ADVERTISEMENT

ವಿಶ್ವ ರ್‍ಯಾಪಿಡ್ ಚೆಸ್‌: ಮ್ಯಾಗ್ನಸ್‌ ಕಾರ್ಲ್‌ಸನ್‌ಗೆ ಆರನೇ ಬಾರಿ ಕಿರೀಟ

ಪಿಟಿಐ
Published 29 ಡಿಸೆಂಬರ್ 2025, 16:22 IST
Last Updated 29 ಡಿಸೆಂಬರ್ 2025, 16:22 IST
ಮ್ಯಾಗ್ನಸ್‌ ಕಾರ್ಲ್‌ಸನ್‌
ಮ್ಯಾಗ್ನಸ್‌ ಕಾರ್ಲ್‌ಸನ್‌   

ದೋಹಾ: ವಿಶ್ವದ ಅಗ್ರಮಾನ್ಯ ಆಟಗಾರ ಮ್ಯಾಗ್ನಸ್‌ ಕಾರ್ಲ್‌ಸನ್‌ ಅವರು ಫಿಡೆ ವಿಶ್ವ ರ್‍ಯಾಪಿಡ್‌ ಚೆಸ್‌ ಚಾಂಪಿಯನ್‌ಷಿಪ್‌ನಲ್ಲಿ ಆರನೇ ಬಾರಿ ‘ರಾಜ’ನಾಗಿ ಮೆರೆದರು. ಭಾನುವಾರ ಮುಕ್ತಾಯಗೊಂಡ ಈ ಚಾಂಪಿಯನ್‌ಷಿಪ್‌ನಲ್ಲಿ ಭಾರತದ ಅರ್ಜುನ್ ಇರಿಗೇಶಿ ಮೂರನೇ ಸ್ಥಾನ ಪಡೆದರು.

ಮಹಿಳೆಯರ ವಿಭಾಗದಲ್ಲಿ ಅಗ್ರ ಐದರಲ್ಲಿ ಭಾರತದ ಮೂವರು ಸ್ಥಾನ ಗಳಿಸಿದ್ದು ಕಡಿಮೆ ಸಾಧನೆಯೇನೂ ಆಗಿರಲಿಲ್ಲ. ಕಳೆದ ವರ್ಷದ ಚಾಂಪಿಯನ್ ಕೋನೇರು ಹಂಪಿ ಮೂರನೇ ಸ್ಥಾನ ಗಳಿಸಿದರು.

ಓಪನ್‌ ವಿಭಾಗದಲ್ಲಿ ಕಾರ್ಲ್‌ಸನ್‌ 13 ಸುತ್ತುಗಳಲ್ಲಿ 10.5 ಅಂಕ (9 ಗೆಲುವು, 3 ಡ್ರಾ, 1 ಸೋಲು) ಗಳಿಸಿದರು. ರಷ್ಯಾದ ವ್ಲಾದಿಮಿರ್ ಆರ್ಟೆಮೀವ್‌ (9.5) ಎರಡನೇ ಸ್ಥಾನ ಗಳಿಸಿದರು. ಇಷ್ಟೇ ಅಂಕ ಗಳಿಸಿದ ಅರ್ಜುನ್ ಮತ್ತು ಅಮೆರಿಕದ ಹ್ಯಾನ್ಸ್ ಮೋಕ್‌ ನೀಮನ್, ಡೊಮಿಂಗೆಝ್ ಪೆರೆಝ್ ಲೀನಿಯರ್ ಅವರು ಟೈಬ್ರೇಕ್ ಆಧಾರದಲ್ಲಿ ಕ್ರಮವಾಗಿ ಮೂರು ನಾಲ್ಕು ಮತ್ತು ಐದನೇ ಸ್ಥಾನ ಪಡೆದರು. ಅರ್ಜುನ್ ಎಂಟು ಪಂದ್ಯ ಗೆದ್ದು, 3 ಡ್ರಾ ಮಾಡಿಕೊಂಡು, ಎರಡು ಸೋತರು. ಅದರಲ್ಲೂ 11ನೇ ಸುತ್ತಿನ ಸೋಲು ಅವರ ಪ್ರಶಸ್ತಿ ಆಸೆಗೆ ಕಡಿವಾಣ ಹಾಕಿತು. ಒಟ್ಟು 247 ಮಂದಿ ಕಣದಲ್ಲಿದ್ದರು.

ADVERTISEMENT

ಮಹಿಳೆಯರ ವಿಭಾಗದಲ್ಲಿ ಹಾಲಿ ಚಾಂಪಿಯನ್, ಭಾರತದ ಕೋನೇರು ಹಂಪಿ ಮೂರನೇ ಸ್ಥಾನ ಪಡೆಯಬೇಕಾಯಿತು. ರಷ್ಯಾದ ಅಲೆಕ್ಸಾಂಡ್ರಾ ಗೊರ್ಯಾಚ್ಕಿನಾ ಚಾಂಪಿಯನ್ ಮುಕುಟ ಧರಿಸಿದರು. ಅಲೆಕ್ಸಾಂಡ್ರಾ ಮತ್ತು ಚೀನಾದ ಝು ಜಿನೆರ್ ಅವರು 11 ಸುತ್ತಿನ ಬಳಿಕ ತಲಾ 8.5 ಅಂಕ ಗಳಿಸಿದ್ದರು. ಟೈಬ್ರೇಕರ್‌ನಲ್ಲಿ ಅಲೆಕ್ಸಾಂಡ್ರಾ ಗೆಲುವು ಸಾಧಿಸಿದರು.

ಭಾರತದ ಸವಿತಾ ಶ್ರೀ, ವೈಶಾಲಿ ರಮೇಶಬಾಬು (ತಲಾ 8 ಅಂಕ) ಅವರು ಕ್ರಮವಾಗಿ ನಾಲ್ಕು ಮತ್ತು ಐದನೇ ಸ್ಥಾನ ಗಳಿಸಿದರು. ವಿಶ್ವಕಪ್ ಚಾಂಪಿಯನ್ ದಿವ್ಯಾ ದೇಶಮುಖ್ ಎಂಟನೇ ಸ್ಥಾನ ಗಳಿಸಿದರು. ಈ ವಿಭಾಗದಲ್ಲಿ 141 ಆಟಗಾರ್ತಿಯರು ಕಣದಲ್ಲಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.