ADVERTISEMENT

ವಿಶ್ವ ಈಜು ಚಾಂಪಿಯನ್‌ಷಿಪ್‌: ಚಿನ್ನದ ಬೇಟೆ ಆರಂಭಿಸಿದ ಮರ್ಷಾನ್‌

ಏಜೆನ್ಸೀಸ್
Published 31 ಜುಲೈ 2025, 15:36 IST
Last Updated 31 ಜುಲೈ 2025, 15:36 IST
<div class="paragraphs"><p>ಚಿನ್ನ ಗೆದ್ದ ಸಂಭ್ರಮದಲ್ಲಿ&nbsp;ಫ್ರಾನ್ಸ್‌ನ ಲೆಯಾನ್ ಮರ್ಷಾನ್&nbsp;&nbsp;</p></div>

ಚಿನ್ನ ಗೆದ್ದ ಸಂಭ್ರಮದಲ್ಲಿ ಫ್ರಾನ್ಸ್‌ನ ಲೆಯಾನ್ ಮರ್ಷಾನ್  

   

ಸಿಂಗಪುರ: ಫ್ರಾನ್ಸ್‌ನ ಈಜುತಾರೆ ಲೆಯಾನ್ ಮರ್ಷಾನ್ ಅವರು ಸಿಂಗಪುರದಲ್ಲಿ ನಡೆಯುತ್ತಿರುವ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನದ ಬೇಟೆ ಆರಂಭಿಸಿದರು. ಮತ್ತೊಂದೆಡೆ ಕೆನಡಾದ ಸಮ್ಮರ್‌ ಮೆಕಿಂಟೋಷ್‌ ಹ್ಯಾಟ್ರಿಕ್‌ ಸ್ವರ್ಣ ಪದಕಕ್ಕೆ ಕೊರಳೊಡ್ಡಿದರು.

ಪುರುಷರ 200 ಮೀಟರ್‌ ಮೆಡ್ಲೆಯ ಸೆಮಿಫೈನಲ್‌ನಲ್ಲಿ ವಿಶ್ವದಾಖಲೆ ನಿರ್ಮಿಸಿದ್ದ 23 ವರ್ಷದ ಮರ್ಷಾನ್, ಗುರುವಾರ ನಡೆದ ಫೈನಲ್‌ನಲ್ಲಿ ನಿರೀಕ್ಷೆಯಂತೆ ಅಗ್ರಸ್ಥಾನಿಯಾದರು. ಅವರು 1 ನಿಮಿಷ 53.68 ಸೆಕೆಂಡ್‌ಗಳಲ್ಲಿ ಗುರಿ ತಲುಪಿದರು. ಇದು ಎರಡನೇ ಅತಿವೇಗ ದಾಖಲೆಯಾಯಿತು. 

ADVERTISEMENT

ಮರ್ಷಾನ್‌ ಅವರು ಬುಧವಾರ ನಡೆದ ಸೆಮಿಫೈನಲ್‌ನಲ್ಲಿ 1ನಿ.52.69 ಸೆ.ಗಳಲ್ಲಿ ಗುರಿ ಮುಟ್ಟುವ ಮೂಲಕ ಅಮೆರಿಕದ ರಯಾನ್ ಲಾಕ್ಟಿ 2011ರಲ್ಲಿ ಸ್ಥಾಪಿಸಿದ್ದ ದಾಖಲೆಯನ್ನು (1:54.00) ಮುರಿದಿದ್ದರು. 400 ಮೀಟರ್‌ ಮೆಡ್ಲೆನಲ್ಲೂ ಮರ್ಷಾನ್‌ ಕಣಕ್ಕೆ ಇಳಿಯುವರು. ಈ ವಿಭಾಗದ ವಿಶ್ವದಾಖಲೆ ಅವರ ಹೆಸರಿನಲ್ಲೇ ಇದೆ.

ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಮರ್ಷಾನ್‌ ಅವರಿಗೆ ಇದು ಆರನೇ ಚಿನ್ನ. 2022ರ ಬುಡಾಪೆಸ್ಟ್‌ನಲ್ಲಿ ಎರಡು ಮತ್ತು 2023ರ ಫುಕುವೋಕಾದಲ್ಲಿ ಮೂರು ಸ್ವರ್ಣ ಗೆದ್ದಿದ್ದರು. ಕಳೆದ ವರ್ಷ ತವರಿನಲ್ಲಿ ನಡೆದ ಒಲಿಂಪಿಕ್ಸ್‌ನಲ್ಲಿ ನಾಲ್ಕು ಚಿನ್ನ ಸೇರಿದಂತೆ ಐದು ಪದಕ ತಮ್ಮದಾಗಿಸಿಕೊಂಡಿದ್ದರು. 

ಅಮೆರಿಕದ ಶೈನ್ ಕಾಸಸ್ (1:54.30) ಮತ್ತು ಹಂಗೇರಿಯ ಹ್ಯೂಬರ್ಟ್ ಕೋಸ್ (1:55.34) ಕ್ರಮವಾಗಿ ಬೆಳ್ಳಿ ಮತ್ತು ಕಂಚಿನ ಪದಕ ಗೆದ್ದರು. 

ಮೆಕಿಂಟೋಷ್‌ಗೆ ಹ್ಯಾಟ್ರಿಕ್‌: 18 ವರ್ಷದ ಮೆಕಿಂಟೋಷ್‌ ಅವರು ಮಹಿಳೆಯರ 200 ಮೀಟರ್‌ ಬಟರ್‌ಫ್ಲೈನಲ್ಲಿ ವೈಯಕ್ತಿಕ ಶ್ರೇಷ್ಠ ಸಾಧನೆಯೊಂದಿಗೆ ಚಾಂಪಿಯನ್‌ ಆಗಿ ಹೊರಹೊಮ್ಮಿದರು. ಅವರು 400 ಮೀ. ಬಟರ್‌ಫ್ಲೈ ಮತ್ತು 200 ಮೀ. ಮೆಡ್ಲೆನಲ್ಲಿ ಈಗಾಗಲೇ ಚಿನ್ನ ಗೆದ್ದಿದ್ದಾರೆ. 

ಇಲ್ಲಿ ಐದು ಸ್ವರ್ಣ ಗೆಲ್ಲುವ ಪ್ರಯತ್ನದಲ್ಲಿರುವ ಮೆಕಿಂಟೋಷ್‌, ಈಜು ದಂತಕತೆ ಮೈಕೆಲ್ ಫೆಲ್ಪ್ಸ್ಅವರ ದಾಖಲೆಗೆ ಮತ್ತಷ್ಟು ಹತ್ತಿರವಾದರು. 2007ರ ಕೂಟದಲ್ಲಿ ಅಮೆರಿಕದ ಫೆಲ್ಪ್ಸ್ಐದು ವೈಯಕ್ತಿಕ ಚಿನ್ನ ಸೇರಿದಂತೆ ಏಳು ಸ್ವರ್ಣ ಗೆದ್ದಿದ್ದರು. 

ಮೆಕಿಂಟೋಷ್‌ 2 ನಿಮಿಷ 01.99 ಸೆಕೆಂಡ್‌ಗಳಲ್ಲಿ ಗುರಿ ಮುಟ್ಟಿ, ಕೂದಲೆಳೆಯ ಅಂತರದಲ್ಲಿ ವಿಶ್ವದಾಖಲೆ ಅವಕಾಶ ತಪ್ಪಿಸಿಕೊಂಡರು. ಚೀನಾದ ಲಿಯು ಜಿ (2ನಿ.01.81) ಈ ವಿಭಾಗದಲ್ಲಿ ದಾಖಲೆ ಹೊಂದಿದ್ದಾರೆ. ಆದರೆ, ಕೆನಡಾದ ತಾರೆ ಎರಡನೇ ಅತಿ ವೇಗದ ಸಮಯದಲ್ಲಿ ಗುರಿ ತಲುಪಿದರು. 

ಅಮೆರಿಕದ ರೇಗನ್ ಸ್ಮಿತ್ (2:04.99) ಬೆಳ್ಳಿ ಪದಕ ಗೆದ್ದರೆ, ಆಸ್ಟ್ರೇಲಿಯಾದ ಎಲಿಜಬೆತ್ ಡೆಕ್ಕರ್ಸ್ (2:06.12) ಕಂಚು ತಮ್ಮದಾಗಿಸಿಕೊಂಡರು. ಚೀನಾದ 12 ವರ್ಷದ ಯು ಝಿದಿ (2:06.43) ಮತ್ತೆ ಅಲ್ಪ ಅಂತರದಲ್ಲಿ ಪದಕ ವಂಚಿತರಾದರು. 200 ಮೀಟರ್‌ ಮೆಡ್ಲೆ ಬಳಿಕ ಇಲ್ಲೂ ನಾಲ್ಕನೇ ಸ್ಥಾನ ಗಳಿಸಿದರು. 

ಡೇವಿಡ್‌ಗೆ ಎರಡನೇ ಚಿನ್ನ: 

ರುಮೇನಿಯಾದ ಈಜುಪಟು ಡೇವಿಡ್ ಪೊಪೊವಿಸಿ ಡಬಲ್‌ ಚಿನ್ನದ ಸಾಧನೆ ಮೆರೆದರು. 200 ಮೀಟರ್ ಫ್ರೀಸ್ಟೈಲ್‌ನಲ್ಲಿ ಚಿನ್ನ ಗೆದ್ದಿದ್ದ ಅವರು, 100 ಮೀಟರ್ ಫ್ರೀಸ್ಟೈಲ್‌ನಲ್ಲೂ ಚಾಂಪಿಯನ್‌ ಆದರು. 

20 ವರ್ಷದ ಪೊಪೊವಿಸಿ 46.51 ಸೆಕೆಂಡ್‌ಗಳಲ್ಲಿ ಗುರಿ ತಲುಪಿದರು. ಅಮೆರಿಕದ ಜ್ಯಾಕ್ ಅಲೆಕ್ಸಿ ಬೆಳ್ಳಿ (46.92) ಮತ್ತು ಆಸ್ಟ್ರೇಲಿಯಾದ ಕೈಲ್ ಚಾಲ್ಮರ್ಸ್ ಕಂಚಿನ ಪದಕ (47.17) ಪಡೆದರು.

ಅಮೆರಿಕದ ಕ್ಯಾಥರೀನ್ ಬರ್ಕಾಫ್ ( (27.08 ಸೆಕೆಂಡ್‌) ಅವರು ಮಹಿಳೆಯರ 50 ಮೀಟರ್ ಬ್ಯಾಕ್‌ಸ್ಟ್ರೋಕ್‌ನಲ್ಲಿ ಸ್ವದೇಶದ ರೇಗನ್ ಸ್ಮಿತ್ (27.25) ಅವರ ಸವಾಲನ್ನು ಮೆಟ್ಟಿನಿಂತು ಚಾಂಪಿಯನ್‌ ಆದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.