನ್ನಕ್ಕೆ ಕೊರಳೊಡ್ಡುವ ಜೊತೆಗೆ ತಮ್ಮ ವೃತ್ತಿಜೀವನದ 22ನೇ ವಿಶ್ವ ಪ್ರಶಸ್ತಿಯನ್ನು ಗೆದ್ದರು. ಈ ಮೂಲಕ ಸ್ವದೇಶದ ದಂತಕಥೆ ಮೈಕೆಲ್ ಫೆಲ್ಪ್ಸ್ ಅವರ ವಿಶ್ವದಾಖಲೆಗೆ ಹತ್ತಿರವಾದರು.

ADVERTISEMENT

28 ವರ್ಷದ ಲೆಡೆಕಿ ಮಂಗಳವಾರ ನಡೆದ ಮಹಿಳೆಯರ 1,500 ಮೀಟರ್‌ ಫ್ರೀಸ್ಟೈಲ್‌ ಸ್ಪರ್ಧೆಯಲ್ಲಿ 15 ನಿಮಿಷ 26.44 ಸೆಕೆಂಡ್‌ಗಳಲ್ಲಿ ಗುರಿ ತಲುಪಿದರು. ತನ್ನದೇ ಹೆಸರಿನಲ್ಲಿರುವ ವಿಶ್ವದಾಖಲೆಗೆ (15:20.48) ಕೇವಲ ಆರು ಸೆಕೆಂಡ್‌ ದೂರದಲ್ಲಿದ್ದರು. 

ಮಾಜಿ ಈಜುತಾರೆ ಮೈಕೆಲ್ ಫೆಲ್ಪ್ಸ್ ಅವರು ವಿಶ್ವಮಟ್ಟದ ಸ್ಪರ್ಧೆಯಲ್ಲಿ ಒಟ್ಟು 26 ‌ಚಿನ್ನದ ಪದಕ ಗೆದ್ದಿದ್ದಾರೆ. ಆ ದಾಖಲೆ ಮುರಿಯಲು ಲೆಡೆಕಿ ಇನ್ನು ಐದು ಸ್ವರ್ಣ ಬೇಕಿದೆ. ಒಲಿಂಪಿಕ್ಸ್‌ನಲ್ಲಿ ದಾಖಲೆಯ ಒಂಬತ್ತು ಚಿನ್ನವನ್ನು ಲೆಡೆಕಿ ಗೆದ್ದಿದ್ದಾರೆ.

ವಿಶ್ವಮಟ್ಟದ 1,500 ಮೀಟರ್ ಫ್ರೀಸ್ಟೈಲ್‌ ಸ್ಪರ್ಧೆಯಲ್ಲಿ ಆರನೇ ಬಾರಿ ಲೆಡೆಕಿ ಮುತ್ತಿಕ್ಕಿದರು. ಇಟಲಿಯ ಸಿಮೋನಾ ಕ್ವಾಡರೆಲ್ಲಾ (15:31.79) ಬೆಳ್ಳಿ ಪದಕ ಮತ್ತು ಮತ್ತು ಆಸ್ಟ್ರೇಲಿಯಾದ ಲ್ಯಾನಿ ಪಲ್ಲಿಸ್ಟರ್ (15:41.18) ಕಂಚಿನ ಪದಕ ಗೆದ್ದರು.

ಈ ಕೂಟದಲ್ಲಿ ಲೆಡಿಕಿಗೆ ಇದು ಎರಡನೇ ಪದಕವಾಗಿದೆ. ಭಾನುವಾರ ನಡೆದ 400 ಮೀಟರ್‌ ಫ್ರೀಸ್ಟೈಲ್‌ನಲ್ಲಿ ಅವರು ಕಂಚಿನ ಪದಕ ಗೆದ್ದಿದ್ದರು. ಕೆನಡಾದ ತಾರೆ ಸಮ್ಮರ್‌ ಮೆಕಿಂಟೋಷ್‌ ಚಿನ್ನದ ಸಾಧನೆ ಮೆರೆದಿದ್ದರು. 800 ಮೀಟರ್ ಫ್ರೀಸ್ಟೈಲ್‌ನಲ್ಲಿ ಮತ್ತೊಮ್ಮೆ ಲೆಡೆಕಿ ಮತ್ತು ಮೆಕಿಂಟೋಷ್‌ ಮುಖಾಮುಖಿಯಾಗಲಿದ್ದಾರೆ.

ಡೇವಿಡ್‌ಗೆ ಚಿನ್ನ: ಒಲಿಂಪಿಕ್ ಚಾಂಪಿಯನ್ ಡೇವಿಡ್ ಪೊಪೊವಿಸಿ ಅವರು ಪುರುಷರ 200 ಮೀಟರ್‌ ಫ್ರೀಸ್ಟೈಲ್‌ನಲ್ಲಿ ಚಾಂಪಿಯನ್‌ ಆಗಿ ಹೊರಹೊಮ್ಮಿದರು. ರೊಮೇನಿಯಾದ 20 ವರ್ಷದ ತಾರೆ 1 ನಿಮಿಷ 43.53 ಸೆಕೆಂಡ್‌ಗಳಲ್ಲಿ ದಡ ಸೇರಿದರು. ಅವರಿಗೆ ಪ್ರಬಲ ಎದುರಾಳಿಯಾಗಿದ್ದ ಅಮೆರಿಕದ ಲ್ಯೂಕ್ ಹಾಬ್ಸನ್ (1:43.84) ಬೆಳ್ಳಿ ಗೆದ್ದರು. ಜಪಾನ್‌ನ 18 ವರ್ಷದ ತತ್ಸುಯಾ ಮುರಾಸಾ (1:44.54) ಕಂಚು ತಮ್ಮದಾಗಿಸಿಕೊಂಡರು. 

ಆಸ್ಟ್ರೇಲಿಯಾದ ಕೈಲಿ ಮೆಕ್‌ಕೌನ್, ಮಹಿಳೆಯರ 100 ಮೀಟರ್‌ ಬ್ಯಾಕ್‌ಸ್ಟ್ರೋಕ್‌ನಲ್ಲಿ ಚಿನ್ನದ ಸಾಧನೆ ಮಾಡಿದರು. ಅವರು ಕೇವಲ 0.03 ಸೆಕೆಂಡ್‌ ಅಂತರದಲ್ಲಿ ವಿಶ್ವದಾಖಲೆ ಅವಕಾಶ ತಪ್ಪಿಸಿಕೊಂಡರು. 

24 ವರ್ಷದ ಮೆಕ್‌ಕೌನ್ ಅವರು 57.16 ಸೆಕೆಂಡುಗಳಲ್ಲಿ ಗುರಿ ತಲುಪಿ, ಚಾಂಪಿಯನ್‌ಷಿಪ್ ದಾಖಲೆ ಬರೆದರು. ವಿಶ್ವದಾಖಲೆ ಹೊಂದಿರುವ ಅಮೆರಿಕದ ರೇಗನ್ ಸ್ಮಿತ್ (57.35) ಮತ್ತು ಕ್ಯಾಥರೀನ್ ಬರ್ಕಾಫ್ (58.15) ಕ್ರಮವಾಗಿ ಬೆಳ್ಳಿ ಮತ್ತು ಕಂಚಿನ ಪದಕ ಗೆದ್ದರು.

ಮಹಿಳೆಯರ 100 ಮೀಟರ್‌ ಬ್ರೆಸ್ಟ್‌ಸ್ಟ್ರೋಕ್‌ನಲ್ಲಿ ಜರ್ಮನಿಯ ಅನ್ನಾ ಎಲೆಂಡ್ಟ್ 1ನಿಮಿಷ 05.19 ಸೆಕೆಂಡ್‌ಗಳಲ್ಲಿ ದಡ ಸೇರಿ, ಚಾಂಪಿಯನ್‌ ಆದರು. ಅಮೆರಿಕದ ಕೇಟ್ ಡೌಗ್ಲಾಸ್ (1:05.27) ಬೆಳ್ಳಿ ಮತ್ತು ಚೀನಾದ ಟ್ಯಾಂಗ್ ಕ್ವಿಯಾಂಟಿಂಗ್ (1:05.64) ಕಂಚು ಜಯಿಸಿದರು. 

ದಕ್ಷಿಣ ಆಫ್ರಿಕಾದ ಪೀಟರ್ ಕೋಟ್ಜೆ (51.85ಸೆ) ಅವರು ಪುರುಷರ 100 ಮೀಟರ್‌ ಬ್ಯಾಕ್‌ಸ್ಟ್ರೋಕ್‌ನಲ್ಲಿ ಚಿನ್ನದ ಸಾಧನೆ ಮೆರೆದರು. ಇಟಲಿಯ ಥಾಮಸ್ ಸೆಕಾನ್ ಮತ್ತು ಫ್ರಾನ್ಸ್‌ನ ಯೋಹಾನ್ ಎನ್ಡೋಯ್ ಬ್ರೌರ್ಡ್ ನಂತರದ ಸ್ಥಾನ ಪಡೆದರು.

ಮಹಿಳೆಯರ 1500 ಮೀಟರ್‌ ಫ್ರೀಸ್ಟೈಲ್‌ ಸ್ಪರ್ಧೆಯಲ್ಲಿ ಚಿನ್ನ ಗೆದ್ದ ಅಮೆರಿಕದ ಕೇಟಿ ಲೆಡೆಕಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.