ADVERTISEMENT

ಕ್ರಾಸ್ ಕಂಟ್ರಿ: ಮಂಗಳೂರು ವಿವಿ ‘ಹ್ಯಾಟ್ರಿಕ್’ ಸಾಧನೆ

ಅಖಿಲ ಭಾರತ ಅಂತರ ವಿವಿ ಮಹಿಳೆಯರ ಕ್ರಾಸ್ ಕಂಟ್ರಿ: ಬಸಂತಿ ಕುಮಾರಿಗೆ ಬೆಳ್ಳಿ

​ಪ್ರಜಾವಾಣಿ ವಾರ್ತೆ
Published 20 ನವೆಂಬರ್ 2024, 15:25 IST
Last Updated 20 ನವೆಂಬರ್ 2024, 15:25 IST
ಪ್ರಶಸ್ತಿ ಗೆದ್ದ ಮಂಗಳೂರು ವಿವಿ ತಂಡವನ್ನು ಪ್ರತಿನಿಧಿಸಿದ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿನಿಯರು (ಎಡದಿಂದ): ಖಷ್ಬೂ ಪಟೇಲ್‌, ಬಸಂತಿ ಕುಮಾರಿ, ಸೋನಿಯಾ, ಅಂಚಲ್ ಜೈಸ್ವಾಲ್‌, ದಿಶಾ ಬೋರ್ಸೆ ಮತ್ತು ಜ್ಯೋತಿ
ಪ್ರಶಸ್ತಿ ಗೆದ್ದ ಮಂಗಳೂರು ವಿವಿ ತಂಡವನ್ನು ಪ್ರತಿನಿಧಿಸಿದ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿನಿಯರು (ಎಡದಿಂದ): ಖಷ್ಬೂ ಪಟೇಲ್‌, ಬಸಂತಿ ಕುಮಾರಿ, ಸೋನಿಯಾ, ಅಂಚಲ್ ಜೈಸ್ವಾಲ್‌, ದಿಶಾ ಬೋರ್ಸೆ ಮತ್ತು ಜ್ಯೋತಿ   

ಮೂಡುಬಿದಿರೆ (ದಕ್ಷಿಣ ಕನ್ನಡ): ಮುಂಜಾನೆಯ ತಂಪು ಹವೆಯಲ್ಲಿ ಅಮೋಘ ಸಾಮರ್ಥ್ಯ ಪ್ರದರ್ಶಿಸಿದ ಮಂಗಳೂರು ವಿಶ್ವವಿದ್ಯಾನಿಲಯ ತಂಡದವರು ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ಮಹಿಳೆಯರ ಕ್ರಾಸ್ ಕಂಟ್ರಿಯಲ್ಲಿ ಸಮಗ್ರ ಪ್ರಶಸ್ತಿ ಗೆದ್ದುಕೊಂಡರು. ಈ ಮೂಲಕ ಹ್ಯಾಟ್ರಿಕ್ ಸಾಧನೆ ಮಾಡಿದರು.

ಭಾರತೀಯ ವಿಶ್ವವಿದ್ಯಾಲಯಗಳ ಸಂಘ ಮತ್ತು ಮಂಗಳೂರು ವಿವಿ ಸಹಯೋಗದಲ್ಲಿ ಆಳ್ವಾಸ್ ಕಾಲೇಜು ಬುಧವಾರ ಆಯೋಜಿಸಿದ್ದ ಚಾಂಪಿಯನ್‌ಷಿಪ್‌ನಲ್ಲಿ ಮಂಗಳೂರು ವಿವಿಯನ್ನು ಪ್ರತಿನಿಧಿಸಿದ ಆಳ್ವಾಸ್ ಕಾಲೇಜು ವಿದ್ಯಾರ್ಥಿನಿಯರು ಒಟ್ಟು 33 ಪಾಯಿಂಟ್ ಗಳಿಸಿದರು. ಹರಿಯಾಣ ರೋಹ್ತಕ್‌ನ ಮಹರ್ಷಿ ದಯಾನಂದ ವಿವಿ ರನ್ನರ್ ಅಪ್ ಆಯಿತು. ಕೊಲ್ಹಾಪುರದ ಶಿವಾಜಿ ವಿವಿ 3ನೆ ಸ್ಥಾನ ಗಳಿಸಿದರೆ ಉತ್ತರ ಪ್ರದೇಶದ ಡಾ.ರಾಮ್‌ಮನೋಹರ್ ಲೋಹಿಯಾ ಅವಧ್ ವಿವಿ 4, ಕೇರಳದ ಎಂಜಿ ವಿವಿ 5 ಮತ್ತು ಪುಣೆಯ ಸಾವಿತ್ರಿಭಾಯಿ ಫುಲೆ ವಿವಿ 6ನೇ ಸ್ಥಾನ ಗಳಿಸಿತು.

ಮಂಗಳವಾರ ಉಪ್ಪಿನಂಗಡಿಯಲ್ಲಿ ನಡೆದ ಪುರುಷರ ವಿಭಾಗದ ಸ್ಪರ್ಧೆಯಲ್ಲೂ ಮಂಗಳೂರು ವಿವಿ ಚಾಂಪಿಯನ್ ಆಗಿತ್ತು. ಮಹಿಳೆಯರ ವಿಭಾಗದಲ್ಲಿ ರೋಹ್ತಕ್‌ನ ಎಂಡಿ ವಿವಿಯ ಅಂಕಿತಾ ಚಿನ್ನ ಗೆದ್ದು ಸಂಭ್ರಮಿಸಿದರು. ಅವರು 37 ನಿಮಿಷ 40 ಸೆಕೆಂಡುಗಳಲ್ಲಿ ಗುರಿ ಮುಟ್ಟಿದರು. ಮಂಗಳೂರು ವಿವಿಯ ಬಸಂತಿ ಕುಮಾರಿ ಮತ್ತು ಸೋನಿಯಾ ನಡುವೆ ಬೆಳ್ಳಿ ಪದಕಕ್ಕೆ ತೀವ್ರ ಪೈಪೋಟಿ ಏರ್ಪಟ್ಟಿತ್ತು. ಬಸಂತಿ 37 ನಿ 52 ಸೆಕೆಂಡುಗಳಲ್ಲಿ, ಸೋನಿಯಾ 37 ನಿ 55 ಸೆಕೆಂಡುಗಳಲ್ಲಿ ಓಟ ಪೂರ್ತಿಗೊಳಿಸಿದರು. ಜ್ಯೋತಿ 9ನೇ ಸ್ಥಾನ ಗಳಿಸಿದರು.

ADVERTISEMENT

ಮೊದಲ ಮೂರು ಸ್ಥಾನ ಗಳಿಸಿದ ತಂಡಗಳಿಗೆ ಆಳ್ವಾಸ್ ಶಿಕ್ಷಣ ಸಂಸ್ಥೆಯಿಂದ ಕ್ರಮವಾಗಿ ₹ 25 ಸಾವಿರ, ₹ 15 ಸಾವಿರ ಮತ್ತು ₹ 10 ಸವಿರ ನಗದು ನೀಡಲಾಯಿತು.

ವೈಯಕ್ತಿಕ ಫಲಿತಾಂಶಗಳು:

ಅಂಕಿತಾ (ರೋಹ್ತಕ್‌ನ ಎಂ.ಡಿ ವಿವಿ)–1. ಕಾಲ: 37 ನಿ 40 ಸೆ, ಬಸಂತಿ ಕುಮಾರಿ (ಮಂಗಳೂರು ವಿವಿ)–2. ಕಾಲ: 37:52, ಸೋನಿಯಾ (ಮಂಗಳೂರು ವಿವಿ)–3. ಕಾಲ: 37:55, ಕೆ.ಎಂ.ಯಶ್ ಸಚ್ಚು (ಸಿಎಸ್‌ಜೆಎಂ ಕಾನ್ಪುರ)–4. ಕಾಲ: 38:6, ಸೃಷ್ಟಿ ರೆಡೇಕರ್ (ಶಿವಾಜಿ ವಿವಿ ಕೊಲ್ಹಾಪುರ)–5. ಕಾಲ: 38:16, ಸಾಕ್ಷಿ ಜಾದವ್ (ಮುಂಬೈ ವಿವಿ)–6. ಕಾಲ: 38:27, ರವೀನಾ ಗಾಯಕವಾಡ್ (ಸಾವಿತ್ರಿಭಾಯಿ ಫುಲೆ ವಿವಿ ಪುಣೆ)–7. ಕಾಲ: 38:31, ಪ್ರಣಾಲಿ ಶೆಗಾಂವ್ಕರ್‌ (ಅಮರಾವತಿ ವಿವಿ)–8. ಕಾಲ: 38:32, ಜ್ಯೋತಿ (ಮಂಗಳೂರು ವಿವಿ)–9. ಕಾಲ: 38:41, ಗಂಗಾ (ಜ್ಯೋತಿಭಾ ಫುಲೆ ವಿವಿ ಬರೇಲಿ)–10. ಕಾಲ: 39:07.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.