ADVERTISEMENT

ಸಾರ್ವಜನಿಕವಾಗಿ ಪ್ರತ್ಯಕ್ಷರಾದ ಚೀನಾದ ಟೆನಿಸ್ ತಾರೆ ಪೆಂಗ್ ಶುಯಿ

ಏಜೆನ್ಸೀಸ್
Published 21 ನವೆಂಬರ್ 2021, 15:59 IST
Last Updated 21 ನವೆಂಬರ್ 2021, 15:59 IST
ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಮಕ್ಕಳು ಹಿಡಿದು ನಿಂತ ದೊಡ್ಡ ಗಾತ್ರದ ಟೆನಿಸ್ ಚೆಂಡುಗಳ ಮೇಲೆ ಹಸ್ತಾಕ್ಷರ ಮಾಡಿದ ಪೆಂಗ್ ಶುಯಿ 
ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಮಕ್ಕಳು ಹಿಡಿದು ನಿಂತ ದೊಡ್ಡ ಗಾತ್ರದ ಟೆನಿಸ್ ಚೆಂಡುಗಳ ಮೇಲೆ ಹಸ್ತಾಕ್ಷರ ಮಾಡಿದ ಪೆಂಗ್ ಶುಯಿ    

ಬೀಜಿಂಗ್: ಕಾಣೆಯಾಗಿದ್ದಾರೆಂದು ವಿಶ್ವದಾದ್ಯಂತ ಸುದ್ದಿಯಾಗಿದ್ದ ಚೀನಾದ ಟೆನಿಸ್ ತಾರೆ ಪೆಂಗ್ ಶುಯಿ ಭಾನುವಾರ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ.

ಚೀನಾ ಓಪನ್ ಸಂಘಟನೆಯು ಭಾನುವಾರ ವೀಬೊ ಸಾಮಾಜಿಕ ಜಾಲತಾಣದಲ್ಲಿ ಪೆಂಗ್ ಅವರು ಟೆನಿಸ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿರುವ ಚಿತ್ರಗಳನ್ನು ಪೋಸ್ಟ್ ಮಾಡಿದೆ. ಕೋರ್ಟ್‌ ಪಕ್ಕದಲ್ಲಿ ನಿಂತಿರುವ ಪೆಂಗ್, ಮಕ್ಕಳಿಗೆ ಸ್ಮರಣಿಕೆಯಾಗಿ ನೀಡಲಾದ ದೊಡ್ಡಗಾತ್ರದ ಟೆನಿಸ್ ಚೆಂಡುಗಳಿಗೆ ಹಸ್ತಾಕ್ಷರ ಹಾಕುತ್ತಿರುವ ಚಿತ್ರ ಇದಾಗಿದೆ.

ಮೂರು ಬಾರಿ ಒಲಿಂಪಿಯನ್ ಮತ್ತು ಮಾಜಿ ವಿಂಬಲ್ಡನ್ ಚಾಂಪಿಯನ್ ಆಗಿರುವ ಪೆಂಗ್ ಶುಯಿ ಅವರು ಈಚೆಗೆ ಕಮ್ಯುನಿಸ್ಟ್‌ ಪಕ್ಷದ ಪ್ರಭಾವಿ ನಾಯಕ ಝಾಂಗ್ ಗವೊಲಿ ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆಂದು ಆರೋಪಿಸಿದ್ದರು. ಅದಾಗಿ ಕೆಲವು ದಿನಗಳ ನಂತರ ಪೆಂಗ್ ಕಾಣೆಯಾಗಿರುವ ಸುದ್ದಿ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿತ್ತು.

ADVERTISEMENT

ಈ ಕುರಿತು ವಿಶ್ವದ ಟೆನಿಸ್ ದಿಗ್ಗಜರು, ಕ್ರೀಡಾ ಆಡಳಿತ ಸಂಸ್ಥೆಗಳು ಮತ್ತು ಮಾಜಿ ಆಟಗಾರರು ಚೀನಾ ಸರ್ಕಾರದ ವಿರುದ್ಧ ಕಿಡಿ ಕಾರಿದ್ದರು. ಸಾಮಾಜಿಕ ತಾಣದಲ್ಲಿ ’ವೇರ್ ಇಸ್ ಪೆಂಗ್ ಶುಯಿ’ ಎಂಬ ಹ್ಯಾಷ್‌ಟ್ಯಾಗ್ ಅಡಿಯಲ್ಲಿ ಅಭಿಯಾನ ಆರಂಭಿಸಿದ್ದರು. ನವೊಮಿ ಒಸಾಕಾ, ಸೆರೆನಾ ವಿಲಿಯಮ್ಸ್‌ ಮತ್ತು ನೊವಾಕ್ ಜೊಕೊವಿಚ್ ಕೂಡ ಇದರಲ್ಲಿ ಸಕ್ರಿಯವಾಗಿದ್ದರು.

ಚೀನಾದಲ್ಲಿ ಆಯೋಜಿಸಲು ಉದ್ದೇಶಿಸಿರುವ ಡಬ್ಲ್ಯುಟಿಎ ಟೂರ್ನಿಗಳನ್ನು ರದ್ದುಪಡಿಸುವುದಾಗಿ ಸಂಘಟನೆಯು ಎಚ್ಚರಿಸಿತ್ತು. ಚೀನಾ ಸರ್ಕಾರದ ವಿರುದ್ಧ ವ್ಯಾಪಕ ಟೀಕೆಗಳು ವ್ಯಕ್ತವಾಗಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.