ADVERTISEMENT

ಬ್ಯಾಸ್ಕೆಟ್‌ಬಾಲ್‌ ಚಾಂಪಿಯನ್‌ಷಿಪ್‌: ಕರ್ನಾಟಕ ಮಹಿಳಾ ತಂಡಕ್ಕೆ ಐದನೇ ಸ್ಥಾನ

​ಪ್ರಜಾವಾಣಿ ವಾರ್ತೆ
Published 28 ಡಿಸೆಂಬರ್ 2019, 17:09 IST
Last Updated 28 ಡಿಸೆಂಬರ್ 2019, 17:09 IST

ಬೆಂಗಳೂರು: ಕರ್ನಾಟಕದ ಮಹಿಳಾ ತಂಡದವರು ಪಂಜಾಬ್‌ನ ಲುಧಿಯಾನದಲ್ಲಿ ನಡೆದ 70ನೇ ರಾಷ್ಟ್ರೀಯ ಸೀನಿಯರ್‌ ಬ್ಯಾಸ್ಕೆಟ್‌ಬಾಲ್‌ ಚಾಂಪಿಯನ್‌ಷಿಪ್‌ನಲ್ಲಿ ಐದನೇ ಸ್ಥಾನದೊಂದಿಗೆ ಅಭಿಯಾನ ಮುಗಿಸಿದ್ದಾರೆ. ಪುರುಷರ ತಂಡದವರು ಆರನೇ ಸ್ಥಾನ ಪಡೆದಿದ್ದಾರೆ.

ಗುರುನಾನಕ್‌ ದೇವ್‌ ಕ್ರೀಡಾಂಗಣದಲ್ಲಿ ಶನಿವಾರ 5 ಮತ್ತು 6ನೇ ಸ್ಥಾನಗಳನ್ನು ನಿರ್ಧರಿಸಲು ನಡೆದ ಪೈಪೋಟಿಯಲ್ಲಿ ಮಹಿಳಾ ತಂಡ 66–41 ಪಾಯಿಂಟ್ಸ್‌ನಿಂದ ತೆಲಂಗಾಣವನ್ನು ಸೋಲಿಸಿತು.

ಮೊದಲ ಕ್ವಾರ್ಟರ್‌ನಲ್ಲಿ ಆಧಿಪತ್ಯ ಸಾಧಿಸಿದ ರಾಜ್ಯ ತಂಡ 23–9ರಿಂದ ಮುನ್ನಡೆ ಗಳಿಸಿತು. ಎರಡನೇ ಕ್ವಾರ್ಟರ್‌ನಲ್ಲೂ ರಾಜ್ಯದ ವನಿತೆಯರು ಗುಣಮಟ್ಟದ ಸಾಮರ್ಥ್ಯ ತೋರಿ ಮುನ್ನಡೆಯನ್ನು 39–21ಕ್ಕೆ ಹೆಚ್ಚಿಸಿಕೊಂಡರು. ದ್ವಿತೀಯಾರ್ಧದ ಮೊದಲ ಕ್ವಾರ್ಟರ್‌ನಲ್ಲಿ ತೆಲಂಗಾಣ ತಂಡ ತಿರುಗೇಟು ನೀಡಿತು. ಇದರಿಂದ ವಿಚಲಿತವಾಗದ ಕರ್ನಾಟಕದ ಆಟಗಾರ್ತಿಯರು ಅಂತಿಮ ಕ್ವಾರ್ಟರ್‌ನಲ್ಲಿ ಅಮೋಘ ಆಟ ಆಡಿ ಗೆಲುವಿನ ತೋರಣ ಕಟ್ಟಿದರು.

ADVERTISEMENT

ರಾಜ್ಯ ತಂಡದ ಚಂದನಾ ಮತ್ತು ಲೋಪಮುದ್ರ ಕ್ರಮವಾಗಿ 16 ಮತ್ತು 11 ಪಾಯಿಂಟ್ಸ್‌ ಕಲೆಹಾಕಿದರು.

ಪುರುಷರ ವಿಭಾಗದ ಪಂದ್ಯದಲ್ಲಿ ಕರ್ನಾಟಕ 58–76 ಪಾಯಿಂಟ್ಸ್‌ನಿಂದ ಕೇರಳ ಎದುರು ಸೋತಿತು.

ಕರ್ನಾಟಕ ತಂಡದ ಜಿ.ಅಭಿಷೇಕ್‌ ಮತ್ತು ಎಂ.ಹರೀಶ್‌ ಅವರು ಕ್ರಮವಾಗಿ 19 ಮತ್ತು 18 ಪಾಯಿಂಟ್ಸ್‌ ಗಳಿಸಿ ಸೋಲಿನ ನಡುವೆಯೂ ಗಮನ ಸೆಳೆದರು.

ಮಹಿಳಾ ವಿಭಾಗದಲ್ಲಿ ರೈಲ್ವೇಸ್‌ ಚಾಂಪಿಯನ್‌ ಆಯಿತು. ಫೈನಲ್‌ನಲ್ಲಿ ಈ ತಂಡ 68–55 ಪಾಯಿಂಟ್ಸ್‌ನಿಂದ ಕೇರಳವನ್ನು ಸೋಲಿಸಿತು.

ಕಂಚಿನ ಪದಕಕ್ಕಾಗಿ ನಡೆದ ಹಣಾಹಣಿಯಲ್ಲಿ ಮಧ್ಯಪ್ರದೇಶ 73–69 ಪಾಯಿಂಟ್ಸ್‌ನಿಂದ ಪಂಜಾಬ್‌ ತಂಡವನ್ನು ಪರಾಭವಗೊಳಿಸಿತು.

ಪುರುಷರ ವಿಭಾಗದ ಪ್ರಶಸ್ತಿ ಸುತ್ತಿನ ಪೈಪೋಟಿಯಲ್ಲಿ ಪಂಜಾಬ್‌ 93–75 ಪಾಯಿಂಟ್ಸ್‌ನಿಂದ ತಮಿಳುನಾಡು ವಿರುದ್ಧ ಗೆದ್ದಿತು.

ಕಂಚಿನ ಪದಕದ ಹೋರಾಟದಲ್ಲಿ ಉತ್ತರಾಖಂಡ 75–74 ಪಾಯಿಂಟ್ಸ್‌ನಿಂದ ರೈಲ್ವೇಸ್‌ ಎದುರು ಜಯಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.