ADVERTISEMENT

ಬ್ಯಾಡ್ಮಿಂಟನ್: ಕಡಲ ನಗರಿಯಲ್ಲಿ ಸತೀಶ್‌, ಮಾನಸಿ ಜಯದ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 2 ನವೆಂಬರ್ 2025, 13:13 IST
Last Updated 2 ನವೆಂಬರ್ 2025, 13:13 IST
ಮಹಿಳೆಯರ ವಿಭಾಗದ ಪ್ರಶಸ್ತಿ ಗೆದ್ದ ಮಾನಸಿ ಸಿಂಗ್ ಹಾಗೂ ಪುರುಷರ ವಿಭಾಗದ ಚಿನ್ನ ಗಳಿಸಿದ ಋತ್ವಿಕ್‌ ಸತೀಶ್ ಕುಮಾರ್ ಪ್ರಜಾವಾಣಿ ಚಿತ್ರ 
ಮಹಿಳೆಯರ ವಿಭಾಗದ ಪ್ರಶಸ್ತಿ ಗೆದ್ದ ಮಾನಸಿ ಸಿಂಗ್ ಹಾಗೂ ಪುರುಷರ ವಿಭಾಗದ ಚಿನ್ನ ಗಳಿಸಿದ ಋತ್ವಿಕ್‌ ಸತೀಶ್ ಕುಮಾರ್ ಪ್ರಜಾವಾಣಿ ಚಿತ್ರ    

ಮಂಗಳೂರು: ಈ ಋತುವಿನಲ್ಲಿ ಸತತ ವೈಫಲ್ಯ ಕಂಡಿದ್ದ ತಮಿಳುನಾಡಿನ ಋತ್ವಿಕ್ ಸತೀಶ್ ಕುಮಾರ್, ಕಡಲ ನಗರಿಯಲ್ಲಿ ಪ್ರಶಸ್ತಿ ಗೆದ್ದು ಸಂಭ್ರಮಿಸಿದರು. ಛತ್ತೀಸಘಡದ ರೌನಕ್ ಚೌಹಾಣ್ ಅವರ ಸೀನಿಯರ್ ವಿಭಾಗದ ಪ್ರಶಸ್ತಿ ಕನಸನ್ನು ಸತೀಶ್ ಭಾನುವಾರ ಭಗ್ನಗೊಳಿಸಿದರು.

ನಗರದ ಉರ್ವ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಚೀಫ್ ಮಿನಿಸ್ಟರ್ಸ್ ಮಂಗಳೂರು ಇಂಡಿಯಾ ಇಂಟರ್‌ನ್ಯಾಷನಲ್ ಚಾಲೆಂಜ್ ಬ್ಯಾಡ್ಮಿಂಟನ್ ಟೂರ್ನಿಯ ಪುರುಷರ ಸಿಂಗಲ್ಸ್‌ ಫೈನಲ್‌ನಲ್ಲಿ ರೌನಕ್ ಎದುರು ಸತೀಶ್‌ 14–21, 21–19, 21–19ರಲ್ಲಿ ಜಯ ಸಾಧಿಸಿದರು. ಮಹಿಳೆಯರ ಸಿಂಗಲ್ಸ್‌ನಲ್ಲಿ ಅಸ್ಸಾಂನ ಅಸ್ಮಿತಾ ಚಾಲಿಹ ವಿರುದ್ಧ 21–17, 22–20ರ ಜಯಭೇರಿ ಮೊಳಗಿಸಿ ಉತ್ತರ ಪ್ರದೇಶದ ಮಾನಸಿ ಸಿಂಗ್‌ ಸೀನಿಯರ್ ವಿಭಾಗದ ಮೊದಲ ಅಂತರರಾಷ್ಟ್ರೀಯ ಪ್ರಶಸ್ತಿಯ ಖುಷಿ ಅನುಭವಿಸಿದರು. 

ಕಳೆದ ಋತುವಿನಲ್ಲಿ ಒಡಿಶಾ ಮಾಸ್ಟರ್ಸ್‌ ಮತ್ತು ತೆಲಂಗಾಣ ಚಾಲೆಂಜ್‌ ಪ್ರಶಸ್ತಿಗಳನ್ನು ಗೆದ್ದಿದ್ದ 22 ವರ್ಷ ವಯಸ್ಸಿನ ಋತ್ವಿಕ್ ಸತೀಶ್‌ ಮಂಗಳೂರು ಟೂರ್ನಿಯಲ್ಲಿ ಅಗ್ರ ಶ್ರೇಯಾಂಕ ಹೊಂದಿದ್ದರು. ಅವರಿಗೆ ಡ್ರಾಪ್ ಶಾಟ್‌ ಮತ್ತು ಕ್ರಾಸ್ ಕೋರ್ಟ್ ಸ್ಮ್ಯಾಷ್‌ಗಳ ಮೂಲಕ ಮಿಂಚಿದ 18 ವರ್ಷದ ರೌನಕ್ ಪ್ರಬಲ ಪೈಪೋಟಿ ನೀಡಿದರು. 

ADVERTISEMENT

6–1ರ ಮುನ್ನಡೆಯೊಂದಿಗೆ ಪಂದ್ಯದ ಆರಂಭದಲ್ಲಿ ಭರವಸೆ ಮೂಡಿಸಿದ ರೌನಕ್ ಸ್ಮ್ಯಾಷ್‌ನೊಂದಿಗೆ ಮೊದಲ ಗೇಮ್‌ ಗೆದ್ದುಕೊಂಡರು. ಎರಡನೇ ಗೇಮ್‌ನಲ್ಲಿ ಸತೀಶ್ ಚೇತರಿಸಿಕೊಂಡರು. 8–8, 15–15, 17–17ರ ರೋಚಕ ಕ್ಷಣಗಳ ನಂತರ ಸತೀಶ್ ಗೆಲುವು ಸಾಧಿಸಿದರು. 3ನೇ ಗೇಮ್‌ನಲ್ಲಿ ಇಬ್ಬರೂ 3–3, 7-7, 8-8, 10-10, 11–11, 15–15ರ ಸಮಬಲದ ಹೋರಾಟ ಪ್ರದರ್ಶಿಸಿದರು. ಕೊನೆಯಲ್ಲಿ ಸತೀಶ್ ಪಾರಮ್ಯ ಮೆರೆದರು. 

ಶಾಂತಚಿತ್ತದ ಆಟ

ಮಹಿಳೆಯರ ಸಿಂಗಲ್ಸ್ ಫೈನಲ್‌ನಲ್ಲಿ ಮಾನಸಿ ಮತ್ತು ಎಡಗೈ ಆಟಗಾರ್ತಿ ಅಸ್ಮಿತಾ ಶಾಂತಚಿತ್ತ ಆಟ ಪ್ರದರ್ಶಿಸಿದರು. ಕಳೆದ ಬಾರಿ 2 ಪ್ರಶಸ್ತಿ ಗೆದ್ದಿರುವ ಅಸ್ಮಿತಾ ಪಂದ್ಯದ ಆರಂಭದಲ್ಲಿ ಸತತ ಐದು ಪಾಯಿಂಟ್ ಗಳಿಸಿ ನಿರೀಕ್ಷೆ ಮೂಡಿಸಿದರು. ನಿಧಾನಕ್ಕೆ ಹಿಡಿತ ಸಾಧಿಸಿದ ಮಾನಸಿ 11–11 ಮತ್ತು 16–16ರಲ್ಲಿ ಸಮಬಲ ಸಾಧಿಸಿದ ನಂತರ ಸುಲಭ ಜಯ ಗಳಿಸಿದರು. ಎರಡನೇ ಗೇಮ್‌ನಲ್ಲಿ ಇಬ್ಬರೂ ಜಿದ್ದಾಜಿದ್ದಿ ಪ್ರದರ್ಶಿಸಿದರು. 10–10, 16–16, 18–18ರ ಹಾದಿಯಲ್ಲಿ ಸಾಗಿದ ಗೇಮ್‌ 20–20ರಲ್ಲಿ ಸಮ ಮಾಡಿಕೊಂಡರೂ ಸ್ವಯಂ ತಪ್ಪು ಎಸಗಿ ಎರಡು ಪಾಯಿಂಟ್‌ ಬಿಟ್ಟುಕೊಟ್ಟು ಅಸ್ಮಿತಾ ತಲೆಬಾಗಿದರು. 

ಧ್ರುವ–ಮನೀಶಾ ಜಯಭೇರಿ

ಮಿಶ್ರ ಡಬಲ್ಸ್‌ ಫೈನಲ್‌ನಲ್ಲಿ ಸೋಲಿನ ಆತಂಕ ಮೀರಿ ನಿಂತ ಭಾರತದ ಧ್ರುವ ರಾವತ್ ಮತ್ತು ಮನೀಶಾ ಕೆ ಮೂರು ಗೇಮ್‌ಗಳ ರೋಚಕ ಪಂದ್ಯದಲ್ಲಿ  ಥಾಯ್ಲೆಂಡ್‌ನ ನಪಪಕೊರ್ನ್ ತುಂಗಸ್ತನ್ ಮತ್ತು ತನವಿನ್ ಮಡೀ ವಿರುದ್ಧ 18–21, 21–18, 22–20ರಲ್ಲಿ ಗೆಲುವು ಸಾಧಿಸಿದರು.  

ಪುರುಷರ ಡಬಲ್ಸ್‌ ಫೈನಲ್‌ನಲ್ಲಿ ಸಿಂಗಪುರದ ಯೆಂಗ್ ಕೀಟ್ ವೆಸ್ಲಿ ಕೊಹ್ ಮತ್ತು ಜುನ್ಸುಕೆ ಕುಬೊ ತಮ್ಮದೇ ದೇಶದ ಡೊನೊವಾನ್ ವಿಲಿಯರ್ಸ್ ವೀ ಹಾಗೂ ಹೊವಿನ್ ವಾಂಗ್ ವಿರುದ್ಧ 21–12, 21–17ರಲ್ಲಿ ಜಯ ಸಾಧಿಸಿದರು. ಮಹಿಳೆಯರ ಡಬಲ್ಸ್‌ ಫೈನಲ್‌ನಲ್ಲಿ ಥಾಯ್ಲೆಂಡ್‌ ಆಟಗಾರ್ತಿಯರಾದ ಹತೈತಿಪ್‌ ಮಿಜಾದ್‌ ಮತ್ತು ನಪಪಕೊರ್ನ್ ತುಂಗಸ್ತನ್ ಭಾರತದ ಶ್ರೀನಿಧಿ ನಾರಾಯಣ್‌–ರೆಶಿಕಾ ಉದಯಸೂರ್ಯನ್ ಅವರನ್ನು 21–7, 21–11ರಲ್ಲಿ ಮಣಿಸಿದರು.

ಮಹಿಳೆಯರ ವಿಭಾಗದ ಪ್ರಶಸ್ತಿ ಗೆದ್ದ ಮಾನಸಿ ಸಿಂಗ್ ಅವರು ಷಟಲ್ ಹಿಂದಿರುಗಿಸಿದ ವಿಧಾನ ಪ್ರಜಾವಾಣಿ ಚಿತ್ರ : ಫಕ್ರುದ್ದೀನ್ ಎಚ್
ಪುರುಷರ ವಿಭಾಗದ ಪ್ರಶಸ್ತಿ ಗಳಿಸಿದ ಋತ್ವಿಕ್‌ ಸತೀಶ್ ಕುಮಾರ್ ಆಟದ ಶೈಲಿ ಪ್ರಜಾವಾಣಿ ಚಿತ್ರ : ಫಕ್ರುದ್ದೀನ್ ಎಚ್
ಮಹಿಳೆಯರ ವಿಭಾಗದ ಪ್ರಶಸ್ತಿ ಗೆದ್ದ ಮಾನಸಿ ಸಿಂಗ್ ಅವರ ಆಟದ ಭಂಗಿ ಪ್ರಜಾವಾಣಿ ಚಿತ್ರ : ಫಕ್ರುದ್ದೀನ್ ಎಚ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.