ADVERTISEMENT

ಎಐಬಿಎ ಚಾಂಪಿಯನ್ಸ್ ಸಮಿತಿಗೆ ಮೇರಿ ಕೋಮ್ ಅಧ್ಯಕ್ಷೆ

ಪಿಟಿಐ
Published 3 ಮಾರ್ಚ್ 2021, 12:05 IST
Last Updated 3 ಮಾರ್ಚ್ 2021, 12:05 IST
ಮೇರಿ ಕೋಮ್‌
ಮೇರಿ ಕೋಮ್‌   

ನವದೆಹಲಿ: ಆರು ಬಾರಿಯ ವಿಶ್ವ ಚಾಂಪಿಯನ್‌, ಭಾರತದ ಮೇರಿ ಕೋಮ್ ಅವರು ಅಂತರರಾಷ್ಟ್ರೀಯ ಬಾಕ್ಸಿಂಗ್ ಸಂಸ್ಥೆಯ (ಎಐಬಿಎ) ಚಾಂಪಿಯನ್ಸ್ ಮತ್ತು ವೆಟರನ್ಸ್ ಸಮಿತಿಯ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಹೋದ ವರ್ಷ ಈ ಸಮಿತಿಯನ್ನು ರಚಿಸಲಾಗಿದೆ.

ಎಐಬಿಎ ಮಂಡಳಿಯ ನಿರ್ದೇಶಕರು ಮತದಾನದ ಮೂಲಕ ಮೇರಿ ಅವರನ್ನು ಆಯ್ಕೆ ಮಾಡಿದ್ದಾರೆ. 37 ವರ್ಷದ ಮೇರಿ 2012ರ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದುಕೊಂಡಿದ್ದಾರೆ.

‘ಸಂಸ್ಥೆಯ ಚಾಂಪಿಯನ್ಸ್ ಮತ್ತು ವೆಟರನ್ಸ್ ಸಮಿತಿಗೆ ನೀವು ಅಧ್ಯಕ್ಷರಾಗಿ ಆಯ್ಕೆಯಾಗಿದ್ದನ್ನು ತಿಳಿಸಲು ಹೆಮ್ಮೆ ಎನಿಸುತ್ತದೆ‘ ಎಂದು ಮೇರಿ ಕೋಮ್ ಅವರಿಗೆ ಬರೆದ ಪತ್ರದಲ್ಲಿ ಎಐಬಿಎ ಅಧ್ಯಕ್ಷ ಉಮರ್ ಕ್ರೆಮ್ಲೆವ್‌ ತಿಳಿಸಿದ್ದಾರೆ.

ADVERTISEMENT

‘ನಿಮ್ಮ ಅಪಾರ ಅನುಭವ ಹಾಗೂ ಜ್ಞಾನದಿಂದ ಈ ಸಮಿತಿಗೆ ಮಹತ್ವದ ಕೊಡುಗೆ ನೀಡುವಿರೆಂದು ಆಶಿಸುತ್ತೇನೆ‘ ಎಂದು ಕ್ರೆಮ್ಲೆವ್ ಹೇಳಿದ್ದಾರೆ.

ವಿಶ್ವದಾದ್ಯಂತ ಇರುವ ಅನುಭವಿ ಹಾಗೂ ಚಾಂಪಿಯನ್‌ ಬಾಕ್ಸರ್‌ಗಳನ್ನು ಒಳಗೊಂಡ ಈ ಸಮಿತಿಯನ್ನು ಕಳೆದ ವರ್ಷದ ಡಿಸೆಂಬರ್‌ನಲ್ಲಿ ರಚಿಸಲಾಗಿತ್ತು. ತಮ್ಮ ಅನುಭವ ಹಾಗೂ ಯಶಸ್ಸಿನ ಕಥೆಗಳನ್ನು ಅವರು ಇಲ್ಲಿ ಹಂಚಿಕೊಳ್ಳಬಹುದಾಗಿದೆ.

ಸಮಿತಿಯ ಇತರ ಸದಸ್ಯರ ಹೆಸರುಗಳನ್ನು ಇನ್ನಷ್ಟೇ ಪ್ರಕಟಿಸಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.