ADVERTISEMENT

ಕಾರು ಅಪಘಾತ: ಕೆನ್ಯಾದ ಮ್ಯಾರಥಾನ್ ತಾರೆ ಕಿಪ್ಟಮ್ ಸಾವು

ಸ್ಥಳದಲ್ಲೇ ಕೋಚ್‌ ಕೂಡ ಮೃತ

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2024, 13:08 IST
Last Updated 12 ಫೆಬ್ರುವರಿ 2024, 13:08 IST
ಕೆಲ್ವಿನ್ ಕಿಪ್ಟನ್‌
ಎಎಫ್‌ಪಿ ಚಿತ್ರ
ಕೆಲ್ವಿನ್ ಕಿಪ್ಟನ್‌ ಎಎಫ್‌ಪಿ ಚಿತ್ರ   

ನೈರೋಬಿ (ಎಪಿ): ದೀರ್ಘ ಅಂತರದ ಓಟದಲ್ಲಿ ಸೂಪರ್‌ಸ್ಟಾರ್ ಪಟ್ಟಕ್ಕೇರುವ ಹಾದಿಯಲ್ಲಿದ್ದ ಮ್ಯಾರಥಾನ್ ವಿಶ್ವದಾಖಲೆ ವೀರ, ಕೆನ್ಯಾದ  ಕೆಲ್ವಿನ್ ಕಿಪ್ಟಮ್ ಭಾನುವಾರ ರಾತ್ರಿ ಕಾರು ಅಪಘಾತದಲ್ಲಿ ದಾರುಣವಾಗಿ ಮೃತಪಟ್ಟಿದ್ದಾರೆ. ಮುಂಬರುವ ಪ್ಯಾರಿಸ್‌ ಒಲಿಂಪಿಕ್ಸ್‌ ಸ್ವರ್ಣಪದಕಕ್ಕೆ 24 ವರ್ಷದ ಕಿಪ್ಟಮ್ ನೆಚ್ಚಿನ ಸ್ಪರ್ಧಿಯಾಗಿದ್ದರು.

ಪಶ್ಚಿಮ ಕೆನ್ಯಾದ ರಿಫ್ಟ್‌ ಕಣಿವೆಯ ಕಿಪ್ಟಾಗತ್– ಎಲ್ಟೊರೆಟ್‌ ಹಾದಿಯಲ್ಲಿ ಅವರು ಚಲಾಯಿಸುತ್ತಿದ್ದ ಕಾರು ಕಿಪ್ಸಾಬೆಟ್ ಎಂಬಲ್ಲಿ ರಸ್ತೆಯಿಂದ ಜಾರಿ ಮರಕ್ಕೆ ಅಪ್ಪಳಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಅವರ ಕೋಚ್ ರುವಾಂಡದ ಜರ್ವೈಸ್‌ ಹಕಿಝಿಮನಾ ಕೂಡ ಸ್ಥಳದಲ್ಲೇ ಅಸುನೀಗಿದ್ದಾರೆ. ಕಾರಿನಲ್ಲಿದ್ದ 24 ವರ್ಷದ ಮಹಿಳೆ ಗಂಭೀರವಾಗಿ ಗಾಯಗೊಂಡಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ.

ಕಳೆದ ಕೆಲವು ವರ್ಷಗಳಿಂದ ಸತತ ಸಾಧನೆಗಳಿಂದ ಅವರು ಸರ್ವಶ್ರೇಷ್ಠ ಓಟಗಾರನಾಗುವ ಭರವಸೆ ಮೂಡಿಸಿದ್ದರು. ತಮ್ಮ ಮೂರನೇ ಓಟದಲ್ಲೇ ಅವರು ವಿಶ್ವ ದಾಖಲೆ ಸ್ಥಾಪಿಸಿದ್ದರು. ಷಿಕಾಗೊ ಮ್ಯಾರಥಾನ್‌ನಲ್ಲಿ ಅವರು ಸ್ಥಾಪಿಸಿದ್ದ ವಿಶ್ವದಾಖಲೆಯನ್ನು ವಿಶ್ವ ಅಥ್ಲೆಟಿಕ್ಸ್‌ ಕಳೆದ ವಾರವಷ್ಟೇ ದೃಢೀಕರಿಸಿತ್ತು.

ADVERTISEMENT

2022 ರಲ್ಲಿ ಸ್ಪೇನ್‌ನ ವಲೆನ್ಸಿಯಾ ಮ್ಯಾರಥಾನ್‌ನಲ್ಲಿ ಅವರು ಪದಾರ್ಪಣೆ ಯತ್ನದಲ್ಲೇ ಅತಿ ವೇಗವಾಗಿ ಓಡಿದ ಓಟಗಾರ ಎಂಬ ಹಿರಿಮೆ ಪಡೆದಿದ್ದರು. ಕಳೆದ ವರ್ಷ ಪ್ರತಿಷ್ಠಿತ ಮ್ಯಾರಥಾನ್‌ ಸ್ಪರ್ಧೆಗಳಾದ ಲಂಡನ್ ಮತ್ತು ಷಿಕಾಗೊ ರೇಸ್‌ನಲ್ಲೂ ಅವರು ವಿಜಯಿಯಾಗಿದ್ದರು. ಲಂಡನ್ ಮ್ಯಾರಥಾನ್‌ನಲ್ಲಿ ಅವರು ವಿಶ್ವದಾಖಲೆ ಸ್ಥಾಪಿಸಿದ್ದರು.

ಕಳೆದ ವರ್ಷದ ಅಕ್ಟೋಬರ್‌ನಲ್ಲಿ ಕಿಪ್ಟಮ್ ಅವರು ಷಿಕಾಗೊ ಮ್ಯಾರಥಾನ್ ಓಟವನ್ನು 2ಗಂ.00.35 ಸೆಕೆಂಡಗಳಲ್ಲಿ ಕ್ರಮಿಸಿ, ಸ್ವದೇಶದ ಇನ್ನೊಬ್ಬ ಮಹಾನ್ ಓಟಗಾರ ಇಲ್ಯುಡ್‌ ಕಿಪ್ಚೊಗೆ ಅವರ ದಾಖಲೆಯನ್ನು 34 ಸೆಕೆಂಡುಗಳಿಂದ ಸುಧಾರಿಸಿದ್ದರು.

ಕಠಿಣ ಅಭ್ಯಾಸದ ಹಾದಿಯಲ್ಲಿ ಅವರು ಕೆಲವೊಮ್ಮೆ ವಾರಕ್ಕೆ 300 ಕಿ.ಮೀ. (190 ಮೈಲಿ) ಕೂಡ ಓಡುತ್ತಿದ್ದರು. ಏಪ್ರಿಲ್‌ನಲ್ಲಿ ರೋಟರ್‌ಡ್ಯಾಮ್‌ನಲ್ಲಿ ನಡೆಯಲಿರುವ ಮ್ಯಾರಥಾನ್‌ ಓಟವನ್ನು ಎರಡು ಗಂಟೆಯೊಳಗೆ ಪೂರೈಸುವ ವಿಶ್ವಾಸವನ್ನು ಇತ್ತೀಚೆಗಷ್ಟೇ ವ್ಯಕ್ತಪಡಿಸಿದ್ದರು.

‘ಕಿಪ್ಟಮ್ ನಮ್ಮ ಭವಿಷ್ಯವಾಗಿದ್ದರು’ ಎಂದು ಕೆನ್ಯಾದ ಅಧ್ಯಕ್ಷ ವಿಲಿಯಮ್ ರುಟೊ ದುಃಖಿಸಿದ್ದಾರೆ. ವಿಶ್ವ ಅಥ್ಲೆಟಿಕ್ಸ್‌ ಅಧ್ಯಕ್ಷ ಸೆಬಾಸ್ಟಿಯನ್ ಕೋ ಕೂಡ ಶೋಕ ವ್ಯಕ್ತಪಡಿಸಿದ್ದಾರೆ. ಶವಾಗಾರದ ಬಳಿಯಿದ್ದ, ಮಹಿಳಾ ಸ್ಟೀಪಲ್‌ಚೇಸ್‌ ಮಾಜಿ ವಿಶ್ವ ಚಾಂಪಿಯನ್ ಮಿಲ್ಖಾ ಕಿಮೊಸ್ ‘ನನಗೆ ಮಾತುಗಳೇ ಹೊರಡುತ್ತಿಲ್ಲ’ ಎಂದರು.

ಅಪಘಾತದ ಸ್ಥಳ ಎತ್ತರದ ಪ್ರದೇಶವಾಗಿದ್ದು, ಕೆನ್ಯಾ ಮತ್ತು ಇತರ ದೇಶಗಳ ಅನೇಕ ಮ್ಯಾರಥಾನ್ ಓಟಗಾರರ ನೆಚ್ಚಿನ ತರಬೇತಿ ತಾಣವಾಗಿದೆ.

ಕೆಲ್ವಿನ್ ಕಿಪ್ಟಮ್ ಎಎಫ್‌ಪಿ ಚಿತ್ರ

ವಿವಿಧ ರೀತಿಯಲ್ಲಿ ಸಾವು ಕಂಡ ಕೆನ್ಯಾದ ಓಟಗಾರರ ಸಾಲಿಗೆ ಈಗ ಕಿಪ್ಟಮ್ ಸೇರಿಕೊಂಡಿದ್ದಾರೆ. 2010ರಲ್ಲಿ ಆಲ್‌ ಆಫ್ರಿಕಾ ಕೂಟದ ಬೆಳ್ಳಿ ವಿಜೇತ ಡೇವಿಡ್‌ ಲಿಲಿಯಿ ಕಾರು ಅಪಘಾತದಲ್ಲಿ ಮಡಿದಿದ್ದರು.  2015ರ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ 400 ಮೀ. ಹರ್ಡಲ್ಸ್‌ ಚಿನ್ನ ಗೆದ್ದ ನಿಕೋಲಸ್ ಬೆಟ್‌ ಕೂಡ 2018ರಲ್ಲಿ ಅಪಘಾತದಲ್ಲಿ ಸಾವಿಗೀಡಾಗಿದ್ದರು. ಇನ್ನೊಬ್ಬ ಪ್ರತಿಭಾನ್ವಿತ ಮ್ಯಾರಥಾನ್ ಓಟಗಾರ, 2008ರ ಬೀಜಿಂಗ್ ಒಲಿಂಪಿಕ್ಸ್ ಮ್ಯಾರಥಾನ್ ಚಾಂಪಿಯನ್ ಸಾಮ್ಯುಯೆಲ್ ವಂಜಿರು ಮನೆಯ ಬಾಲ್ಕನಿಯಿಂದ ಕೆಳಗೆ ಬಿದ್ದು ಸತ್ತಿದ್ದರು. ಕೆನ್ಯಾ ಸಂಜಾತ ಉಗಾಂಡಾದ ಅಥ್ಲೀಟ್ ಬೆಂಜಮಿನ್ ಕಿಪ್ಲಾಗಟ್ ಕಳೆದ ವರ್ಷದ ಕೊನೆಯಲ್ಲಿ ಕೆನ್ಯಾದ ಕಿಮುಮು ತಮ್ಮ ಕಾರಿನಲ್ಲಿ ಕೊಲೆಯಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.