ADVERTISEMENT

ರಾಷ್ಟ್ರೀಯ ಶಿಬಿರಗಳ ಪುನರಾರಂಭಕ್ಕೆ ಒಲವು: ಕೇಂದ್ರ ಕ್ರೀಡಾ ಸಚಿವ ಕಿರಣ್‌ ರಿಜಿಜು

ಒಲಿಂಪಿಕ್ಸ್‌ಗೆ ಅರ್ಹತೆ ಗಳಿಸಿರುವವರ ಅಭ್ಯಾಸಕ್ಕೆ ಅನುವು

ಪಿಟಿಐ
Published 4 ಮೇ 2020, 3:42 IST
Last Updated 4 ಮೇ 2020, 3:42 IST
ಕಿರಣ್‌ ರಿಜಿಜು 
ಕಿರಣ್‌ ರಿಜಿಜು    

ನವದೆಹಲಿ: ‘ಒಲಿಂಪಿಕ್ಸ್‌ಗೆ ಅರ್ಹತೆ ಗಳಿಸಿರುವ ಹಾಗೂ ಅರ್ಹತೆಯ ಮೇಲೆ ಕಣ್ಣಿಟ್ಟಿರುವ ಅಥ್ಲೀಟ್‌ಗಳ ಅಭ್ಯಾಸಕ್ಕೆ ಅನುವು ಮಾಡಿಕೊಡುವ ಉದ್ದೇಶದಿಂದಈ ತಿಂಗಳ ಅಂತ್ಯದಲ್ಲಿ ರಾಷ್ಟ್ರೀಯ ಶಿಬಿರಗಳನ್ನು ಪುನರಾರಂಭಿಸಲು ತೀರ್ಮಾನಿಸಿದ್ದೇವೆ’ ಎಂದು ಕೇಂದ್ರ ಕ್ರೀಡಾ ಸಚಿವ ಕಿರಣ್‌ ರಿಜಿಜು ಭಾನುವಾರ ಹೇಳಿದ್ದಾರೆ.

ಕೊರೊನಾ ವೈರಾಣು ಹರಡುವ ಭೀತಿಯಿಂದಾಗಿ ಮಾರ್ಚ್‌ ಮಧ್ಯಂತರದಲ್ಲಿ ರಾಷ್ಟ್ರೀಯ ಶಿಬಿರಗಳನ್ನು ರದ್ದು ಮಾಡುವ ತೀರ್ಮಾನ ಕೈಗೊಳ್ಳಲಾಗಿತ್ತು.

ರಾಷ್ಟ್ರೀಯ ಶಿಬಿರಗಳಲ್ಲಿರುವ ಅಥ್ಲೀಟ್‌ಗಳಿಗೆ ಲಾಕ್‌ಡೌನ್‌ ಸಮಯದಲ್ಲಿ ದೇಶದ ಪ್ರಮುಖ ಕ್ರೀಡಾ ಕೇಂದ್ರಗಳಲ್ಲಿ ಹೊರಾಂಗಣದಲ್ಲಿ ಅಭ್ಯಾಸ ಮಾಡಲು ಅನುವು ಮಾಡಿಕೊಡುವಂತೆ ಸರ್ಕಾರಕ್ಕೆ ಮನವಿ ಮಾಡುವುದಾಗಿ ಭಾರತ ಒಲಿಂಪಿಕ್‌ ಸಂಸ್ಥೆ (ಐಒಎ) ಅಧ್ಯಕ್ಷ ನರಿಂದರ್‌ ಬಾತ್ರಾ ಶನಿವಾರ ಹೇಳಿದ್ದರು.

ADVERTISEMENT

ಭಾರತ ಅಥ್ಲೆಟಿಕ್ಸ್‌ ಫೆಡರೇಷನ್‌ ಹಾಗೂ ಪಟಿಯಾಲದ ರಾಷ್ಟ್ರೀಯ ಕ್ರೀಡಾ ಸಂಸ್ಥೆಯಲ್ಲಿರುವ (ಎನ್‌ಐಎಸ್‌) ಕೆಲ ಅಥ್ಲೀಟ್‌ಗಳು, ಅಭ್ಯಾಸಕ್ಕೆ ಅನುಮತಿ ನೀಡುವಂತೆ ಕ್ರೀಡಾ ಸಚಿವಾಲಯಕ್ಕೆ ಪತ್ರ ಬರೆದಿದ್ದರು. ಹೀಗಾಗಿ ರಿಜಿಜು ಈ ನಿರ್ಧಾರ ಕೈಗೊಂಡಿದ್ದಾರೆ.

‘ಶಿಬಿರಗಳನ್ನು ಹಂತ ಹಂತವಾಗಿ ಪುನರಾರಂಭಿಸಲು ತೀರ್ಮಾನಿಸಿದ್ದೇವೆ. ಪಟಿಯಾಲದಲ್ಲಿರುವ ರಾಷ್ಟ್ರೀಯ ಕ್ರೀಡಾ ಸಂಸ್ಥೆ ಹಾಗೂ ಬೆಂಗಳೂರಿನಲ್ಲಿರುವ ಭಾರತೀಯ ಕ್ರೀಡಾ ಪ್ರಾಧಿಕಾರದಲ್ಲಿ (ಸಾಯ್‌) ಒಲಿಂಪಿಕ್ಸ್‌ಗೆ ಅರ್ಹತೆ ಗಳಿಸಿರುವ ಅಥ್ಲೀಟ್‌ಗಳು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಅವರಿಗೆ ಈ ತಿಂಗಳ ಅಂತ್ಯದಿಂದ ಅಭ್ಯಾಸ ನಡೆಸಲು ಅನುವು ಮಾಡಿಕೊಡಲಾಗುವುದು’ ಎಂದಿದ್ದಾರೆ.

‘ಮೇ 3ರಿಂದಲೇ ಸಾಯ್‌ ಕೇಂದ್ರಗಳಲ್ಲಿ ಅಥ್ಲೀಟ್‌ಗಳ ಅಭ್ಯಾಸಕ್ಕೆ ಅವಕಾಶ ನೀಡಲು ತೀರ್ಮಾನಿಸಲಾಗಿತ್ತು. ಆದರೆಕೇಂದ್ರ ಸರ್ಕಾರವು ಮೇ 17ರವರೆಗೆ ಲಾಕ್‌ಡೌನ್‌ ವಿಸ್ತರಿಸುವ ತೀರ್ಮಾನ ಕೈಗೊಂಡಿದೆ. ಕ್ರೀಡಾ ಚಟುವಟಿಕೆಗಳ ಮೇಲಿನ ನಿರ್ಬಂಧವನ್ನು ಕೊಂಚವೂ ಸಡಿಲಿಸಿಲ್ಲ. ಹೀಗಾಗಿ ಈ ನಿರ್ಧಾರದಿಂದ ಅನಿವಾರ್ಯವಾಗಿ ಹಿಂದೆ ಸರಿಯಬೇಕಾಯಿತು’ ಎಂದೂ ಅವರು ತಿಳಿಸಿದ್ದಾರೆ.

‘ಒಲಿಂಪಿಕ್ಸ್ ಅರ್ಹತೆಯ ಅವಕಾಶ ಕಳೆದುಕೊಂಡಿರುವ ಹಾಗೂ ಇತರ ಅಥ್ಲೀಟ್‌ಗಳ ಅಭ್ಯಾಸಕ್ಕೆ ಸದ್ಯಕ್ಕಂತೂ ಅವಕಾಶ ನೀಡುವುದಿಲ್ಲ. ಅವರು ಈ ವರ್ಷದ ಸೆಪ್ಟೆಂಬರ್‌ ಹಾಗೂ ಅಕ್ಟೋಬರ್‌ವರೆಗೆ ಕಾಯುವುದು ಅನಿವಾರ್ಯ. ಅಷ್ಟರೊಳಗೆ ಕೊರೊನಾ ಬಿಕ್ಕಟ್ಟು ಬಗೆಹರಿಯಬಹುದು’ ಎಂದು ನುಡಿದಿದ್ದಾರೆ.

‘ಕ್ರೀಡಾ ಕ್ಷೇತ್ರದ ಮೇಲೆ ದಟ್ಟೈಸಿರುವ ಕೊರೊನಾ ಕಾರ್ಮೋಡ ಸದ್ಯಕ್ಕಂತೂ ದೂರ ಸರಿಯುವ ಲಕ್ಷಣಗಳು ಗೋಚರಿಸುತ್ತಿಲ್ಲ. ಕ್ರೀಡಾಂಗಣಗಳಲ್ಲಿ ಕುಳಿತು ಪಂದ್ಯಗಳು ಹಾಗೂ ಸ್ಪರ್ಧೆಗಳನ್ನು ನೋಡಲು ಅಭಿಮಾನಿಗಳು ಉತ್ಸುಕರಾಗಿದ್ದಾರೆ. ಆದರೆ ಅದಕ್ಕಾಗಿ ಅವರು ಇನ್ನಷ್ಟು ಸಮಯ ಕಾಯಬೇಕಾಗುತ್ತದೆ’ ಎಂದಿದ್ದಾರೆ.

‘ಕೊರೊನಾ ಬಿಕ್ಕಟ್ಟಿನ ಈ ಸಮಯದಲ್ಲಿನಾವು ಅಂದುಕೊಂಡಂತೆ ಏನೂ ನಡೆಯುವುದಿಲ್ಲ. ಇದು ವಾಸ್ತವ ಕೂಡ. ಅದನ್ನು ಎಲ್ಲರೂ ಅರ್ಥಮಾಡಿಕೊಳ್ಳಬೇಕು. ಕೋವಿಡ್‌–19 ನಂತರದ ಕಾಲಘಟ್ಟವನ್ನು ಗಮನದಲ್ಲಿಟ್ಟುಕೊಂಡು ನಾವು ಹಲವು ಯೋಜನೆಗಳನ್ನು ರೂಪಿಸಿದ್ದೇವೆ. ಈ ಸವಾಲನ್ನು ದಿಟ್ಟತನದಿಂದ ಮೆಟ್ಟಿನಿಂತು ಮತ್ತೆ ಬಲಿಷ್ಠ ಕ್ರೀಡಾ ರಾಷ್ಟ್ರಗಳ ಸಾಲಿನಲ್ಲಿ ಗುರುತಿಸಿಕೊಳ್ಳುತ್ತೇವೆ’ ಎಂದೂ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.