ADVERTISEMENT

ಚಿನ್ನ ಗೆದ್ದ ನೀರಜ್ ಚೋಪ್ರಾ ಜತೆಗಿನ ಒಡನಾಟ ನೆನೆದ ಮೊಳಕಾಲ್ಮುರಿನ ಪ್ರಸನ್ನಕುಮಾರ್

ಪ್ಯಾರಾ ಒಲಿಂಪಿಕ್ ಕ್ರೀಡಾಪಟು ಕೊಂಡ್ಲಹಳ್ಳಿಯ ಪ್ರಸನ್ನಕುಮಾರ್ ನೆನಪು

ಕೊಂಡ್ಲಹಳ್ಳಿ ಜಯಪ್ರಕಾಶ
Published 9 ಆಗಸ್ಟ್ 2021, 13:07 IST
Last Updated 9 ಆಗಸ್ಟ್ 2021, 13:07 IST
‌ನೀರಜ್ ಚೋಪ್ರಾ ಜತೆ ಮೊಳಕಾಲ್ಮುರು ತಾಲ್ಲೂಕಿನ ಕೊಂಡ್ಲಹಳ್ಳಿಯ ಕ್ರೀಡಾಪಟುಆರ್.ಟಿ. ಪ್ರಸನ್ನಕುಮಾರ್‌
‌ನೀರಜ್ ಚೋಪ್ರಾ ಜತೆ ಮೊಳಕಾಲ್ಮುರು ತಾಲ್ಲೂಕಿನ ಕೊಂಡ್ಲಹಳ್ಳಿಯ ಕ್ರೀಡಾಪಟುಆರ್.ಟಿ. ಪ್ರಸನ್ನಕುಮಾರ್‌   

ಮೊಳಕಾಲ್ಮುರು: ಸಮಯ ಪಾಲನೆ, ಶಿಸ್ತು, ಗುರಿ ಮುಟ್ಟುವುದು, ಕೆಲಸದಮೇಲಿನ ಶ್ರದ್ಧೆ, ಹಿರಿಯ, ಕಿರಿಯರಿಗೆ ಗೌರವ ನೀಡುವುದು ಸೇರಿ ಹಲವು ವಿಷಯಗಳಲ್ಲಿಕ್ರೀಡಾಪಟು ನೀರಜ್ ಚೋಪ್ರಾ ಯುವ ಸಮೂಹಕ್ಕೆ ಮಾದರಿಯಾಗಿದ್ದಾರೆ.

ಹೀಗೆಂದು ನೆನಪು ಮಾಡಿಕೊಂಡವರು ನೀರಜ್ ಚೋಪ್ರಾ ಅವರ ಕ್ರೀಡಾ ಒಡನಾಡಿಗಳಲ್ಲಿ ಒಬ್ಬರಾಗಿರುವ ತಾಲ್ಲೂಕಿನ ಕೊಂಡ್ಲಹಳ್ಳಿಯ ಪ್ಯಾರಾ ಒಲಿಂಪಿಕ್ ಕ್ರೀಡಾಪಟು ಹಾಗೂ ಪ್ರೌಢಶಾಲಾ ಶಿಕ್ಷಕ ಆರ್.ಟಿ. ಪ್ರಸನ್ನಕುಮಾರ್.

ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಅಥ್ಲೆಟಿಕ್ಸ್‌ ವಿಭಾಗದಲ್ಲಿ ಮೊದಲ ಚಿನ್ನದ ಪದಕ ಪಡೆದು ಅಮೋಘಸಾಧನೆ ಮಾಡಿ ದೇಶವೇ ಕೊಂಡಾಡುವಂತೆ ಮಾಡಿದ ನೀರಜ್‌ ಚೋಪ್ರಾ ಅವರ ಒಡನಾಡಿ ಪ್ರಸನ್ನಕುಮಾರ್ ಅವರ ಜತೆಗಿನ ನೆನಪುಗಳನ್ನು ‘ಪ್ರಜಾವಾಣಿ’ಯೊಂದಿಗೆಹಂಚಿಕೊಂಡರು.

ADVERTISEMENT

‘ನಾನು ಪ್ಯಾರಾ ಏಷ್ಯನ್ ಕ್ರೀಡೆಯ ಜಾವೆಲಿನ್ ಥ್ರೋ ವಿಭಾಗದಲ್ಲಿ ಭಾಗವಹಿಸಲು ಆಯ್ಕೆಯಾಗಿದ್ದಾಗ ತರಬೇತಿಗಾಗಿ 2018ರಲ್ಲಿ ಪಂಜಾಬಿನ ಪಟಿಯಾಲದ ಭಾರತೀಯ ಕ್ರೀಡಾ ತರಬೇತಿ ಕೇಂದ್ರಕ್ಕೆ ದಾಖಲಾಗಿದ್ದೆ. ಚೋಪ್ರಾ ಸಹ ಏಷ್ಯನ್ ಗೇಮ್ಸ್‌ನಲ್ಲಿ ಇದೇ ವಿಭಾಗದಲ್ಲಿ ತರಬೇತಿಗಾಗಿ ಬಂದಿದ್ದರು. ಇಬ್ಬರಿಗೂಖ್ಯಾತ ಕ್ರೀಡಾಪಟು ಕಾಶಿನಾಥ್ ನಾಯ್ಕ ತರಬೇತುದಾರರಾಗಿದ್ದರು’ ಎಂದು ಸ್ಮರಿಸಿದರು.

‘2018ರ ಮಾರ್ಚ್‌ನಿಂದ ಜೂನ್‌ವರೆಗೆ ಜತೆಯಾಗಿ ತರಬೇತಿ ಪಡೆದೆವು. ತರಬೇತಿ ಸಮಯಕ್ಕೂ ಮುನ್ನ ಅವರು ಜೂನಿಯರ್ ವಿಭಾಗದ ಜಾವೆಲಿನ್ಥ್ರೋನಲ್ಲಿ ವಿಶ್ವ ದಾಖಲೆ ಮಾಡಿದ್ದರು. ಸೀನಿಯರ್ ವಿಭಾಗಕ್ಕೆ ಆಯ್ಕೆಯಾಗಿ ತರಬೇತಿಗೆ ಬಂದಿದ್ದರು. ಈಗ ವಿಶ್ವ ದಾಖಲೆ ಮಾಡಿರುವುದು ಅತೀವ ಖುಷಿತಂದಿದೆ. ಜತೆಗೆ ನಾನು ಅವರ ಜತೆಯಲ್ಲಿ ಕೆಲದಿನ ಇದ್ದಿದ್ದು ಅವಿಸ್ಮರಣೀಯ’ ಎಂದರು.

‘ನಾಲ್ಕು ತಿಂಗಳ ತರಬೇತಿ ಅವಧಿಯಲ್ಲಿ ಒಂದು ದಿನವೂ ಚೋಪ್ರಾ ತರಬೇತಿಗೆ ಗೈರು ಆಗಿದ್ದು ನೋಡಿಲ್ಲ.ಸಮಯ ಪಾಲನೆಗೆ ಹೆಚ್ಚು ಒತ್ತು ನೀಡುತ್ತಿದ್ದರು. ಕೋಚ್ ಸೂಚಿಸಿದ ಸಮಯಕ್ಕೆ ಸರಿಯಾಗಿ ಹಾಜರಾಗಿ ಕೊಟ್ಟಿದ್ದ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿಮುಗಿಸುತ್ತಿದ್ದರು. ಸ್ವಲ್ಪವೂ ಸಿಟ್ಟು, ಅಹಂಕಾರ ಇರಲಿಲ್ಲ. ಸರಳತೆ ಎದ್ದು ಕಾಣುತ್ತಿತ್ತು’ ಎಂದು ನೆನಪಿಸಿಕೊಂಡರು.

‘ನಾನಾಯಿತು, ಕೋಚ್ ನೀಡಿದ ಹೋಂ ವರ್ಕ್ ಆಯಿತು ಎಂಬುದರಲ್ಲಿ ಅವರು ತಲ್ಲೀನರಾಗಿರುತ್ತಿದ್ದರು. ಸಂಯಮ, ಶಿಸ್ತು, ಹಿರಿಯ, ಕಿರಿಯರಿಗೆಅವರು ನೀಡುತ್ತಿದ್ದ ಬೆಲೆ, ಮಾತನಾಡಿಸುತ್ತಿದ್ದ ಪರಿ ಯುವಸಮೂಹಕ್ಕೆ ಮಾದರಿ. ವಿಶ್ವ ದಾಖಲೆ ಮಾಡಿದ್ದರೂ ಅದರ ಎಳ್ಳಷ್ಟೂ ಅಹಂಕಾರ ಅವರಲ್ಲಿ ಇರಲಿಲ್ಲ. ಮತ್ತೊಂದು ದಾಖಲೆಯ ಸಾಧನೆಗೆ ಶುಭಾಶಯ ತಿಳಿಸಲು ಕಾತುರನಾಗಿದ್ದೇನೆ’ ಎಂದು ಪ್ರಸನ್ನಕುಮಾರ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.