ADVERTISEMENT

ಕೋವಿಡ್‌: ಹಾಕಿ ಆಟಗಾರ ರವೀಂದ್ರ ಪಾಲ್ ಸಿಂಗ್ ಸಾವು

ಪಿಟಿಐ
Published 8 ಮೇ 2021, 13:21 IST
Last Updated 8 ಮೇ 2021, 13:21 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ: 1980ರ ಮಾಸ್ಕೊ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ವಿಜೇತ ಭಾರತ ಹಾಕಿ ತಂಡದ ಆಟಗಾರ ರವೀಂದ್ರ ಪಾಲ್ ಸಿಂಗ್ (60) ಅವರು ಲಖನೌನಲ್ಲಿ ಶನಿವಾರ ನಿಧನರಾದರು. ಎರಡು ವಾರಗಳ ಹಿಂದೆ ಅವರಿಗೆ ಕೋವಿಡ್‌ ದೃಢಪಟ್ಟಿತ್ತು.

ಏಪ್ರಿಲ್‌ 24ರಂದು ಅವರಿಗೆ ಸೋಂಕು ಖಚಿತಪಟ್ಟ ಬಳಿಕ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ರವೀಂದ್ರ ಪಾಲ್ ಸೋಂಕಿನಿಂದ ಚೇತರಿಸಿಕೊಂಡಿದ್ದರು. ಹೀಗಾಗಿ ಗುರುವಾರ ಅವರನ್ನು ಸಾಮಾನ್ಯ ವಾರ್ಡ್‌ (ಕೋವಿಡ್ ಅಲ್ಲದ) ಸ್ಥಳಾಂತರಿಸಲಾಗಿತ್ತು. ಆದರೆ ಅವರ ಆರೋಗ್ಯ ದಿಢೀರ್‌ ಹದಗೆಟ್ಟಿತ್ತು. ಹೀಗಾಗಿ ಶುಕ್ರವಾರ ವೆಂಟಿಲೇಟರ್‌ ಅಳವಡಿಸಲಾಗಿತ್ತು ಎಂದು ಕುಟುಂಬದ ಮೂಲಗಳು ತಿಳಿಸಿವೆ.

ADVERTISEMENT

1984ರ ಲಾಸ್ ಏಂಜಲೀಸ್ ಒಲಿಂಪಿಕ್ಸ್‌ನಲ್ಲೂ ಆಡಿದ್ದ ರವೀಂದ್ರ ಪಾಲ್, ಅವಿವಾಹಿತರಾಗಿದ್ದರು.

ಎರಡು ಒಲಿಂಪಿಕ್‌ ಕೂಟಗಳು ಅಲ್ಲದೆ ಕರಾಚಿಯಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿ (1980, 83), 1983ರಲ್ಲಿ ಹಾಂಗ್‌ಕಾಂಗ್‌ನಲ್ಲಿ ನಡೆದ 10 ರಾಷ್ಟ್ರಗಳ ರಜತ ಮಹೋತ್ಸವ ಟೂರ್ನಿ, 1982ರಲ್ಲಿ ಮುಂಬೈನಲ್ಲಿ ನಡೆದ ವಿಶ್ವಕಪ್‌ ಹಾಗೂ ಅದೇ ವರ್ಷ ಕರಾಚಿಯಲ್ಲಿ ನಡೆದ ಏಷ್ಯಾಕಪ್ ಟೂರ್ನಿಗಳಲ್ಲಿ ಭಾರತ ತಂಡವನ್ನು ಅವರು ಪ್ರತಿನಿಧಿಸಿದ್ದರು.

ರವೀಂದ್ರ ಪಾಲ್ ಅವರ ನಿಧನಕ್ಕೆ ಕೇಂದ್ರ ಕ್ರೀಡಾ ಸಚಿವ ಕಿರಣ್ ರಿಜಿಜು ಹಾಗೂ ಹಾಕಿ ಇಂಡಿಯಾ ಅಧ್ಯಕ್ಷ ಗ್ಯಾನೆಂದ್ರೊ ನಿಂಗೊಂಬಮ್ ಕಂಬನಿ ಮಿಡಿದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.