ADVERTISEMENT

ಮಲೇಷ್ಯಾ ಹಾಕಿ ತಂಡಕ್ಕೆ ಓಲ್ಟಮನ್ಸ್‌ ಕೋಚ್‌

ಪಿಟಿಐ
Published 1 ಅಕ್ಟೋಬರ್ 2018, 17:03 IST
Last Updated 1 ಅಕ್ಟೋಬರ್ 2018, 17:03 IST
ರೋಲಂಟ್‌ ಓಲ್ಟಮನ್ಸ್‌
ರೋಲಂಟ್‌ ಓಲ್ಟಮನ್ಸ್‌   

ಕ್ವಾಲಾಲಂಪುರ: ನೆದರ್ಲೆಂಡ್ಸ್‌ನ ರೋಲಂಟ್‌ ಓಲ್ಟಮನ್ಸ್‌ ಅವರನ್ನು ಮಲೇಷ್ಯಾ ಪುರುಷರ ಹಾಕಿ ತಂಡದ ಮುಖ್ಯ ಕೋಚ್‌ ಆಗಿ ನೇಮಿಸಲಾಗಿದೆ.

ಈ ವಿಷಯವನ್ನು ಮಲೇಷ್ಯಾ ಹಾಕಿ ಕಾನ್ಫೆಡರೇಷನ್‌ನ (ಎಂಎಚ್‌ಸಿ) ಅಧ್ಯಕ್ಷ ದಾತುಕ್‌ ಸೆರಿ ಸುಬಹಾನ್‌ ಕಮಲ್‌ ಸೋಮವಾರ ತಿಳಿಸಿದ್ದಾರೆ.

‘ಮಲೇಷ್ಯಾ ತಂಡದ ನೂತನ ಕೋಚ್‌ ಆಗಿ ನೇಮಕವಾಗಿರುವ ಓಲ್ಟಮನ್ಸ್‌ ಅವರಿಗೆ ಅಭಿನಂದನೆಗಳು. ಮಲೇಷ್ಯಾದಲ್ಲಿ ಹಾಕಿ ಕ್ರೀಡೆಯ ಬೆಳವಣಿಗೆಗೆ ಪೂರಕವಾಗಿ ಕೆಲಸ ಮಾಡಿ. ನಿಮಗೆ ಒಳ್ಳೆಯದಾಗಲಿ’ ಎಂದು ಎಂಎಚ್‌ಸಿ ಟ್ವೀಟ್‌ ಮಾಡಿದೆ.

ADVERTISEMENT

ಮಲೇಷ್ಯಾ ತಂಡ ಈ ಬಾರಿಯ ಏಷ್ಯನ್‌ ಕ್ರೀಡಾಕೂಟದ ಫೈನಲ್‌ನಲ್ಲಿ ಜಪಾನ್‌ ಎದುರು ಸೋತಿತ್ತು. ಹೀಗಾಗಿ 2020ರ ಟೋಕಿಯೊ ಒಲಿಂಪಿಕ್ಸ್‌ಗೆ ನೇರ ಅರ್ಹತೆ ಗಳಿಸುವ ಕನಸು ಭಗ್ನಗೊಂಡಿತ್ತು. ಒಲಿಂಪಿಕ್ಸ್‌ ಅರ್ಹತಾ ಟೂರ್ನಿಗೆ ತಂಡವನ್ನು ಸಜ್ಜುಗೊಳಿಸುವ ಸವಾಲು ಈಗ ಓಲ್ಟಮನ್ಸ್‌ ಮುಂದಿದೆ.

ಓಲ್ಟಮನ್ಸ್‌ ಅವರು ಈ ಹಿಂದೆ ಭಾರತ ತಂಡದ ತರಬೇತುದಾರರಾಗಿ ಕೆಲಸ ಮಾಡಿದ್ದರು. ಅವರ ಮಾರ್ಗದರ್ಶನದಲ್ಲಿ ತಂಡ ವಿಶ್ವ ಕ್ರಮಾಂಕ ಪಟ್ಟಿಯಲ್ಲಿ ಆರನೇ ಸ್ಥಾನಕ್ಕೇರಿತ್ತು. ಹೋದ ವರ್ಷ ನಡೆದಿದ್ದ ಕೆಲ ಅಂತರರಾಷ್ಟ್ರೀಯ ಟೂರ್ನಿಗಳಲ್ಲಿ ತಂಡ ಕಳಪೆ ಸಾಮರ್ಥ್ಯ ತೋರಿದ್ದರಿಂದ ಅವರನ್ನು ಹುದ್ದೆಯಿಂದ ವಜಾಗೊಳಿಸ ಲಾಗಿತ್ತು. ಈ ವರ್ಷದ ಮಾರ್ಚ್‌ನಲ್ಲಿ ಪಾಕಿಸ್ತಾನ ತಂಡದ ಕೋಚ್‌ ಆಗಿ ನೇಮಕಗೊಂಡಿದ್ದ 64 ವರ್ಷ ವಯಸ್ಸಿನ ಓಲ್ಟಮನ್ಸ್‌ ಅವರನ್ನು ಆರು ತಿಂಗಳ ನಂತರ ಈ ಹುದ್ದೆಯಿಂದ ತೆಗೆದುಹಾಕಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.