ರಾಜಗೀರ್: ಏಷ್ಯಾ ಕಪ್ ಪ್ರಶಸ್ತಿ ಉಳಿಸಿಕೊಳ್ಳುವ ಯತ್ನದಲ್ಲಿರುವ ದಕ್ಷಿಣ ಕೊರಿಯಾ ತಂಡಕ್ಕೆ ಶನಿವಾರ ಆಘಾತಕಾರಿ ಸೋಲು ಎದುರಾಯಿತು. ‘ಬಿ’ ಗುಂಪಿನ ಪಂದ್ಯದಲ್ಲಿ ಮಲೇಷ್ಯಾ ತಂಡವು 4–1 ಗೋಲುಗಳಿಂದ ಕೊರಿಯಾ ತಂಡವನ್ನು ಸೋಲಿಸಿ ಅಚ್ಚರಿಯ ಫಲಿತಾಂಶಕ್ಕೆ ಕಾರಣರಾದರು.
ಇದೇ ಗುಂಪಿನ ಮತ್ತೊಂದು ಪಂದ್ಯದಲ್ಲಿ ಬಾಂಗ್ಲಾದೇಶ 8–3 ಗೋಲುಗಳಿಂದ ಚೀನಾ ತೈಪೆ ತಂಡವನ್ನು ಸುಲಭವಾಗಿ ಮಣಿಸಿತು.
ಕೊರಿಯಾ ದಿನದ ಎರಡನೇ ಪಂದ್ಯದಲ್ಲಿ ಜಿಯಾನ್‌ಹ್ಯೊ ಜಿನ್ ಎರಡನೇ ನಿಮಿಷವೇ ಗಳಿಸಿದ ರಿವರ್ಸ್ ಸ್ಟಿಕ್ ಫೀಲ್ಡ್ ಗೋಲಿನ ಮುಖಾಂತರ ಮುನ್ನಡೆ ಪಡೆಯಿತು. ಆದರೆ ಮಲೇಷ್ಯಾ ಅಮೋಘವಾಗಿ ಪುನರಾಗಮನ ಮಾಡಿತು. ಅಖಿಮುಲ್ಲಾ ಅನೌರ್ (29, 34 ಮತ್ತು 58ನೇ ನಿಮಿಷ) ಅವರ ಹ್ಯಾಟ್ರಿಕ್ ಮತ್ತು ಅಷ್ರನ್ ಹಮ್ಸಾನಿ ಅವರ ಗೋಲಿನ ನೆರವಿನಿಂದ ಪ್ರಬಲ ಎದುರಾಳಿ, ಐದು ಬಾರಿಯ ಚಾಂಪಿಯನ್ನರಾದ ಕೊರಿಯಾಕ್ಕೆ ಸೋಲಿನ ಪ್ರಹಾರ ನೀಡಿತು.
ಬಾಂಗ್ಲಾದೇಶ ದಿನದ ಮೊದಲ ಪಂದ್ಯದಲ್ಲಿ ಚೀನಾ ತೈಪೆ ವಿರುದ್ಧ ಪೂರ್ಣ ಪ್ರಾಬಲ್ಯ ಸಾಧಿಸಿತು. ವಿರಾಮಕ್ಕೆ ಮೊದಲೇ ಐದು ಗೋಲುಗಳನ್ನು ಗಳಿಸಿತು.
ಶುಕ್ರವಾರ ನಡೆದ ತನ್ನ ಮೊದಲ ಪಂದ್ಯದಲ್ಲಿ ಬಾಂಗ್ಲಾದೇಶ 1–4 ರಿಂದ ಮಲೇಷ್ಯಾಕ್ಕೆ ಮಣಿದಿತ್ತು. ಕೊರಿಯಾ 7–0 ಯಿಂದ ಚೀನಾ ತೈಪಿ ವಿರುದ್ಧ ನಿರಾಯಾಸ ಗೆಲುವು ಪಡೆದಿತ್ತು.
ಬಾಂಗ್ಲಾದೇಶ ತನ್ನ ಮುಂದಿನ ಪಂದ್ಯವನ್ನು ಸೆ. 1ರಂದು ಕೊರಿಯಾ ವಿರುದ್ಧ ಆಡಲಿದೆ. ಮಲೇಷ್ಯಾ ತಂಡ ಅದೇ ದಿನ ಮತ್ತೊಂದು ಪಂದ್ಯದಲ್ಲಿ ಚೀನಾ ತೈಪಿ ತಂಡವನ್ನು ಎದುರಿಸಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.