ADVERTISEMENT

ಚೆನ್ನೈನಲ್ಲಿ ಅಥ್ಲೆಟಿಕ್ಸ್: ಮಣಿಕಂಠ, ಶಿವಾಜಿಗೆ ಬೆಳ್ಳಿ

ಚೆನ್ನೈನಲ್ಲಿ ಸೀನಿಯರ್ ಅಥ್ಲೆಟಿಕ್ಸ್: ಸ್ನೇಹಾಗೆ ಕಂಚು,

​ಪ್ರಜಾವಾಣಿ ವಾರ್ತೆ
Published 20 ಆಗಸ್ಟ್ 2025, 19:52 IST
Last Updated 20 ಆಗಸ್ಟ್ 2025, 19:52 IST
ಕರ್ನಾಟಕದ ಸ್ನೇಹಾ ಮತ್ತು ಮಣಿಕಂಠ 
ಕರ್ನಾಟಕದ ಸ್ನೇಹಾ ಮತ್ತು ಮಣಿಕಂಠ    

ಬೆಂಗಳೂರು: ಕರ್ನಾಟಕದ ಅಥ್ಲೀಟ್‌ಗಳು ಚೆನ್ನೈನಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಅಂತರರಾಜ್ಯ ಸೀನಿಯರ್ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ನಲ್ಲಿ ಪದಕ ಜಯದ ಖಾತೆ ತೆರೆಯಿತು. 

ಜವಾಹರಲಾಲ್ ನೆಹರು ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕೂಟದಲ್ಲಿ ಬುಧವಾರ ಕರ್ನಾಟಕದ ಮಣಿಕಂಠ ಹೋಬಳಿದಾರ್ ಅವರು ಪುರುಷರ 100 ಮೀಟರ್ಸ್ ಓಟದಲ್ಲಿ ಬೆಳ್ಳಿ ಪದಕ ಜಯಿಸಿದರು. ಅವರು 10.35 ಸೆಕೆಂಡುಗಳಲ್ಲಿ ಗುರಿ ಮುಟ್ಟಿದರು. ತಮಿಳುನಾಡಿನ ತಮಿಳ್ ಅರಸು ಅವರು (10.22ಸೆ) ಪ್ರಥಮ ಸ್ಥಾನ ಗಳಿಸಿದರು. ತಮಿಳುನಾಡಿನ ರಾಗುಲ್ ಕುಮಾರ್ ಜಿ (10.40ಸೆ) ಅವರು ಮೂರನೇ ಸ್ಥಾನ ಪಡೆದರು. 

ಆದರೆ ಮುಂದಿನ ತಿಂಗಳು ಟೋಕಿಯೊದಲ್ಲಿ ನಡೆಯಲಿರುವ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ನಲ್ಲಿ ಅರ್ಹತೆ ಗಳಿಸಲು 10 ಸಕೆಂಡುಗಳ ಅರ್ಹತಾ ಮಟ್ಟವನ್ನು ಯಾರೂ ಸಾಧಿಸಲಿಲ್ಲ. 

ADVERTISEMENT

ಪುರುಷರ 10 ಸಾವಿರ ಮೀಟರ್ಸ್ ಓಟದಲ್ಲಿ ಶಿವಾಜಿ ಪರಶು ಮಾದಪ್ಪಗೌಡರ (ಕಾಲ: 30:57.69) ಅವರು ಬೆಳ್ಳಿ ಪದಕ ಜಯಿಸಿದರು. ಉತ್ತರಪ್ರದೇಶದ ಅಭಿಷೇಕ್ (30ನಿ,56.64ಸೆ) ಹಾಗೂ ಶಿವಂ ಅವರು ಕ್ರಮವಾಗಿ ಪ್ರಥಮ ಮತ್ತು ತೃತೀಯ ಸ್ಥಾನ ಪಡೆದರು. 

ವಿಶ್ವ ಚಾಂಪಿಯನ್‌ಷಿಪ್‌ಗೆ ಅರ್ಹತೆ ಪಡೆಯಲು ಆಗಸ್ಟ್ 24 ಕೊನೆಯ ದಿನವಾಗಿದೆ.  ಅರ್ಹತೆಯ ಆಕಾಂಕ್ಷಿಗಳಾಗಿರುವ ಅಥ್ಲೀಟ್‌ಗಳಿಗೆ  ಈ ಐದು ದಿನಗಳ ಕೂಟವು ಕೊನೆಯ ಅವಕಾಶವಾಗಿದೆ.

ಮಹಿಳೆಯರ ವಿಭಾಗದಲ್ಲಿ ಕರ್ನಾಟಕದ ಎಸ್‌.ಎಸ್. ಸ್ನೇಹಾ (11.61ಸೆ) ಅವರು ಕಂಚಿನ ಪದಕ ಗಳಿಸಿದರು. ಈ ವಿಭಾಗದಲ್ಲಿ ತಮಿಳುನಾಡಿನ ಧನಲಕ್ಷ್ಮೀ (11.36ಸೆ) ಮತ್ತು ಆರ್. ಅಭಿನಯ (11.58ಸೆ) ಕ್ರಮವಾಗಿ ಪ್ರಥಮ ಹಾಗೂ ದ್ವಿತೀಯ ಸ್ಥಾನ ಪಡೆದರು. 

ಮಹಿಳೆಯರ 400 ಮೀ ಓಟದ ಸೆಮಿಫೈನಲ್‌ನಲ್ಲಿ ಹೀಟ್ಸ್‌ನಲ್ಲಿ  ಅನುಭವಿ ಎಂ.ಆರ್. ಪೂವಮ್ಮ 54.52ಸೆಕೆಂಡುಗಳಲ್ಲಿ ಗುರಿ ಮುಟ್ಟಿ, ಫೈನಲ್ ಪ್ರವೇಶಿಸಿದರು. 

ಆದರೆ ಕಾಂಟಿನೆಂಟಲ್ ಟೂರ್‌ ಅಥ್ಲೆಟಿಕ್ಸ್‌ನಲ್ಲಿ ಚಿನ್ನದ ಪದಕ ವಿಜೇತರಾಗಿದ್ದ ಜಿ.ಕೆ. ವಿಜಯಕುಮಾರಿ ಅವರಿಗೆ ಅಭ್ಯಾಸದ ಸಂದರ್ಭದಲ್ಲಿ ಹಿಮ್ಮಡಿಗೆ ಗಾಯವಾಗಿತ್ತು. ಇದರಿಂದಾಗಿ ಸ್ಪರ್ಧೆಯಿಂದ ಹಿಂದೆ ಸರಿದರು. 

ಹಿಮಾಚಲ ಪ್ರದೇಶದ ಸೀಮಾ ಅವರು 5 ಸಾವಿರ ಮೀಟರ್ಸ್ ಓಟದಲ್ಲಿ ನೂತನ ಕೂಟ ದಾಖಲೆ ನಿರ್ಮಿಸಿದರು. ಅವರು 15ನಿ, 42.64ಸೆಕೆಂಡುಗಳಲ್ಲಿ (ಹಳೆಯದು: 15ನಿ,46.92ಸೆ) ಗುರಿ ತಲುಪಿದರು. ಮಹಾರಾಷ್ಟ್ರದ ರವೀನಾ ಗಾಯಕವಾಡ (16ನಿ,53.24ಸೆ) ಮತ್ತು ಜಾರ್ಖಂಡ್‌ನ ಎಂ. ಸಂಘಮಿತ್ರ (18ನಿ,04.36ಸೆ) ಅವರು ಕ್ರಮವಾಗಿ ಎರಡು ಮತ್ತುಮೂರನೇ ಸ್ಥಾನ ಪಡೆದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.