
ಅಭ್ಯಾಸದಲ್ಲಿ ನಿರತರಾಗಿರುವ ಭಾರತ ತಂಡದ ಆಟಗಾರ ಮನ್‌ಪ್ರೀತ್ ಸಿಂಗ್
ನವದೆಹಲಿ: ಡಿಸೆಂಬರ್‌ನಲ್ಲಿ ಭಾರತ ತಂಡದ ದಕ್ಷಿಣ ಆಫ್ರಿಕಾ ಪ್ರವಾಸದ ವೇಳೆ ಅನುಭವಿ ಮನ್‌ಪ್ರೀತ್ ಸಿಂಗ್ ಸೇರಿದಂತೆ ಮೂವರು ಆಟಗಾರರು ಗಂಭೀರ ಸ್ವರೂಪದ ಅಶಿಸ್ತಿನ ನಡವಳಿಕೆ ತೋರಿದ್ದರಿಂದ, ಹಾಕಿ ಇಂಡಿಯಾವು ಪ್ರೊ ಲೀಗ್ ಟೂರ್ನಿಯ ಸಂಭವನೀಯರ ಪಟ್ಟಿಯಿಂದ ಅವರನ್ನು ಕೈಬಿಟ್ಟಿದೆ ಎಂಬ ಅಂಶ ಬಹಿರಂಗವಾಗಿದೆ.
ಮುಂಬರುವ ಪ್ರೊ ಲೀಗ್ ಋತುವಿಗೆ ಮೊದಲು ಫೆಬ್ರುವರಿ 1 ರಿಂದ 7ರವರೆಗೆ ರೂರ್ಕೆಲಾದಲ್ಲಿ ನಡೆಯಲಿರುವ ಸಂಭವನೀಯರ ಶಿಬಿರಕ್ಕೆ ಹಾಕಿ ಇಂಡಿಯಾ 33 ಆಟಗಾರರ ಪಟ್ಟಿಯನ್ನು ಗುರುವಾರ ಪ್ರಕಟಿಸಿತ್ತು. ಇದರಲ್ಲಿ ಹಿರಿಯ ಮಿಡ್‌ಫೀಲ್ಡರ್ ಮನ್‌ಪ್ರೀತ್ ಸಿಂಗ್, ದಿಲ್‌ಪ್ರೀತ್ ಸಿಂಗ್ ಮತ್ತು ಗೋಲ್ ಕೀಪರ್ ಕೃಷನ್ ಬಹಾದ್ದೂರ್ ಪಾಠಕ್ ಅವರಿಗೆ ಸ್ಥಾನ ಕಲ್ಪಿಸದಿರುವುದು ಅಚ್ಚರಿಗೆ ಕಾರಣವಾಗಿತ್ತು.
ಭಾರತ ತಂಡವು ಡಿಸೆಂಬರ್ 2 ರಿಂದ 16ರ ಅವಧಿಯಲ್ಲಿ ಟೆಸ್ಟ್ ಸರಣಿ ಆಡಲು ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಂಡಿತ್ತು. ಇದರಲ್ಲಿ ಮೊದಲ ಎರಡು ಪಂದ್ಯಗಳಲ್ಲಿ ಸೋಲನುಭವಿಸಿದ್ದ ತಂಡವು, ಅಂತಿಮ ಪಂದ್ಯವನ್ನು ಡ್ರಾ ಮಾಡಿಕೊಂಡಿತ್ತು.
‘ಈ ವೇಳೆಯೇ ತೀರಾ ಅಶಿಸ್ತಿನ ನಡವಳಿಕೆ ನಡೆದಿರುವುದು ಬಯಲಿಗೆ ಬಂದಿದೆ. ತಂಡದ ಸಭೆಗೆ ಆಟಗಾರರೊಬ್ಬರು ಗೈರುಹಾಜರಾಗಿದ್ದರು. ಈ ಆಟಗಾರನಿಗೆ ಮನ್‌ಪ್ರೀತ್, ದಿಲ್‌ಪ್ರೀತ್ ಮತ್ತು ಪಾಠಕ್ ಅವರು ನಿಷೇಧಿತ ಮಾದಕವಸ್ತುವನ್ನು ಮಿಶ್ರಣ ಮಾಡಿದ ಚ್ಯುಯಿಂಗ್ ಗಮ್ ನೀಡಿದ್ದಾರೆನ್ನಲಾಗಿದೆ. ಅದನ್ನು ಸೇವಿಸಿದ ಆ ಆಟಗಾರ ಪ್ರಜ್ಞೆ ಕಳೆದುಕೊಂಡಿದ್ದಾರೆ’ ಎಂದು ಮೂಲವೊಂದು ಪಿಟಿಐಗೆ ತಿಳಿಸಿದೆ.
‘ಚ್ಯುಯಿಂಗ್ ಗಮ್ ಅಗಿದ ಆಟಗಾರನಿಗೆ ನಂತರ ಅಮಲು ಹಾಗೂ ವಾಕರಿಕೆಯಗಿದೆ. ಈ ವಿಷಯ ನಂತರ ತರಬೇತಿ ಸಿಬ್ಬಂದಿ ಗಮನಕ್ಕೆ ಬಂದಿದೆ. ಆಟಗಾರನ ಮೇಲೆ ಅಂದು ರಾತ್ರಿಯಿಡೀ ನಿಗಾ ವಹಿಸಲಾಯಿತು. ಮರುದಿನದ ತಂಡದ ಸಭೆಗೂ ಹೋಗಲು ಅವರಿಗೆ ಆಗಲಿಲ್ಲ. ಆಟಗಾರನಿಗೆ ಇದನ್ನು ಪೂರೈಸಿದ್ದು ಈ ಮೂವರು ಆಟಗಾರರೆಂದು ತಿಳಿದುಬಂದಿತ್ತು’ ಎಂದೂ ತಿಳಿಸಿದೆ.
ಈ ಮೂವರು ಆಟಗಾರರು ನಂತರ ಕ್ಷಮೆ ಯಾಚಿಸಿದ್ದಾರೆ. ಆದರೆ ತಂಡದ ಆಡಳಿತ ಈ ಬಗ್ಗೆ ಬಲವಾದ ಆಕ್ಷೇಪ ವ್ಯಕ್ತಪಡಿಸಿತು. ಪರಿಣಾಮ ಅವರಿಗೆ ಸಂಭವನೀಯರ ಪಟ್ಟಿಯಿಂದ ಕೊಕ್ ನೀಡಲಾಯಿತು ಎಂದು ವಿವರಿಸಿದೆ.
ಆದರೆ ಕೋಚ್ ಕ್ರೇಗ್ ಫುಲ್ಟನ್ ಅವರು ಹಾಕಿ ಇಂಡಿಯಾಕ್ಕೆ ಈ ಬಗ್ಗೆ ಯಾವುದೇ ಲಿಖಿತ ವರದಿ ಸಲ್ಲಿಸಿರಲಿಲ್ಲ ಎನ್ನಲಾಗಿದೆ. ಈ ಅನುಭವಿಗಳನ್ನು, ಅದರಲ್ಲೂ ವಿಶೇಷವಾಗಿ ಮನ್‌ಪ್ರೀತ್ ಅವರನ್ನು ಕೈಬಿಟ್ಟಿದ್ದು ಹಾಕಿಪ್ರಿಯರ ಅಚ್ಚರಿಗೆ ಕಾರಣವಾಗಿತ್ತು. ಟೋಕಿಯೊ (2020) ಮತ್ತು ಪ್ಯಾರಿಸ್ (2024) ಒಲಿಂಪಿಕ್ ಕ್ರೀಡೆಗಳಲ್ಲಿ ಕಂಚಿನ ಪದಕ ಗೆದ್ದ ತಂಡದಲ್ಲಿ ಮನ್‌ಪ್ರೀತ್ ಆಡಿದ್ದರು.
ಹಾಕಿ ಇಂಡಿಯಾ ಹಾಲಿ ಅಧ್ಯಕ್ಷರಾಗಿರುವ ದಿಲೀಪ್ ಟಿರ್ಕೆ ಅವರ (412 ಪಂದ್ಯಗಳನ್ನು ಆಡಿದ) ದಾಖಲೆ ಮುರಿಯುವುದನ್ನು ತಡೆಯಲು ಮನ್‌ಪ್ರೀತ್‌ಗೆ ಅವಕಾಶ ತಪ್ಪಿಸಲಾಗಿದೆ ಎಂಬ ಮಾತುಗಳೂ ಕೇಳಿಬಂದಿದ್ದವು. ಮನ್‌ಪ್ರೀತ್ 411 ಪಂದ್ಯ ಆಡಿದ್ದಾರೆ.
ಈ ಹಿಂದಿನ ಪ್ರೊ ಲೀಗ್‌ನಲ್ಲಿ ಭಾರತ ಒಂಬತ್ತು ತಂಡಗಳ ಪೈಕಿ ಎಂಟನೇ ಸ್ಥಾನ ಪಡೆದಿತ್ತು. ಈ ಬಾರಿ ಹರ್ಮನ್‌ಪ್ರೀತ್ ಸಾರಥ್ಯದ ತಂಡವು ಫೆ. 11ರಂದು ಬೆಲ್ಜಿಯಂ ವಿರುದ್ಧ ಆಡುವ ಮೂಲಕ ಅಭಿಯಾನ ಆರಂಭಿಸಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.