ADVERTISEMENT

ಮೇರಿ ಕೋಮ್ –ನಿಖತ್ ಮುಖಾಮುಖಿ

ಬಾಕ್ಸಿಂಗ್‌: ಒಲಿಂಪಿಕ್ಸ್ ಅರ್ಹತಾ ಸುತ್ತಿನ ಸ್ಪರ್ಧೆಗಾಗಿ ಚಾಂಪಿಯನ್ನರ ಪೈಪೋಟಿ; ಸಾಕ್ಷಿ ಚೌಧರಿಗೆ ಜಯ

ಪಿಟಿಐ
Published 27 ಡಿಸೆಂಬರ್ 2019, 16:10 IST
Last Updated 27 ಡಿಸೆಂಬರ್ 2019, 16:10 IST
ರಿತು ಗ್ರೀವಲ್ (ಎಡ) ವಿರುದ್ಧ ಸೆಣಸಿದ ಮೇರಿ ಕೋಮ್ –ಪಿಟಿಐ ಚಿತ್ರ
ರಿತು ಗ್ರೀವಲ್ (ಎಡ) ವಿರುದ್ಧ ಸೆಣಸಿದ ಮೇರಿ ಕೋಮ್ –ಪಿಟಿಐ ಚಿತ್ರ   

ನವದೆಹಲಿ : ಒಲಿಂಪಿಕ್ಸ್‌ ಅರ್ಹತಾ ಸುತ್ತಿನ ಸ್ಪರ್ಧೆಗಳ ಆಯ್ಕೆಗಾಗಿ ಮೇರಿ ಕೋಮ್ ವಿರುದ್ಧ ಸೆಣಸಲು ಅವಕಾಶ ನೀಡಬೇಕು ಎಂದು ಇತ್ತೀಚೆಗೆ ಆಗ್ರಹಿಸಿದ್ದ ಬಾಕ್ಸರ್ ನಿಖತ್ ಜರೀನ್ ಅವರ ‘ಆಸೆ’ ಈಡೇರಿದೆ. ಇಲ್ಲಿ ನಡೆಯುತ್ತಿರುವ ಆಯ್ಕೆ ಟ್ರಯಲ್ಸ್‌ನ ಮೊದಲ ಸುತ್ತಿನಲ್ಲಿ ಗೆದ್ದ ಮೇರಿ ಕೋಮ್ ಮತ್ತು ನಿಖತ್ ಜರೀನ್ ಶನಿವಾರ ಫೈನಲ್‌ನಲ್ಲಿ ಮುಖಾಮುಖಿಯಾಗಲಿದ್ದಾರೆ.

ಶುಕ್ರವಾರ ನಡೆದ 51ಕೆಜಿ ವಿಭಾಗದ ಬೌಟ್‌ಗಳಲ್ಲಿ ಆರು ಬಾರಿಯ ವಿಶ್ವ ಚಾಂಪಿಯನ್ ಮೇರಿ ಕೋಮ್ ಅವರು ರಿತು ಗ್ರೀವಲ್ ವಿರುದ್ಧ ಗೆಲುವು ಸಾಧಿಸಿದರು. ಜೂನಿಯರ್ ವಿಭಾಗದ ಮಾಜಿ ವಿಶ್ವ ಚಾಂಪಿಯನ್ ನಿಖತ್ ಜರೀನ್ ರಾಷ್ಟ್ರೀಯ ಚಾಂಪಿಯನ್ ಜ್ಯೊತಿ ಗುಲಿಯಾ ಅವರನ್ನು ಮಣಿಸಿದರು.

ಮೇರಿ ಕೋಮ್ ಅವರನ್ನು ಒಲಿಂಪಿಕ್ಸ್‌ಗೆ ಆಯ್ಕೆ ಮಾಡಿದ್ದಕ್ಕೆ ಕೋಪಿಸಿಕೊಂಡಿದ್ದ ನಿಖತ್ ಜರೀನ್ ಅವರು ಆಯ್ಕೆ ಟ್ರಯಲ್ಸ್ ಮಾಡಲೇಬೇಕೆಂದು ಭಾರತ ಬಾಕ್ಸಿಂಗ್ ಫೆಡರೇಷನ್ ಅನ್ನು ಒತ್ತಾಯಿಸಿದ್ದರು. ಫೆಡರೇಷನ್‌ನ ನಿರ್ಧಾರಕ್ಕೆ ಬದ್ಧ ಇರುವುದಾಗಿ ಮೇರಿ ಕೋಮ್ ಹೇಳಿದ ಹಿನ್ನೆಲೆಯಲ್ಲಿ ಟ್ರಯಲ್ಸ್‌ ಆಯೋಜಿಸಲಾಗಿತ್ತು.

ADVERTISEMENT

ಸಾಕ್ಷಿ ಚೌಧರಿಗೆ ಗೆಲುವು: ವಿಶ್ವ ಯೂತ್ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನ ಗೆದ್ದಿದ್ದ ಸಾಕ್ಷಿ ಚೌಧರಿ 57 ಕೆಜಿ ವಿಭಾಗದ ಬೌಟ್‌ನಲ್ಲಿ ಏಷ್ಯನ್ ಚಾಂಪಿಯನ್‌ಷಿಪ್‌ನ ಬೆಳ್ಳಿ ಪದಕ ವಿಜೇತೆ ಮನೀಷಾ ಮೌನ್ ವಿರುದ್ಧ ಗೆಲುವು ಸಾಧಿಸಿದರು. ಮಾಜಿ ರಾಷ್ಟ್ರೀಯ ಚಾಂಪಿಯನ್‌ ಸಿಮ್ರನ್‌ಜೀತ್ ಕೌರ್ 60 ಕೆಜಿ ವಿಭಾಗದಲ್ಲಿ ಪವಿತ್ರಾ ವಿರುದ್ಧ ಜಯ ಜಯಿಸಿದರು.

51, 57, 60, 69 ಮತ್ತು 75 ಕೆಜಿ ವಿಭಾಗಗಳಲ್ಲಿ ವಿಶ್ವ ಚಾಂಪಿಯನ್‌ಷಿಪ್‌ನ ಫೈನಲ್ ಪ್ರವೇಶಿಸಲು ಭಾರತದ ಬಾಕ್ಸರ್‌ಗಳು ಫೈನಲ್ ಪ್ರವೇಶಿಸಲು ವಿಫಲವಾಗಿರುವ ಕಾರಣ ಟ್ರಯಲ್ಸ್ ಮೂಲಕ ಅರ್ಹತಾ ಸುತ್ತಿನ ಸ್ಪರ್ಧೆಗಳಿಗೆ ಕಳುಹಿಸಲು ನಿರ್ಧರಿಸಲಾಗಿತ್ತು.

ಪುರುಷರ ಎರಡು ದಿನಗಳ ಆಯ್ಕೆ ಟ್ರಯಲ್ಸ್‌ ಬಳ್ಳಾರಿಯಲ್ಲಿ ಭಾನುವಾರ ಆರಂಭಗೊಳ್ಳಲಿದೆ. ಒಲಿಂಪಿಕ್ಸ್ ಅರ್ಹತಾ ಸುತ್ತಿನ ಸ್ಪರ್ಧೆಗಳು ಚೀನಾದಲ್ಲಿ ಮುಂದಿನ ವರ್ಷ ಫೆಬ್ರುವರಿಯಲ್ಲಿ ನಡೆಯಲಿವೆ.

ಮೇರಿ ಕೋಮ್

ಜನನ ಮಣಿಪುರ

ತಂಡ ಮಣಿಪುರ

ವಯಸ್ಸು 36

ವಿಭಾಗ 51 ಕೆಜೆ

ಅಂತರರಾಷ್ಟ್ರೀಯ ಸಾಧನೆ ಚಿನ್ನ 18 ಬೆಳ್ಳಿ 2 ಕಂಚು 2

51 ಕೆಜಿಯಲ್ಲಿ ಸಾಧನೆ ಚಿನ್ನ 1 ಕಂಚು 2

ನಿಖತ್ ಜರೀನ್

ಜನನ ನಿಜಾಮಾಬಾದ್

ತಂಡ ಆರ್‌ಎಸ್‌ಪಿಬಿ

ವಯಸ್ಸು 23

ವಿಭಾಗ 51 ಕೆಜಿ

ಅಂತರರಾಷ್ಟ್ರೀಯ ಸಾಧನೆ

ಜೂನಿಯರ್ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನ

ನೇಷನ್ಸ್ ಕಪ್ ಚಿನ್ನ

ಯೂಥ್ ಚಾಂಪಿಯನ್‌ಷಿಪ್ ಬೆಳ್ಳಿ

ಥಾಯ್ಲೆಂಡ್ ಓಪನ್ ಬೆಳ್ಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.