ADVERTISEMENT

ಗದಗ: ಸೈಕ್ಲಿಂಗ್‌ ಟ್ರಯಲ್ಸ್‌ನ ರೋಚಕ ಕ್ಷಣಗಳು

ಪ್ರತಿ ವಿಭಾಗದಿಂದ ನಾಲ್ಕು ಮಂದಿ ಆಯ್ಕೆ, ಜ.23ರ ಬಳಿಕ ಅಂತಿಮ ಪಟ್ಟಿ

​ಪ್ರಜಾವಾಣಿ ವಾರ್ತೆ
Published 17 ಜನವರಿ 2021, 16:26 IST
Last Updated 17 ಜನವರಿ 2021, 16:26 IST
ರಾಷ್ಟ್ರಮಟ್ಟದ ಸೈಕ್ಲಿಂಗ್‌ ಸ್ಪರ್ಧೆಗೆ ಆಯ್ಕೆಯಾದ ಕರ್ನಾಟಕ ತಂಡ
ರಾಷ್ಟ್ರಮಟ್ಟದ ಸೈಕ್ಲಿಂಗ್‌ ಸ್ಪರ್ಧೆಗೆ ಆಯ್ಕೆಯಾದ ಕರ್ನಾಟಕ ತಂಡ    

ಗದಗ: ಅಡ್ಡ ಗುಡ್ಡ, ಗುಂಡಿ ಇಳಿಜಾರು ಪ್ರದೇಶದಲ್ಲಿ ಲೀಲಾಜಾಲವಾಗಿ ಸೈಕಲ್‌ ಓಡಿಸುತ್ತಿದ್ದ ಸ್ಪರ್ಧಿಗಳು ಒಂದೆಡೆಯಾದರೆ; ಇಳಿಜಾರಿನಲ್ಲಿ ಸಮತೋಲನ ಸಾಧಿಸಲಾರದೇ ಕೆಲವು ಸೈಕ್ಲಿಸ್ಟ್‌ಗಳು ಕೆಳಕ್ಕೆ ಬೀಳುತ್ತಿದ್ದರು. ಇನ್ನೂ ಕೆಲವು ಸ್ಪರ್ಧಿಗಳು ದಿಬ್ಬ ಪ್ರದೇಶದಲ್ಲಿ ಸೈಕಲ್‌ ತುಳಿಯಲು ಸಾಧ್ಯವಾಗದೇ ಕೆಳಕ್ಕಿಳಿದು ಸೈಕಲ್‌ ಹಿಡಿದು ವೇಗವಾಗಿ ಓಡುತ್ತಿದ್ದರು...‌

ಭಾನುವಾರ ಗದುಗಿನ ಬಿಂಕದಕಟ್ಟಿಯಲ್ಲಿ ನಡೆದ ರಾಷ್ಟ್ರಮಟ್ಟದ ಸೈಕ್ಲಿಂಗ್‌ ಸ್ಪರ್ಧೆಗೆ ಕರ್ನಾಟಕ ತಂಡದ ಆಯ್ಕೆ ಟ್ರಯಲ್ಸ್‌ನಲ್ಲಿ ಇಂತಹ ಹತ್ತಾರು ರೋಚಕ ಚಿತ್ರಣಗಳು ಕಂಡು ಬಂದವು. ಸೈಕ್ಲಿಂಗ್‌ನಲ್ಲಿ ಅನುಭವ ಹೊಂದಿದವರಿಗೂ ನಿಮಿಷಕ್ಕೊಮ್ಮೆ ಸವಾಲೊಡ್ಡುತ್ತಿದ್ದ ಎಂಟಿಬಿ ಟ್ರ್ಯಾಕ್‌ ಸೈಕ್ಲಿಂಗ್ ಜನರಿಗೆ ರೋಮಾಂಚನಕಾರಿ ಅನುಭವ ದಕ್ಕಿಸಿಕೊಟ್ಟಿತು.

14, 16 ಮತ್ತು 18 ವರ್ಷ ಹಾಗೂ 19ರಿಂದ 35 ವರ್ಷದೊಳಗಿನವರು ಹೀಗೆ ನಾಲ್ಕು ವಿಭಾಗದಲ್ಲಿ ನಡೆದ ಆಯ್ಕೆ ಟ್ರಯಲ್ಸ್‌ನಲ್ಲಿ ಮೈಸೂರು, ಬೆಂಗಳೂರು, ವಿಜಯಪುರ, ಗದಗ, ಬೆಳಗಾವಿ ಜಿಲ್ಲೆಗಳ 103 ಸೈಕ್ಲಿಸ್ಟ್‌ಗಳು ಭಾಗವಹಿಸಿದ್ದರು.

ADVERTISEMENT

14 ವರ್ಷದೊಳಗಿನವರ ವಿಭಾಗದಲ್ಲಿ 18 ಮಂದಿ ಬಾಲಕರು, 12 ಮಂದಿ ಬಾಲಕಿಯರು, 16 ವರ್ಷದೊಳಗಿನವರ ವಿಭಾಗದಲ್ಲಿ 18 ಮಂದಿ ಬಾಲಕರು, 12 ಬಾಲಕಿಯರು, 18 ವರ್ಷದೊಳಗಿನವರ ವಿಭಾಗದಲ್ಲಿ 13 ಮಂದಿ ಬಾಲಕರು, 6 ಮಂದಿ ಬಾಲಕಿಯರು ಹಾಗೂ 19 ವರ್ಷದಿಂದ 35 ವರ್ಷದೊಳಗಿನವರ ವಿಭಾಗದಲ್ಲಿ 15 ಮಂದಿ ಪುರುಷರು ಮತ್ತು 4 ಮಂದಿ ಮಹಿಳಾ ಸೈಕ್ಲಿಸ್ಟ್‌ಗಳು ಪಾಲ್ಗೊಂಡಿದ್ದರು.

‘ಭಾನುವಾರ ನಡೆದ ಆಯ್ಕೆ ಟ್ರಯಲ್ಸ್‌ನಲ್ಲಿ ಪ್ರತಿ ವಿಭಾಗದಿಂದ ನಾಲ್ಕು ಮಂದಿ ಸೈಕ್ಲಿಸ್ಟ್‌ಗಳನ್ನು ತರಬೇತಿ ಕ್ಯಾಂಪ್‌ಗೆ ಆಯ್ಕೆ ಮಾಡಲಾಗಿದೆ. ರಾಷ್ಟ್ರ ಮಟ್ಟದ ಎಂಟಿಬಿ ಸ್ಪರ್ಧೆಗೆ ಆಯ್ಕೆಯಾದ ರಾಜ್ಯ ತಂಡದ ಸ್ಪರ್ಧಿಗಳ ಹೆಸರನ್ನು ಜ.23ರ ಬಳಿಕ ಪ್ರಕಟಿಸಲಾಗುವುದು’ ಎಂದು ಕರ್ನಾಟಕ ಅಮೆಚೂರ್‌ ಸೈಕಲ್ ಸಂಸ್ಥೆ ಕಾರ್ಯದರ್ಶಿ ಶ್ರೀಶೈಲ ಎಂ. ಕುರಣಿ ತಿಳಿಸಿದ್ದಾರೆ.

ರಾಷ್ಟ್ರ ಮಟ್ಟದ ಸೈಕ್ಲಿಂಗ್‌ ಸ್ಪರ್ಧೆ ಫೆಬ್ರುವರಿ 19ರಿಂದ 21ರವರೆಗೆ ಗದುಗಿನ ಬಿಂಕದಕಟ್ಟಿ ಎಂಟಿಬಿ ಟ್ರ್ಯಾಕ್‌ನಲ್ಲೇ ನಡೆಯಲಿದ್ದು, ಈ ಸಂಬಂಧ ಸೈಕಲ್‌ ಫೆಡರೇಷನ್‌ ಆಫ್‌ ಇಂಡಿಯಾದ ಅಧಿಕಾರಿಗಳು ಟ್ರ್ಯಾಕ್‌ ವೀಕ್ಷಣೆ ನಡೆಸಿದ್ದಾರೆ ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.