ಕಿದಂಬಿ ಶ್ರೀಕಾಂತ್
ಪಿಟಿಐ
ಕ್ವಾಲಾಲಂಪುರ: ಮೂರು ಗೇಮ್‌ಗಳ ಕಠಿಣ ಹೋರಾಟದಲ್ಲಿ ಫ್ರಾನ್ಸ್‌ನ ಟೋಮಾ ಜೂನಿಯರ್ ಪೊಪೊವ್ ಅವರ ಸವಾಲು ಬದಿಗೊತ್ತಿದ ಭಾರತದ ಅನುಭವಿ ಆಟಗಾರ ಕಿದಂಬಿ ಶ್ರೀಕಾಂತ್ ಅವರು ಮಲೇಷ್ಯಾ ಮಾಸ್ಟರ್ಸ್ ಬ್ಯಾಡ್ಮಿಂಟನ್ ಟೂರ್ನಿಯ ಪುರುಷರ ಸಿಂಗಲ್ಸ್ ಸೆಮಿಫೈನಲ್‌ಗೆ ದಾಪುಗಾಲಿಟ್ಟರು.
ವಿಶ್ವದ ಮಾಜಿ ಅಗ್ರ ಆಟಗಾರ ಹಾಗೂ ಸದ್ಯ 65ನೇ ಕ್ರಮಾಂಕದಲ್ಲಿರುವ ಶ್ರೀಕಾಂತ್, ಶುಕ್ರವಾರ ನಡೆದ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ 18ನೇ ಕ್ರಮಾಂಕದ ಪೊಪೊವ್ ಅವರನ್ನು 24–22, 17–21, 22–20 ರಿಂದ ಸೋಲಿಸಿದರು. ತುರುಸಿನ ಪೈಪೋಟಿ ಕಂಡ ಈ ಪಂದ್ಯ ಒಂದೂಕಾಲು ಗಂಟೆ ನಡೆಯಿತು.
ಲಯಕ್ಕೆ ಮರಳುವ ಯತ್ನದಲ್ಲಿರುವ ಶ್ರೀಕಾಂತ್ ಒಂದು ವರ್ಷದ ಅವಧಿಯಲ್ಲಿ ಇದೇ ಮೊದಲ ಬಾರಿ ಸೆಮಿಫೈನಲ್ ತಲುಪಿದ್ದಾರೆ. ಅವರು ಫೈನಲ್ ತಲುಪುವ ಹಾದಿಯಲ್ಲಿ ಜಪಾನ್‌ನ ಯುಶಿ ತನಾಕ ಅವರ ಸವಾಲನ್ನು ಎದುರಿಸಲಿದ್ದಾರೆ. ಎಂಟರ ಘಟ್ಟದ ಇನ್ನೊಂದು ಪಂದ್ಯದಲ್ಲಿ ತನಾಕ 21–18, 16–21, 21–6 ರಿಂದ ಫ್ರಾನ್ಸ್‌ನ ಕ್ರಿಸ್ಟೊ ಪೊಪೊವ್ ಅವರನ್ನು ಹಿಮ್ಮೆಟ್ಟಿಸಿದರು. ಕ್ರಿಸ್ಟೊ ಅವರು ಟೋಮಾ ಪೊಪೊವ್ ಅವರ ಸೋದರ.
ಶ್ರೀಕಾಂತ್ ಅವರು ಟೂರ್ನಿಯಲ್ಲಿ ಸವಾಲು ಉಳಿಸಿಕೊಂಡಿರುವ ಭಾರತದ ಏಕೈಕ ಸ್ಪರ್ಧಿ ಎನಿಸಿದ್ದಾರೆ. ಇದಕ್ಕೆ ಮೊದಲು, ಮಿಶ್ರ ಡಬಲ್ಸ್ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಧ್ರುವ್ ಕಪಿಲಾ– ತನಿಶಾ ಕ್ರಾಸ್ಟೊ ಜೋಡಿ ಹೊರಬಿದ್ದಿತ್ತು. ಭಾರತದ ಜೋಡಿ 35 ನಿಮಿಷಗಳಲ್ಲಿ ಇತ್ಯರ್ಥಗೊಂಡ ಪಂದ್ಯದಲ್ಲಿ 22–24, 13–21 ರಿಂದ ಚೀನಾದ ಜಿಯಾಂಗ್ ಝೆನ್ ಬಾಂಗ್– ವೀ ಯಾ ಷಿನ್ ಜೋಡಿಯೆದುರು ಸೋಲನುಭವಿಸಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.