ಬೆಂಗಳೂರು: ಕರ್ನಾಟಕದ ಮಹಿಳಾ 4X100 ಮೆಡ್ಲೆ ರಿಲೇ ತಂಡವು ಗೋವಾದಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಕ್ರೀಡಾಕೂಟದ ಈಜು ಸ್ಪರ್ಧೆಯಲ್ಲಿ ಕೂಟ ದಾಖಲೆಯೊಂದಿಗೆ ಚಿನ್ನ ಗೆದ್ದುಕೊಂಡಿತು.
ರಿಧಿಮಾ ವೀರೇಂದ್ರ ಕುಮಾರ್, ಎ.ಕೆ.ಲಿನೇಶಾ, ನೀನಾ ವೆಂಕಟೇಶ್ ಮತ್ತು ಧೀನಿಧಿ ದೇಸಿಂಗು ಅವರನ್ನೊಳಗೊಂಡ ರಾಜ್ಯ ತಂಡ 4 ನಿ. 25.82 ಸೆ.ಗಳಲ್ಲಿ ಗುರಿ ತಲುಪಿತು. ಬಂಗಾಳ (4 ನಿ. 27.73 ಸೆ.) ಮತ್ತು ಒಡಿಶಾ (4 ನಿ. 28.88 ಸೆ.) ತಂಡಗಳು ಕ್ರಮವಾಗಿ ಬೆಳ್ಳಿ ಹಾಗೂ ಕಂಚು ಗೆದ್ದುಕೊಂಡವು.
ಇದೇ ಸ್ಪರ್ಧೆಯ ಪುರುಷರ ವಿಭಾಗದಲ್ಲಿ ಕರ್ನಾಟಕ ತಂಡ ಕಂಚು ಜಯಿಸಿತು. ಶ್ರೀಹರಿ ನಟರಾಜ್, ವಿದಿತ್ ಎಸ್.ಶಂಕರ್, ಕಾರ್ತಿಕೇಯನ್ ನಾಯರ್ ಮತ್ತು ಅನೀಶ್ ಎಸ್.ಗೌಡ ಅವರು 3 ನಿ. 47.43 ಸೆ.ಗಳಲ್ಲಿ ಕ್ರಮಿಸಿದರು. ಎಸ್‌ಎಸ್‌ಸಿಬಿ (3 ನಿ. 46.81 ಸೆ.) ತಂಡ ಕೂಟ ದಾಖಲೆಯೊಂದಿಗೆ ಚಿನ್ನ ಗೆದ್ದರೆ, ಬೆಳ್ಳಿ ಪದಕ ತಮಿಳುನಾಡು ತಂಡದ ಪಾಲಾಯಿತು.
ಲಿನೇಶಾಗೆ ಬೆಳ್ಳಿ: ಮಹಿಳೆಯರ 200 ಮೀ. ಬ್ರೆಸ್ಟ್ ಸ್ಟ್ರೋಕ್ ಸ್ಪರ್ಧೆಯಲ್ಲಿ ಲಿನೇಶಾ (2 ನಿ. 41.64 ಸೆ.) ಮತ್ತು ಎಸ್.ಲಕ್ಷ್ಯಾ (2 ನಿ. 43.40 ಸೆ.) ಅವರು ಕ್ರಮವಾಗಿ ಬೆಳ್ಳಿ ಹಾಗೂ ಕಂಚು ತಂದುಕೊಟ್ಟರು. ಈ ವಿಭಾಗದ ಚಿನ್ನದ ಪದಕವನ್ನು ಕೇರಳದ ಹರ್ಷಿತಾ ಜಯರಾಮ್ (2 ನಿ. 40.62 ಸೆ.) ಅವರು ಕೂಟ ದಾಖಲೆಯೊಂದಿಗೆ ತಮ್ಮದಾಗಿಸಿಕೊಂಡರು.
ಮಹಿಳೆಯರ 800 ಮೀ. ಫ್ರೀಸ್ಟೈಲ್ ಸ್ಪರ್ಧೆಯಲ್ಲಿ ಶಿರಿನ್ (9 ನಿ. 29.08 ಸೆ.) ಅವರು ಕಂಚು ತಂದಿತ್ತರೆ, ಮೀನಾಕ್ಷಿ ಮೆನನ್ ನಾಲ್ಕನೇ ಸ್ಥಾನ ಪಡೆದರು.
ಪುರುಷರ 1,500 ಮೀ. ಫ್ರೀಸ್ಟೈಲ್ ಸ್ಪರ್ಧೆಯಲ್ಲಿ ಅನೀಶ್ ಎಸ್.ಗೌಡ ಪದಕ ಗೆಲ್ಲುವ ಅವಕಾಶವನ್ನು ಅಲ್ಪದರಲ್ಲೇ ಕಳೆದುಕೊಂಡು ನಾಲ್ಕನೇ ಸ್ಥಾನ ಪಡೆದರು.
ಲಾಂಗ್‌ಜಂಪ್: ಆರ್ಯಗೆ ಬೆಳ್ಳಿ ಅಥ್ಲೆಟಿಕ್ಸ್‌ನ ಪುರುಷರ ಲಾಂಗ್‌ಜಂಪ್ ಸ್ಪರ್ಧೆಯಲ್ಲಿ ಕರ್ನಾಟಕದ ಎಸ್.ಆರ್ಯ ಅವರು 7.89 ಮೀ. ಸಾಧನೆಯೊಂದಿಗೆ ಬೆಳ್ಳಿ ಗೆದ್ದುಕೊಂಡರು. 8.15 ಮೀ. ಜಿಗಿದ ಕೇರಳದ ಮೊಹಮ್ಮದ್ ಅನೀಸ್ ಯಹ್ಯಾ ಅಗ್ರಸ್ಥಾನ ಪಡೆದರೆ ಕಂಚಿನ ಪದಕ ತಮಿಳುನಾಡಿನ ಪಿ.ಡೇವಿಡ್ (7.76 ಮೀ.) ಅವರ ಪಾಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.