ADVERTISEMENT

ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಹಾಕಿ: ಭಾರತದ ಜೊತೆ ಡ್ರಾ ಸಾಧಿಸಿದ ಕೊರಿಯಾ

ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಹಾಕಿ: ದ್ವಿತೀಯಾರ್ಧದಲ್ಲಿ ಗೋಲು ಕೊಟ್ಟ ಮನ್‌ಪ್ರೀತ್ ಬಳಗ

ಪಿಟಿಐ
Published 14 ಡಿಸೆಂಬರ್ 2021, 13:08 IST
Last Updated 14 ಡಿಸೆಂಬರ್ 2021, 13:08 IST
ಚೆಂಡಿನ ಮೇಲೆ ಹಿಡಿತ ಸಾಧಿಸಲು ಭಾರತ ಮತ್ತು ಕೊರಿಯಾ ಆಟಗಾರರು ಪ್ರಯತ್ನಿಸಿದರು –ಟ್ವಿಟರ್ ಚಿತ್ರ
ಚೆಂಡಿನ ಮೇಲೆ ಹಿಡಿತ ಸಾಧಿಸಲು ಭಾರತ ಮತ್ತು ಕೊರಿಯಾ ಆಟಗಾರರು ಪ್ರಯತ್ನಿಸಿದರು –ಟ್ವಿಟರ್ ಚಿತ್ರ   

ಢಾಕಾ: ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದುಕೊಂಡಿದ್ದ ಭಾರತ ತಂಡ ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಹಾಕಿ ಟೂರ್ನಿಯಲ್ಲಿ ನೀರಸ ಆರಂಭ ಕಂಡಿದೆ. ಕೊರಿಯಾ ವಿರುದ್ಧ ಮಂಗಳವಾರ ನಡೆದ ಪಂದ್ಯ 2–2ರಲ್ಲಿ ಡ್ರಾ ಆಯಿತು.

ಹಾಲಿ ಚಾಂಪಿಯನ್ ಭಾರತ 0–2ರ ಹಿನ್ನಡೆಯಲ್ಲಿದ್ದಾಗ ಕೆಚ್ಚೆದೆಯ ಆಟ ಪ್ರದರ್ಶಿಸಿದ ಕೊರಿಯಾ ತಿರುಗೇಟು ನೀಡಿತು. ಅಂತಿಮ ನಿಮಿಷಗಳಲ್ಲಿ ಲಭಿಸಿದ ಪೆನಾಲ್ಟಿ ಕಾರ್ನರ್‌ ಅವಕಾಶಗಳಲ್ಲಿ ಗೋಲು ಗಳಿಸಿ ಮುನ್ನಡೆ ಸಾಧಿಸಲು ಭಾರತ ನಡೆಸಿದ ಪ್ರಯತ್ನಗಳು ವಿಫಲವಾದವು.

ಟೋಕಿಯೊ ಒಲಿಂಪಿಕ್ಸ್ ನಂತರ ಭಾರತಕ್ಕೆ ಇದು ಮೊದಲ ಟೂರ್ನಿ. ಯುವ ಆಟಗಾರರಿಗೆ ಹೆಚ್ಚು ಅವಕಾಶ ನೀಡಿ ಕಣಕ್ಕೆ ಇಳಿದ ಮನ್‌ಪ್ರೀತ್ ಸಿಂಗ್ ಬಳಗ ನಾಲ್ಕನೇ ನಿಮಿಷದಲ್ಲೇ ಗೋಲು ಗಳಿಸಿ ಮುನ್ನಡೆಯನ್ನೂ ಸಾಧಿಸಿತು. ಲಲಿತ್ ಉಪಾಧ್ಯಾಯ ಈ ಗೋಲು ತಂದುಕೊಟ್ಟರು.

ADVERTISEMENT

18ನೇ ನಿಮಿಷದಲ್ಲಿ ತಂಡ ಮತ್ತೊಂದು ಗೋಲು ಗಳಿಸಿತು. ಪೆನಾಲ್ಟಿ ಕಾರ್ನರ್‌ ಅವಕಾಶದಲ್ಲಿ ಉಪನಾಯಕ ಹರ್ಮನ್‌ಪ್ರೀತ್ ಸಿಂಗ್ ಮೋಹಕವಾಗಿ ಚೆಂಡನ್ನು ಗುರಿ ಮುಟ್ಟಿಸಿದರು. ಮೊದಲ ಎರಡು ಕ್ವಾರ್ಟರ್‌ಗಳಲ್ಲಿ ತಲಾ ಒಂದೊಂದು ಗೋಲು ಬಿಟ್ಟುಕೊಟ್ಟ ಕೊರಿಯಾ ದ್ವಿತೀಯಾರ್ಧದ ಎರಡು ಕ್ವಾರ್ಟರ್‌ಗಳಲ್ಲಿ ಒಂದೊಂದು ಗೋಲು ಗಳಿಸಿ ಭಾರತ ತಂಡಕ್ಕೆ ಆಘಾತ ನೀಡಿತು. ‌

41ನೇ ನಿಮಿಷದಲ್ಲಿ ಜೊಂಘ್ಯುನ್ ಜಾಂಗ್ ಮತ್ತು 46ನೇ ನಿಮಿಷದಲ್ಲಿ ಸಂಘ್ಯುನ್ ಕಿಮ್ ಚೆಂಡನ್ನು ಗುರಿಸೇರಿಸಿ ಸಂಭ್ರಮಿಸಿದರು. ಆರಂಭದಲ್ಲಿ ಲಯ ಕಂಡುಕೊಳ್ಳಲು ವಿಫಲವಾದ ಕೊರಿಯಾ ಪಂದ್ಯ ಮುಂದುವರಿದಂತೆ ಭಾರತದ ರಕ್ಷಣಾ ವಿಭಾಗದಲ್ಲಿ ಆತಂಕ ಉಂಟುಮಾಡಿದರು.

ಕೆಲವು ಉತ್ತಮ ಅವಕಾಶಗಳು ಭಾರತಕ್ಕೆ ಲಭಿಸಿದ್ದವು. ಆದರೆ ತಂಡದ ಆಸೆಗೆ ಕೊರಿಯಾ ಗೋಲ್‌ಕೀಪರ್ ಜಾಯ್ಹೆನ್‌ ಕಿಮ್ ಅಡ್ಡಿಯಾದರು. ಕಳೆದ ಆವೃತ್ತಿಯಲ್ಲೂ ಭಾರತ ಮತ್ತು ಕೊರಿಯಾ ನಡುವಿನ ಪಂದ್ಯ ಡ್ರಾದಲ್ಲಿ (1–1) ಕೊನೆಗೊಂಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.