ADVERTISEMENT

ಲಾಕ್‌ಡೌನ್: ಒಂದೇ ಊರಿನಲ್ಲಿ ಪತ್ನಿ, ಮಗಳಿದ್ದರೂ ಭೇಟಿಯಾಗಿಲ್ಲ!

ಸಾಯ್‌ ಕೇಂದ್ರದಲ್ಲಿರುವ ಭಾರತ ಹಾಕಿ ತಂಡದ ಆಟಗಾರ ಸುನಿಲ್

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2020, 4:43 IST
Last Updated 17 ಏಪ್ರಿಲ್ 2020, 4:43 IST
ಎಸ್‌.ವಿ. ಸುನಿಲ್
ಎಸ್‌.ವಿ. ಸುನಿಲ್   

ಬೆಂಗಳೂರು: ಭಾರತ ಹಾಕಿ ತಂಡದ ಆಟಗಾರ ಎಸ್‌.ವಿ. ಸುನಿಲ್ ಅವರ ಮನೆಗೂ ಭಾರತೀಯ ಕ್ರೀಡಾ ಪ್ರಾಧಿಕಾರದ ವಸತಿ ನಿಲಯ ಹೆಚ್ಚು ದೂರವೇನಿಲ್ಲ.

ಆದರೂ ಒಂದೂವರೆ ತಿಂಗಳಿಂದ ಸುನಿಲ್ ತಮ್ಮ ಪತ್ನಿ ಮತ್ತು ಒಂದು ವರ್ಷದ ಮಗಳನ್ನು ನೋಡಲು ಹೋಗಿಲ್ಲ.

ವಸತಿ ನಿಲಯದಲ್ಲಿರುವ ತಂಡದೊಂದಿಗೆ ಸುಮಾರು ಒಂದು ತಿಂಗಳಿಗೂ ಹೆಚ್ಚು ಕಾಲದಿಂದ ಉಳಿದುಕೊಂಡಿದ್ದಾರೆ. ಕೊರೊನಾ ವೈರಸ್‌ ಸೋಂಕು ತಡೆಗೆ ದಿಗ್ಬಂಧನ ಆರಂಭವಾಗುವ ಮುನ್ನವೇ ಅವರು ಇಲ್ಲಿದ್ದರು. ಅವರು ತಮ್ಮ ಮನೆಗೆ ತೆರಳಿ ಕುಟುಂಬದೊಂದಿಗೆ ಕಾಲ ಕಳೆಯುವ ಅವಕಾಶ ಉಳಿದೆಲ್ಲರಿಗಿಂತಲೂ ಹೆಚ್ಚು ಇತ್ತು.

ADVERTISEMENT

‘ಈ ಶಿಬಿರದಲ್ಲಿರುವ ಬಹಳಷ್ಟು ಆಟಗಾರರಿಗೆ ತಮ್ಮ ಕುಟುಂಬಗಳೊಂದಿಗೆ ಇರುವ ಆಸೆ ಇರುತ್ತದೆ. ನನ್ನ ಮನೆಯು ಇಲ್ಲಿಂದ 20 ಕಿಲೋಮೀಟರ್‌ ದೂರದಲ್ಲಿದೆ. ಆದರೆ ಕುಟುಂಬದ ಹಿತಾಸಕ್ತಿಯ ದೃಷ್ಟಿಯಿಂದ ನಾನು ಇಲ್ಲಿಯೇ ಇರಲು ನಿರ್ಧರಿಸಿದೆ. ಅದಕ್ಕೆ ಪತ್ನಿ ಕೂಡ ಸಮ್ಮತಿಸಿದರು’ ಎಂದು ಸುನಿಲ್ ಹೇಳುತ್ತಾರೆ.

ಮೂಲತಃ ಕೊಡಗು ಜಿಲ್ಲೆಯವರಾದ ಸುನಿಲ್ ಅವರ ಮನೆ ಬೆಂಗಳೂರಿನಲ್ಲಿದೆ. ಅವತ ಪತ್ನಿ ನಿಶಾ ಮತ್ತು ಒಂದು ವರ್ಷದ ಮಗಳು ಶಾನ್ವಿತಾ ಮನೆಯಲ್ಲಿದ್ದಾರೆ.

‘ಇಬ್ಬರಿಂದ ದೂರ ಇರುವುದು ಬಹಳ ಕಷ್ಟ. ಆದರೆ ಈಗಿರುವ ಪರಿಸ್ಥಿತಿಯಲ್ಲಿ ಹೊಂದಿಕೊಳ್ಳುವುದನ್ನು ಕಲಿಯಬೇಕು’ ಎಂದು ಹೇಳುತ್ತಾರೆ.

‘ಲಾಕ್‌ಡೌನ್ ಅವಧಿ ವಿಸ್ತರಣೆಯಾಗಿರುವುದು ಒಂದು ರೀತಿಯಲ್ಲಿ ಒಳ್ಳೆಯದೇ ಆಗಿದೆ. ತಂಡದಲ್ಲಿ ಎಲ್ಲ ಆಟಗಾರರೊಂದಿಗಿನ ಬಾಂಧವ್ಯ ಗಟ್ಟಿಯಾಗುತ್ತಿದೆ. ಇದರಿಂದ ತಂಡದ ಆತ್ಮವಿಶ್ವಾಸ ಹೆಚ್ಚುತ್ತದೆ. ಸಹ ಆಟಗಾರರು, ತರಬೇತಿ ಸಿಬ್ಬಂದಿಯೊಂದಿಗೆ ಹೆಚ್ಚುಹೊತ್ತು ಒಡನಾಟಕ್ಕೆ ಸಮಯ ಸಿಕ್ಕಿದೆ. ತಂಡವನ್ನು ಬಲಿಷ್ಠಗೊಳಿಸಲು ಈವೇಳೆಯನ್ನು ಬಳಸಿಕೊಳ್ಳುತ್ತಿದ್ದೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.