
ನವದೆಹಲಿ: ಭಾರತದ ವೇಟ್‌ಲಿಫ್ಟಿಂಗ್ ತಾರೆ ಮೀರಾಬಾಯಿ ಚಾನು ಅವರ ತೂಕ ವಿಭಾಗವನ್ನು 2028ರ ಲಾಸ್ ಏಂಜಲೀಸ್ ಒಲಿಂಪಿಕ್ಸ್‌ನಲ್ಲಿ ತೆಗೆದುಹಾಕಲಾಗಿದೆ. ಅವರು ಮುಂದಿನ ಕ್ರೀಡೆಗಳಲ್ಲಿ 53 ಕೆ.ಜಿ. ತೂಕ ವಿಭಾಗದಲ್ಲಿ ಸ್ಪರ್ಧಿಸಬೇಕಾಗುತ್ತದೆ.
31 ವರ್ಷ ವಯಸ್ಸಿನ ಚಾನು 2020ರ ಟೋಕಿಯೊ ಕ್ರೀಡೆಗಳ 49 ಕೆ.ಜಿ. ವಿಭಾಗದಲ್ಲಿ ಬೆಳ್ಳಿ ಪದಕ ಗೆದ್ದುಕೊಂಡಿದ್ದರು. ಆದರೆ 2028ರ ಕ್ರೀಡೆಗಳ ವೇಟ್‌ಲಿಫ್ಟಿಂಗ್ ಸ್ಪರ್ಧೆಗಳು 53 ಕೆ.ಜಿ. ತೂಕ ವಿಭಾಗದಿಂದ ಆರಂಭವಾಗಲಿವೆ. ವೇಟ್‌ಲಿಫ್ಟಿಂಗ್‌ನಲ್ಲಿ ಒಟ್ಟು ಸ್ಪರ್ಧೆಗಳ ಸಂಖ್ಯೆಯನ್ನು 12ಕ್ಕೆ ಹೆಚ್ಚಿಸಲು ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿ ನಿರ್ಧರಿಸಿದೆ.
53 ಕೆ.ಜಿ. ತೂಕ ವಿಭಾಗದಲ್ಲಿ ಸ್ಪರ್ಧಿಸುವುದರಿಂದ ಚಾನು ಅವರಿಗೆ ಅನುಕೂಲವಾಗಲಿದೆ. ಆದರೆ ಮಣಿಪುರದ ಸ್ಪರ್ಧಿಯು ಮುಂದಿನ ವರ್ಷದ ಏಷ್ಯನ್ ಗೇಮ್ಸ್‌ವರೆಗೆ ಈ ಹಿಂದಿನಂತೆ 49 ಕೆ.ಜಿ. ವಿಭಾಗದಲ್ಲೇ ಸ್ಪರ್ಧಿಸಲಿದ್ದಾರೆ ಎಂದು ರಾಷ್ಟ್ರೀಯ ಮುಖ್ಯ ಕೋಚ್ ವಿಜಯ್ ಶರ್ಮಾ ತಿಳಿಸಿದ್ದಾರೆ.
ಪುರುಷರ ವಿಭಾಗ ಮತ್ತು ಮಹಿಳೆಯರ ವಿಭಾಗಗಳಲ್ಲಿ ತಲಾ ಆರು ತೂಕ ವಿಭಾಗಗಳಲ್ಲಿ ಸ್ಪರ್ಧೆಗಳು ನಡೆಯಲಿವೆ. ಈ ವರ್ಷ ಎರಡನೇ ಬಾರಿ ಅಂತರಾಷ್ಟ್ರೀಯ ವೇಟ್‌ಲಿಫ್ಟಿಂಗ್ ಫೆಡರೇಷನ್ ತೂಕ ವಿಭಾಗಗಳಲ್ಲಿ ಬದಲಾವಣೆ ತಂದಿದೆ. ಈ ಹಿಂದಿನ ಪಟ್ಟಿಯ ಪ್ರಕಾರ ಅವರು 48 ಕೆ.ಜಿ. ವಿಭಾಗದಲ್ಲಿ (49 ಕೆ.ಜಿ. ತೆಗೆದುಹಾಕಿದ ಕಾರಣ) ಕಣಕ್ಕಿಳಿಯಲು ಯೋಚಿಸಿದ್ದರು.
48 ಕೆ.ಜಿ. ವಿಭಾಗದಲ್ಲಿ ಸ್ಪರ್ಧಿಸಲು ಆಗುತ್ತಿರುವ ದೈಹಿಕ ಸವಾಲುಗಳ ಬಗ್ಗೆ ಚಾನು ಹಲವು ಬಾರಿ ಮಾತನಾಡಿದ್ದರು. ‘ಏಷ್ಯನ್ ಗೇಮ್ಸ್ ನಂತರ 53 ಕೆ.ಜಿ. ತೂಕ ವಿಭಾಗದಲ್ಲಿ ಸ್ಪರ್ಧಿಸಲು ಬೇಕಾದ ಪ್ರಕ್ರಿಯೆಗಳನ್ನು ಆರಂಭಿಸುತ್ತೇವೆ’ ಎಂದು ಶರ್ಮಾ ಹೇಳಿದ್ದಾರೆ.
ಒಲಿಂಪಿಕ್ಸ್‌ನಲ್ಲಿ ಇರಲಿರುವ ತೂಕ ವಿಭಾಗಗಳು:
ಮಹಿಳೆಯರು: 53 ಕೆ.ಜಿ., 61 ಕೆ.ಜಿ, 69 ಕೆ.ಜಿ, 77 ಕೆ.ಜಿ, 86 ಕೆ.ಜಿ. ಮತ್ತು +86 ಕೆ.ಜಿ.
ಪುರುಷರ ವಿಭಾಗ: 65 ಕೆ.ಜಿ., 75 ಕೆ.ಜಿ, 85 ಕೆ.ಜಿ., 95 ಕೆ.ಜಿ, 110 ಕೆ.ಜಿ. ಮತ್ತು +110 ಕೆ.ಜಿ. ವಿಭಾಗ.
2026ರ ಆಗಸ್ಟ್ 1ರಿಂದ ಈ ವಿಭಾಗಗಳಲ್ಲಿ ಸ್ಪರ್ಧೆಗಳು ಆರಂಭವಾಗುತ್ತವೆ. ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಪುರುಷರು ಮತ್ತು ಮಹಿಳೆಯರ ತಲಾ ಐದು ತೂಕ ವಿಭಾಗಗಳಲ್ಲಿ ಮಾತ್ರ ಸ್ಪರ್ಧೆಗಳು ನಡೆದಿದ್ದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.