ADVERTISEMENT

World Swimming Championships | 200 ಮೀ. ಮೆಡ್ಲೆ: ಮಕ್ಷಾನ್ ವಿಶ್ವ ದಾಖಲೆ

ವಿಶ್ವ ಈಜು ಚಾಂಪಿಯನ್‌ಷಿಪ್‌:

ಏಜೆನ್ಸೀಸ್
Published 30 ಜುಲೈ 2025, 14:35 IST
Last Updated 30 ಜುಲೈ 2025, 14:35 IST
ವಿಶ್ವ ಈಜು ಚಾಂಪಿಯನ್‌ಷಿಪ್‌ನ ಪುರುಷರ 200 ಮೀ. ವೈಯಕ್ತಿಕ ಮೆಡ್ಲೆಯಲ್ಲಿ ವಿಶ್ವದಾಖಲೆ ಸ್ಥಾಪಿಸಿದ ಫ್ರಾನ್ಸ್‌ನ ಲಿಯೋನ್ ಮಕ್ಷಾನ್
ಎಎಫ್‌ಪಿ ಚಿತ್ರ
ವಿಶ್ವ ಈಜು ಚಾಂಪಿಯನ್‌ಷಿಪ್‌ನ ಪುರುಷರ 200 ಮೀ. ವೈಯಕ್ತಿಕ ಮೆಡ್ಲೆಯಲ್ಲಿ ವಿಶ್ವದಾಖಲೆ ಸ್ಥಾಪಿಸಿದ ಫ್ರಾನ್ಸ್‌ನ ಲಿಯೋನ್ ಮಕ್ಷಾನ್ ಎಎಫ್‌ಪಿ ಚಿತ್ರ   

ಸಿಂಗಪುರ: ಫ್ರಾನ್ಸ್‌ನ ಲೆಯೋನ್ ಮಕ್ಷಾನ್ ಅವರು ವಿಶ್ವ ಈಜು ಚಾಂಪಿಯನ್‌ಷಿಪ್‌ನ ಪುರುಷರ 200 ಮೀ. ವೈಯಕ್ತಿಕ ಮೆಡ್ಲೆ ಸ್ಪರ್ಧೆಯನ್ನು 1ನಿ.52.69 ಸೆ.ಗಳಲ್ಲಿ ಪೂರೈಸಿ ನೂತನ ವಿಶ್ವದಾಖಲೆ ಸ್ಥಾಪಿಸಿದರು.

23 ವರ್ಷ ವಯಸ್ಸಿನ ಮಕ್ಷಾನ್ ಅವರು ಅಮೆರಿಕದ ರಯಾನ್ ಲಾಕ್ಟಿ 2011ರಲ್ಲಿ ಸ್ಥಾಪಿಸಿದ್ದ ಈ ಹಿಂದಿನ ದಾಖಲೆಯನ್ನು (1:54.00) ಒಂದು ಸೆಕೆಂಡುಗಿಂತಲೂ ಹೆಚ್ಚು ಅಂತರದಿಂದ ಮುರಿದರು. ಫೈನಲ್ ಗುರುವಾರ ನಡೆಯಲಿದೆ.

400 ಮೀ. ವೈಯಕ್ತಿಕ ಮೆಡ್ಲೆಯಲ್ಲಿ ಮೈಕೆಲ್‌ ಫೆಲ್ಪ್ಸ್‌ ಹೆಸರಿನಲ್ಲಿದ್ದ ದೀರ್ಘ ಕಾಲದ  ದಾಖಲೆಯನ್ನು ಅವರು ಎರಡು ವರ್ಷಗಳ ಹಿಂದೆ ಜಪಾನ್‌ನಲ್ಲಿ ನಡೆದ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಮುಳುಗಿಸಿದ್ದರು.

ADVERTISEMENT

‘ನನಗೆ ಇದನ್ನು ನಂಬಲಾಗುತ್ತಿಲ್ಲ. ನನ್ನ ವೈಯಕ್ತಿಕ ಶ್ರೇಷ್ಠ ಸಾಧನೆಯ ಸಮೀಪ ತಲುಪುನೆಂಬ ವಿಶ್ವಾಸವಿತ್ತು. ಉಲ್ಲಸಿತನಾಗಿದ್ದರ ಜೊತೆಗೆ ಸಾಕಷ್ಟು ಸಿದ್ಧತೆಯನ್ನೂ ನಡೆಸಿದ್ದೆ. ಆದರೆ 1ನಿ.52 ಸೆ. ಗುರಿಮುಟ್ಟಿರುವುದನ್ನು ನಂಬಲಾಗುತ್ತಿಲ್ಲ’ ಎಂದು ಮಕ್ಷಾನ್ ಪ್ರತಿಕ್ರಿಯಿಸಿದರು. ಹೀಟ್ಸ್‌ನಲ್ಲಿ ಅವರು ಈ ದೂರವನ್ನು 1ನಿ.57.63 ಸೆಗಳಲ್ಲಿ ಈಜಿದ್ದರು. 

ವರ್ಷದ ಹಿಂದೆ ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ತವರಿನ ಪ್ರೇಕ್ಷಕರೆದುರು ಅವರು ನಾಲ್ಕು ವೈಯಕ್ತಿಕ ಚಿನ್ನಗಳನ್ನು ಗೆದ್ದುಕೊಂಡಿದ್ದರು.

ಅಹ್ಮದ್‌ಗೆ ಚಿನ್ನ:

ಟ್ಯುನೀಷಿಯಾದ ಅಹ್ಮದ್‌ ಜಾವೊವದಿ ಅವರು ಪುರುಷರ 800 ಮೀ. ಫ್ರೀಸ್ಟೈಲ್‌ ಸ್ಪರ್ಧೆಯಲ್ಲಿ 7ನಿ.36.88 ಸೆ.ಗಳಲ್ಲಿ ‘ಟಚ್‌ವಾಲ್‌’ ಸ್ಪರ್ಶಿಸಿ ಮೊದಲ ಸ್ಥಾನ ಪಡೆದರು. ಇದು ಈ ಸ್ಪರ್ಧೆಯಲ್ಲಿ ಮೂರನೇ ಅತಿ ವೇಗದ ಅವಧಿಯಾಗಿದೆ. 20 ವರ್ಷ ವಯಸ್ಸಿನ ಜಾವೊವದಿ ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ನಾಲ್ಕನೇ ಸ್ಥಾನ ಪಡೆದಿದ್ದರು.

ಜರ್ಮನಿಯ ಸ್ವೆನ್‌ ಶ್ವಾರ್ಜ್‌ (7:39.96) ಮತ್ತು 400 ಮೀ. ಚಾಂಪಿಯನ್ ಲುಕಾಸ್‌ ಮೇರ್ಟನ್ಸ್‌ (7:40.19) ಕ್ರಮವಾಗಿ ಬೆಳ್ಳಿ ಮತ್ತುಕಂಚಿನ ಪದಕ ಪಡೆದರು. 

ಒಲಿಂಪಿಕ್ ಚಾಂಪಿಯನ್, ಐರ್ಲೆಂಡ್‌ನ ಡೇನಿಯಲ್ ವಿಫೆನ್ ಕೊನೆಯವರಾದರು.

ಮಿಂಚಿನ ವೇಗ:

ಮಿಂಚಿನಂತೆ ಈಜಿದ ಆಸ್ಟ್ರೇಲಿಯಾದ ಒ‘ಕ್ಯಾಲಗನ್ ಮಹಿಳೆಯರ 200 ಮೀ. ಫ್ರೀಸ್ಟೈಲ್‌ನಲ್ಲಿ ಸುಲಭವಾಗಿ ಚಿನ್ನ ಗೆದ್ದರು. ಇದು ವಿಶ್ವ ಚಾಂಪಿಯನ್‌ಷಿಪ್‌ಗಳಲ್ಲಿ ಅವರಿಗೆ ಹತ್ತನೇ ಚಿನ್ನ.

21 ವರ್ಷ ವಯಸ್ಸಿನ ಒ‘ಕ್ಯಾಲಗನ್ 1ನಿ.54.48 ಸೆ.ಗಳಲ್ಲಿ ಗುರಿತಲುಪಿದರು. ಚೀನಾದ ಲಿ ಬಿಂಗ್ಜೀ (1:54.52) ಮತ್ತು ಅಮೆರಿಕದ ಕ್ಲೇರ್ ವೀನ್‌ಸ್ಟೀನ್ (1:54.67) ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನ ಪಡೆದರು.

ವಿಶ್ವ ಈಜು: ಶಾನ್‌ ಗಂಗೂಲಿಗೆ 38ನೇ ಸ್ಥಾನ

ಸಿಂಗಪುರ: ಭಾರತದ ಈಜುತಾರೆ ಶಾನ್‌ ಗಂಗೂಲಿ ಅವರು ವಿಶ್ವ ಈಜು ಚಾಂಪಿಯನ್‌ಷಿಪ್ಸ್‌ನ ನಾಲ್ಕನದೇ ದಿನವಾದ ಬುಧವಾರ ಪುರುಷರ 200 ಮೀ. ಮೆಡ್ಲೆ ಸ್ಪರ್ಧೆಯಲ್ಲಿ 38ನೇ ಸ್ಥಾನ ಪಡೆದರು. ಕರ್ನಾಟಕದ 20 ವರ್ಷ ವಯಸ್ಸಿನ ಶಾನ್‌ ತಮ್ಮ ಹೀಟ್‌ನಲ್ಲಿ ಈ ಸ್ಪರ್ಧೆಯನ್ನು 2ನಿ.05.40 ಸೆ.ಗಳಲ್ಲಿ ಕ್ರಮಿಸಿದರು. ಮೊದಲ 16 ಸ್ಥಾನ ಪಡೆದವರು ಸೆಮಿಫೈನಲ್‌ಗೆ ಮುನ್ನಡೆಯುತ್ತಾರೆ.

ನಿಯಮ ಬದಲಿಸಲು ಚಿಂತನೆ

ಸಿಂಗಪುರ: ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಚೀನಾದ 12 ವರ್ಷ ವಯಸ್ಸಿನ ಬಾಲಕಿ ಯು ಝಿದಿ ಪಾಲ್ಗೊಂಡ ನಂತರ ಈ ಕೂಟಕ್ಕೆ ಪ್ರವೇಶಕ್ಕೆ ಸಂಬಂಧಿಸಿದ ನಿಯಮಗಳಲ್ಲಿ ಬದಲಾವಣೆ ಮಾಡುವ ಬಗ್ಗೆ ಪರಿಶೀಲನೆ ನಡೆಸುವುದಾಗಿ ವಿಶ್ವ ಅಕ್ವೆಟಿಕ್ಸ್‌ ಬುಧಾರ ತಿಳಿಸಿದೆ. ಚೀನಾದ ಬಾಲೆ 200 ಮೀ. ಮೆಡ್ಲೆ ಸ್ಪರ್ಧೆಯಲ್ಲಿ 0.06 ಸೆ.ಗಳಿಂದ ಪದಕ ತಪ್ಪಿಸಿಕೊಂಡಿದ್ದರು. ಆದರೆ ಅವರ ವೇಗ ಎದುರಾಳಿಗಳ ಮೆಚ್ಚುಗೆ ಪಡೆಯಿತು. ‘ಈ ವಯಸ್ಸಿನಲ್ಲಿ ಈಕೆಯ ಪ್ರತಿಭೆ ಅದ್ಭುತ’ ಎಂದು ಬೆಳ್ಳಿ ವಿಜೇತೆ ಅಮೆರಿಕದ ಅಲೆಕ್ಸ್‌ ವಾಲ್ಶ್ ಮೆಚ್ಚಿದ್ದರು. ವಿಶ್ವ ಅಕ್ವೆಟಿಕ್ಸ್ ನಿಯಮದ ಪ್ರಕಾರ ಈ ಚಾಂಪಿಯನ್‌ಷಿಪ್‌ನಲ್ಲಿ ಪಾಲ್ಗೊಳ್ಳಲು ಕನಿಷ್ಠ ವಯಸ್ಸು 14. ಆದರೆ ಅರ್ಹತಾ ಮಟ್ಟ ತಲುಪಿದಲ್ಲಿ ಅದಕ್ಕಿಂತ ಕಿರಿಯ ಸ್ಪರ್ಧಿಗಳಿಗೆ ಅವಕಾಶ ನೀಡಲಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.