ADVERTISEMENT

ಮಲೇಷ್ಯಾ ಓಪನ್‌ ಬ್ಯಾಡ್ಮಿಂಟನ್‌: ಟ್ರೀಸಾ– ಗಾಯತ್ರಿ ಶುಭಾರಂಭ

ಪಿಟಿಐ
Published 7 ಜನವರಿ 2025, 20:00 IST
Last Updated 7 ಜನವರಿ 2025, 20:00 IST
<div class="paragraphs"><p>ಭಾರತದ ಗಾಯತ್ರಿ ಗೋಪಿಚಂದ್– ಟ್ರೀಸಾ ಜೋಳಿ</p></div>

ಭಾರತದ ಗಾಯತ್ರಿ ಗೋಪಿಚಂದ್– ಟ್ರೀಸಾ ಜೋಳಿ

   

ಕೌಲಾಲಂಪುರ: ಭಾರತದ ಟ್ರೀಸಾ ಜೋಳಿ ಮತ್ತು ಗಾಯತ್ರಿ ಗೋಪಿಚಂದ್‌ ಅವರು ಇಲ್ಲಿ ಮಂಗಳವಾರ ಆರಂಭವಾದ ಮಲೇಷ್ಯಾ ಓಪನ್‌ ಸೂಪರ್ 1000 ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಶುಭಾರಂಭ ಮಾಡಿದರು.

ಮಹಿಳೆಯರ ಡಬಲ್ಸ್‌ನ ಮೊದಲ ಸುತ್ತಿನಲ್ಲಿ ಆರನೇ ಶ್ರೇಯಾಂಕದ ಭಾರತದ ಆಟಗಾರ್ತಿಯರು 21-10, 21-10ರಿಂದ ಥಾಯ್ಲೆಂಡ್‌ನ ಓರ್ನಿಚಾ ಜೋಂಗ್ಸಾತಪೋರ್ನ್ಪರ್ನ್ ಮತ್ತು ಸುಕಿರ್ತ ಸುವಾಚೈ ಅವರನ್ನು ಸುಲಭವಾಗಿ ಮಣಿಸಿ ಪ್ರಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದರು.

ADVERTISEMENT

ಲಖನೌನಲ್ಲಿ ತಿಂಗಳ ಹಿಂದೆ ನಡೆದ ಸೈಯದ್ ಮೋದಿ ಇಂಟರ್‌ ನ್ಯಾಷನಲ್ ಸೂಪರ್ 300 ಟೂರ್ನಿಯಲ್ಲಿ ಚಾಂಪಿಯನ್‌ ಆಗಿರುವ ಟ್ರೀಸಾ ಮತ್ತು ಗಾಯತ್ರಿ ಜೋಡಿಗೆ ಶ್ರೇಯಾಂಕರಹಿತ ಥಾಯ್ಲೆಂಡ್‌ ಆಟಗಾರ್ತಿಯರು ಯಾವುದೇ ಹಂತದಲ್ಲಿ ಸರಿಸಾಟಿಯಾಗಲಿಲ್ಲ. ಕೇವಲ 30 ನಿಮಿಷಗಳಲ್ಲಿ ಪಂದ್ಯ ಗೆದ್ದರು.

ಪ್ರಣಯ್‌ ಪಂದ್ಯ ಸ್ಥಗಿತ:
ಭಾರತದ ತಾರೆ ಎಚ್‌.ಎಸ್‌. ಪ್ರಣಯ್‌ ಅವರ ಪಂದ್ಯ ನಡೆಯುತ್ತಿದ್ದ ಕೋರ್ಟ್‌ನ ಒಳಾಂಗಣದ ಚಾವಣಿಯಲ್ಲಿ ಮಳೆನೀರು ಸೋರಿಕೆಯಾದ ಕಾರಣ ಸ್ಪರ್ಧೆಯನ್ನು ಅರ್ಧಕ್ಕೆ ಸ್ಥಗಿತಗೊಳಿಸಿ, ಬುಧವಾರಕ್ಕೆ ಮುಂದೂಡಲಾಗಿದೆ. ಪ್ಯಾರಿಸ್ ಒಲಿಂಪಿಕ್ಸ್‌ ಬಳಿಕ ಕಣಕ್ಕೆ ಇಳಿದಿರುವ ಪ್ರಣಯ್‌ ಅವರಿಗೆ ಆರಂಭಿಕ ಸುತ್ತಿನಲ್ಲಿ ಕೆನಡಾದ ಬ್ರೈನ್‌ ಯಂಗ್ ಎದುರಾಳಿಯಾಗಿದ್ದರು. ಮೊದಲ ಗೇಮ್‌ನಲ್ಲಿ 21–12ರಿಂದ ಮೇಲುಗೈ ಸಾಧಿಸಿದ್ದ ಭಾರತದ ಆಟಗಾರ, ಎರಡನೇ ಗೇಮ್‌ನಲ್ಲಿ 3–6 ಸ್ಕೋರ್‌ ಆಗಿದ್ದಾಗ ಚಾವಣಿಯಲ್ಲಿ ನೀರು ಸೋರಿಕೆ ಆರಂಭವಾಗಿದೆ.

ಮೂರನೇ ಕೋರ್ಟ್‌ನಲ್ಲಿ ನಡೆಯುತ್ತಿದ್ದ ಪಂದ್ಯವನ್ನು ಸುಮಾರು ಒಂದು ಗಂಟೆ ಸ್ಥಗಿತಗೊಳಿಸಿ, ಮತ್ತೆ ಆರಂಭಿಸಲಾಯಿತು. ಎರಡನೇ ಗೇಮ್‌ನ ಸ್ಕೋರ್‌ 9–11 ಆದಾಗ ಪುನಃ ನೀರು ಸೋರಿಕೆಯಾಗಿ ಅಡಚಣೆಯಾಯಿತು. ಹೀಗಾಗಿ, ಪಂದ್ಯವನ್ನು ಮುಂದೂಡಲು ಅಧಿಕಾರಿಗಳು ನಿರ್ಧರಿಸಿದರು.

‘ಪ್ರಣಯ್‌ ಅವರ ಪಂದ್ಯವನ್ನು ಸ್ಥಗಿತ ಮಾಡಲಾಗಿದೆ. ಅವರು ನಾಳೆ ಅದೇ ಸ್ಕೋರ್‌ನೊಂದಿಗೆ ಸ್ಪರ್ಧೆಗೆ ಇಳಿಯುವರು’ ಎಂದು ಭಾರತ ತಂಡದ ಕೋಚ್ ಆರ್‌.ಎಂ.ವಿ. ಗುರುಸಾಯಿದತ್ ಪಿಟಿಐಗೆ ತಿಳಿಸಿದ್ದಾರೆ.  

ಇದೇ ಕಾರಣಕ್ಕೆ ಎರಡನೇ ಕೋರ್ಟ್‌ನಲ್ಲೂ ಪಂದ್ಯಗಳನ್ನು ಸ್ಥಗಿತಗೊಳಿಸಲಾಯಿತು. ಆದರೆ, ಒಂದನೇ ಕೋರ್ಟ್‌ನಲ್ಲಿ ಸ್ಪರ್ಧೆಗಳು ನಿಗದಿಯಂತೆ ಮುಂದುವರಿದವು. ಕೋರ್ಟ್‌ಗಳನ್ನು ಒಣಗಿಸಲು ಸಂಘಟಕರು ಬಿಳಿ ಟವೆಲ್‌ ಗಳನ್ನು ಬಳಸುತ್ತಿದ್ದುದು ಕಂಡುಬಂತು.

ಸೇನ್‌ಗೆ ಆಘಾತ:

ಭರವಸೆ ಮೂಡಿಸಿದ್ದ ಭಾರತದ ಅಗ್ರಮಾನ್ಯ ಆಟಗಾರ ಲಕ್ಷ್ಮ ಸೇನ್‌ ಅವರು ಪುರುಷರ ಸಿಂಗಲ್ಸ್‌ನ ಮೊದಲ ಸುತ್ತಿನಲ್ಲೇ ಹೊರಬಿದ್ದರು.

ವಿಶ್ವ ರ‍್ಯಾಂಕಿಂಗ್‌ನಲ್ಲಿ 12ನೇ ಸ್ಥಾನದಲ್ಲಿರುವ 23 ವರ್ಷ ವಯಸ್ಸಿನ ಸೇನ್‌ ಅವರಿಗೆ 14–21, 7–21ರಿಂದ ತೈವಾನ್‌ ಚಿ ಯು-ಜೆನ್ ಆಘಾತ ನೀಡಿದರು.

ಭಾರತದ ಮತ್ತೊಬ್ಬ ಸಿಂಗಲ್ಸ್‌ ಆಟಗಾರ ಪ್ರಿಯಾಂಶು ರಾಜಾವತ್‌ ಅವರ ಪಂದ್ಯವನ್ನು ಬುಧವಾರಕ್ಕೆ ಮುಂದೂಡಲಾಗಿದೆ. ಅವರು ಮೊದಲ ಸುತ್ತಿನಲ್ಲಿ ಚೀನಾದ ಲಿ ಶಿಫೆಂಗ್ ಅವರ ಸವಾಲನ್ನು ಎದುರಿಸುವರು.

ಪುರುಷರ ಡಬಲ್ಸ್‌ನಲ್ಲಿ ಕಳೆದ ಬಾರಿಯ ರನ್ನರ್ಸ್‌ ಅಪ್‌ ಸಾತ್ವಿಕ್‌ ಸಾಯಿರಾಜ್‌ ರಣಕಿರೆಡ್ಡಿ ಮತ್ತು ಚಿರಾಗ್‌ ಶೆಟ್ಟಿ ಅವರು ಆತಿಥೇಯ ಮಲೇಷ್ಯಾದ ಟ್ಯಾಂಗ್‌ ಕೈ ವಿ ಮತ್ತು ಲು ಮಿಂಗ್‌ ಚೆ ವಿರುದ್ಧ ಅಭಿಯಾನ ಆರಂಭಿಸುವರು.

ಮಹಿಳೆಯರ ಡಬಲ್ಸ್‌ನಲ್ಲಿ ತನಿಶಾ ಕ್ರಾಸ್ಟೊ– ಅಶ್ವಿನಿ ಪೊನ್ನಪ್ಪ ಮತ್ತು ಪಾಂಡಾ ಸಹೋದರಿಯಾದ ಋತುಪರ್ಣ– ಶ್ವೇತಪರ್ಣ ಅವರು ಎರಡನೇ ದಿನ ಕಣಕ್ಕೆ ಇಳಿಯುವರು. ಒಟ್ಟು ₹12.46 ಕೋಟಿ ಬಹುಮಾನ ಮೊತ್ತವನ್ನು ಹೊಂದಿರುವ ಟೂರ್ನಿ ಇದಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.