ಭಾರತದ ಶ್ರೀಜಾ ಅಕುಲಾ –
ಪಿಟಿಐ ಚಿತ್ರ
ಪ್ಯಾರಿಸ್: ಒಲಿಂಪಿಕ್ಸ್‌ನ ಟೇಬಲ್ ಟೆನಿಸ್ ಸಿಂಗಲ್ಸ್ ಸ್ಪರ್ಧೆಯಲ್ಲಿ ಭಾರತದ ಅಭಿಯಾನಕ್ಕೆ ತೆರೆಬಿದ್ದಿದೆ. ಕೊನೆಯ ಭರವಸೆಯಾಗಿದ್ದ ಶ್ರೀಜಾ ಅಕುಲಾ ಮಹಿಳೆಯರ ಸಿಂಗಲ್ಸ್‌ನ ಪ್ರಿ ಕ್ವಾರ್ಟರ್ ಫೈನಲ್‌ನಲ್ಲಿ ಹೊರಬಿದ್ದಿದ್ದಾರೆ.
ಬುಧವಾರ ತಡರಾತ್ರಿ ನಡೆದ ಪಂದ್ಯದಲ್ಲಿ ಶ್ರೀಜಾ ಅವರು 0–4 ಗೇಮ್‌ಗಳಿಂದ ವಿಶ್ವದ ಅಗ್ರಮಾನ್ಯ ಆಟಗಾರ್ತಿ ಯಿಂಗ್ಶಾ ಸನ್ ವಿರುದ್ಧ ಪರಾಭವಗೊಂಡರು.
ಮಣಿಕಾ ಬಾತ್ರಾ ಮತ್ತು ಶ್ರೀಜಾ ಅವರು ಒಲಿಂಪಿಕ್ಸ್‌ನಲ್ಲಿ 16ರ ಘಟ್ಟ ಪ್ರವೇಶಿಸುವ ಮೂಲಕ ಐತಿಹಾಸಿಕ ಸಾಧನೆ ಮಾಡಿದ್ದರು. ಸಿಂಗಲ್ಸ್‌ನಲ್ಲಿ ಈ ಹಂತಕ್ಕೆ ಭಾರತದ ಸ್ಪರ್ಧಿಗಳು ತಲುಪಿದ್ದು ಇದೇ ಮೊದಲು.
ಆದರೆ, ಯಾರೊಬ್ಬರಿಗೂ ಕ್ವಾರ್ಟರ್ ಫೈನಲ್ ತಲುಪಲು ಸಾಧ್ಯವಾಗಲಿಲ್ಲ. ಇಬ್ಬರು ಆಟಗಾರ್ತಿಯರು ತಮಗಿಂತ ಉನ್ನತ ರ‍್ಯಾಂಕ್‌ನ ಎದುರಾಳಿಗಳ ವಿರುದ್ಧ ಮುಗ್ಗರಿಸಿದರು.
26ನೇ ವರ್ಷದ ಜನ್ಮದಿನದ ಸಂಭ್ರಮದಲ್ಲಿದ್ದ ಶ್ರೀಜಾ 10-12, 10-12, 8-11, 3-11 ರಿಂದ ಚೀನಾ ಆಟಗಾರ್ತಿ ವಿರುದ್ಧ ಪರಾಭವಗೊಂಡರು. ಅದಕ್ಕೂ ಮೊದಲು 29 ವರ್ಷ ವಯಸ್ಸಿನ ಮಣಿಕಾ 6-11, 9-11, 14-12, 8-11, 6-11 ರಿಂದ ಜಪಾನ್‌ನ ಮಿಯು ಹಿರಾನೊ ಅವರಿಗೆ ಮಣಿದಿದ್ದರು.
ಭಾರತದ ಅಗ್ರಮಾನ್ಯ ಆಟಗಾರ್ತಿ ಶ್ರೀಜಾ ಮೊದಲೆರಡು ಗೇಮ್‌ಗಳಲ್ಲಿ ನಿಕಟ ಪೈಪೋಟಿ ನೀಡಿದರು. ನಂತರ ಗೇಮ್‌ನಲ್ಲಿ ಸುಲಭವಾಗಿ ಸೋಲೊಪ್ಪಿಕೊಂಡರು. ಏಷ್ಯನ್ ಗೇಮ್ಸ್ ಚಾಂಪಿಯನ್ ಸೆನ್ ಅವರ ಅದ್ಘುತ ರಿಟರ್ನ್ಸ್ ಎದುರು ಭಾರತದ ಆಟಗಾರ್ತಿಯ ಬಳಿ ಉತ್ತರವಿರಲಿಲ್ಲ.
ಭಾರತ ಆಟಗಾರರು ತಂಡ ವಿಭಾಗದ ಸ್ಪರ್ಧೆಯಲ್ಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.