ADVERTISEMENT

ಚಿನ್ನದ ಪದಕ ಗೆದ್ದು ಟೀಕಾಕಾರರಿಗೆ ಉತ್ತರಿಸಿದ್ದೇನೆ: ಸಿಂಧು

ಪಿಟಿಐ
Published 26 ಆಗಸ್ಟ್ 2019, 20:15 IST
Last Updated 26 ಆಗಸ್ಟ್ 2019, 20:15 IST
ಪಿ.ವಿ.ಸಿಂಧು
ಪಿ.ವಿ.ಸಿಂಧು   

ಬಾಸೆಲ್‌, ಸ್ವಿಟ್ಜರ್ಲೆಂಡ್‌: ‘ಕಳೆದ ಎರಡು ವಿಶ್ವ ಚಾಂಪಿಯನ್‌ಷಿಪ್‌ ಗಳಲ್ಲಿ ಸ್ವಲ್ಪದರಲ್ಲಿ ಚಿನ್ನ ಕೈತಪ್ಪಿದಾಗ ಕೇಳಿಬಂದ ಟೀಕೆಗಳಿಂದ ಸಿಟ್ಟು ಮತ್ತು ಬೇಸರ ಉಂಟಾಗಿತ್ತು. ಈ ಬಾರಿ ಗೆದ್ದ ಚಿನ್ನದ ಪದಕ, ಎಲ್ಲ ಟೀಕಾಕಾರರಿಗೆ ನನ್ನ ಉತ್ತರವಾಗಿದೆ’ ಎಂದಿದ್ದಾರೆ ವಿಶ್ವ ಮಹಿಳಾ ಬ್ಯಾಡ್ಮಿಂಟನ್‌ ಚಾಂಪಿಯನ್‌ ಪಿ.ವಿ.ಸಿಂಧು.

ಕಳೆದ ಎರಡು ಚಾಂಪಿಯನ್‌ಷಿಪ್‌ ಗಳಲ್ಲಿ ಹೈದರಾಬಾದ್‌ನ ಆಟಗಾರ್ತಿ ಬೆಳ್ಳಿಯ ಪದಕ ಗೆದ್ದುಕೊಂಡಿದ್ದರು. ಭಾನುವಾರ ಜಪಾನ್‌ನ ಒಕುಹಾರ ವಿರುದ್ಧ ಫೈನಲ್‌ ಪಂದ್ಯವನ್ನು ಸುಲಭವಾಗಿ ಗೆದ್ದು, ಕೈತಪ್ಪಿದ್ದ ಚಿನ್ನವನ್ನು ಕೊನೆಗೂ ಕೊರಳಿಗೆ ಹಾಕಿಕೊಂಡಿದ್ದಾರೆ.

‘ಮೇಲಿಂದ ಮೇಲೆ ನನ್ನನ್ನು ಪ್ರಶ್ನಿಸುತ್ತಿದ್ದವರಿಗೆ ಇದು ಉತ್ತರ. ಅದನ್ನು ರ‍್ಯಾಕೆಟ್‌ನಿಂದ ಉತ್ತರ ನೀಡಲು ಬಯಸಿದ್ದೆ, ಅಷ್ಟೇ’ ಎಂದು ಸಿಂಧು ಹೇಳಿದ್ದನ್ನು ವಿಶ್ವ ಬ್ಯಾಡ್ಮಿಂಟನ್‌ ಫೆಡ ರೇಷನ್‌ ವೆಬ್‌ಸೈಟ್‌ ಉದ್ಧರಿಸಿದೆ.

ADVERTISEMENT

‘ಮೊದಲ ಬಾರಿ ಫೈನಲ್‌ನಲ್ಲಿ ಸೋತಾಗ ನಿರಾಸೆಯಾಯಿತು. ಕಳೆದ ವರ್ಷ ಕೋಪವೂ ಬಂದಿತ್ತು. ಬೇಸರಗೊಂಡಿದ್ದೆ. ಈ ಬಾರಿ ಆಡಲು ಹೋದಾಗ ನನ್ನಲ್ಲೇ ಹೇಳಿಕೊಂಡೆ– ನನ್ನ ಆಟ ಆಡು ತ್ತೇನೆ. ಚಿಂತಿಸಬೇಡ. ಇದು ಯಶಸ್ವಿಯಾಯಿತು’ ಎಂದು 24 ವರ್ಷದ ಸಿಂಧು ಹೇಳಿದರು.

ಸಿಂಧು 2017ರ ಫೈನಲ್‌ನಲ್ಲಿ ಒಕುಹಾರ ಎದುರು, ಕಳೆದ ವರ್ಷ ಸ್ಪೇನ್‌ನ ಕರೋಲಿನಾ ಮರಿನ್‌ ಎದುರು ಸೋತಿದ್ದರು.

ಸಿಂಧು ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಗೆದ್ದ ಐದನೇ ಪದಕ ಇದು. 2013, 14ರಲ್ಲಿ ಕಂಚಿನ ಪದಕ ಪಡೆದಿದ್ದರು. ಅವರು ಚೀನಾದ ಝಾಂಗ್‌ ನಿಂಗ್‌ ಅವ ರೊಂದಿಗೆ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಅತಿ ಹೆಚ್ಚು ಪದಕ ಪಡೆದ ಶ್ರೇಯವನ್ನು ಜಂಟಿಯಾಗಿ ಪಡೆದಿದ್ದಾರೆ. ಚೀನಾ ಆಟಗಾರ್ತಿ 2001 ರಿಂದ 2007ರ ಅವಧಿಯಲ್ಲಿ ಈ ಪದಕಗಳನ್ನು ಗೆದ್ದುಕೊಂಡಿದ್ದರು.

‘ರಿಯೊ ಒಲಿಂಪಿಕ್ಸ್‌ ನಂತರ ನನ್ನ ಮೇಲಿನ ನಿರೀಕ್ಷೆ ಅತಿಯಾಯಿತು. ಪ್ರತಿ ಬಾರಿ ನಾನು ಟೂರ್ನಿಯೊಂದಕ್ಕೆ ಹೋದಾಗ ಚಿನ್ನ ಗೆಲ್ಲಬೇಕೆಂದೇ ಎಲ್ಲರೂ ನಿರೀಕ್ಷಿಸುತ್ತಿದ್ದರು. ಈಗ 2020ರ ಟೋಕಿಯೊ ಒಲಿಂಪಿಕ್ಸ್‌ ಚಿನ್ನ ಗೆಲ್ಲಬೇಕೆಂದು ಬಯಸತೊಡಗಿದ್ದಾರೆ’ ಎಂದರು.

ಅಭಿನಂದನೆಗಳ ಮಹಾಪೂರ: ಸಿಂಧು ಅವರ ಸಾಧನೆಗೆ ದೇಶದ ಎಲ್ಲೆಡೆ ಅಭಿನಂದನೆಯ ಮಹಾಪೂರ ಹರಿದಿದೆ. ಒಲಿಂಪಿಕ್‌ ಸ್ವರ್ಣವಿಜೇತ ಶೂಟರ್‌ ಅಭಿನವ್‌ ಬಿಂದ್ರಾ, ಕ್ರಿಕೆಟ್‌ ಆಟಗಾರರಾದ ಹನುಮ ವಿಹಾರಿ, ಮಹಮದ್‌ ಶಮಿ, ಕ್ರಿಕೆಟ್‌ ಆಯ್ಕೆ ಸಮಿತಿ ಅಧ್ಯಕ್ಷ ಎಂ.ಎಸ್‌.ಕೆ.ಪ್ರಸಾದ್‌, ಸಂಸದ ರಾಜ್ಯವರ್ಧನ್‌ ಸಿಂಗ್‌ ರಾಥೋಡ್‌ ಇವರಲ್ಲಿ ಒಳಗೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.