ADVERTISEMENT

ಮಹಿಳಾ ತರಬೇತುದಾರರಿಂದ ಲೈಂಗಿಕ ದೌರ್ಜನ್ಯ: ಬಾಕ್ಸರ್ ದೂರು

ಪಿಟಿಐ
Published 30 ಜೂನ್ 2025, 16:17 IST
Last Updated 30 ಜೂನ್ 2025, 16:17 IST
<div class="paragraphs"><p>ಲೈಂಗಿಕ ದೌರ್ಜನ್ಯ –‍ಪ್ರಾತಿನಿಧಿಕ ಚಿತ್ರ</p></div>

ಲೈಂಗಿಕ ದೌರ್ಜನ್ಯ –‍ಪ್ರಾತಿನಿಧಿಕ ಚಿತ್ರ

   

ನವದೆಹಲಿ: ಭಾರತ ಕ್ರೀಡಾ ಪ್ರಾಧಿಕಾರದ ಬಾಕ್ಸಿಂಗ್ ವಿಭಾಗದ ಮಹಿಳಾ ತರಬೇತುದಾರರೊಬ್ಬರು ತಮ್ಮ ಮೇಲೆ ದೈಹಿಕ ಮತ್ತು ಮಾನಸಿಕ ದೌರ್ಜನ್ಯ ಎಸಗಿರುವುದಾಗಿ 17 ವರ್ಷದ ಬಾಲಕಿಯರ ತಂಡದ ಬಾಕ್ಸರ್‌ ಆರೋಪಿಸಿದ್ದಾರೆ. ಈ ಕುರಿತು ಬಾಲಕಿಯ ಪಾಲಕರು ಪೊಲೀಸರಿಗೆ ದೂರು ನೀಡಿದ್ದಾರೆ.

‘ಕೋಚ್‌ ನೀಡುತ್ತಿದ್ದ ಸತತ ಕಿರುಕುಳದಿಂದಾಗಿ  ಹದಿಹರೆಯದ ಬಾಕ್ಸರ್‌ ಖಿನ್ನತೆಗೊಳಗಾಗಿದ್ದಾರೆ’ ಎಂದು ಪಾಲಕರು ರೋಹ್ಟಕ್ ಪೊಲೀಸ್ ಠಾಣೆಯಲ್ಲಿ ನೀಡಿರುವ ದೂರು ಎಫ್‌ಐಆರ್‌ನಲ್ಲಿ ಉಲ್ಲೇಖವಾಗಿದೆ.

ADVERTISEMENT

ಪಿಟಿಐ ಸುದ್ದಿಸಂಸ್ಥೆಗೆ ಎಫ್‌ಐ ಆರ್ ಪ್ರತಿ ಲಭ್ಯವಾಗಿದೆ. ಆದರೆ ತನಿಖೆ ಜಾರಿಯಲ್ಲಿರುವುದರಿಂದ ಆರೋಪಿಯ ಹೆಸರನ್ನು ಬಹಿರಂಗ ಮಾಡಿಲ್ಲ.

ಈ ಕುರಿತು ಪ್ರತಿಕ್ರಿಯೆಗಾಗಿ ಭಾರತ ಬಾಕ್ಸಿಂಗ್ ಫೆಡರೇಷನ್ (ಬಿಎಫ್‌ಐ) ಮತ್ತು ಎಸ್‌ಎಐ ಅಧಿಕಾರಿಗಳನ್ನು ಸಂಪರ್ಕಿಸಿದಾಗ, 17 ವರ್ಷದ ಬಾಲಕಿ ದೂರು ನೀಡಿರುವುದು ಖಚಿತವಾಗಿದೆ. ಕಪಾಳಕ್ಕೆ ಹೊಡೆದಿದ್ದು, ಹಲ್ಲೆ ಮಾಡಿದ್ದನ್ನು ಬಾಕ್ಸರ್‌ ತಿಳಿಸಿದ್ದಾರೆ. ಆದರೆ ಎಫ್‌ಐಆರ್‌ನಲ್ಲಿ ಉಲ್ಲೇಖಿಸಿರುವಂತೆ ಲೈಂಗಿಕ ದೌರ್ಜನ್ಯದ ಆರೋಪವನ್ನು ಅಲ್ಲಗಳೆದಿದ್ದಾರೆ. 

ಬಿಎಫ್‌ಐ ಮತ್ತು ಎಸ್‌ಎಐ ನಡೆಸಿದ ಆಂತರಿಕ ತನಿಖೆಯಲ್ಲಿಯೂ ಕೋಚ್ ಮೇಲಿರುವ ಆರೋಪಗಳನ್ನು ಪುಷ್ಟಿಕರಿಸುವಂತಹ ಅಂಶಗಳು ದೊರೆತಿಲ್ಲ. ಪ್ರಸ್ತುತ ನಡೆಯುತ್ತಿರುವ ರಾಷ್ಟ್ರೀಯ ಜೂನಿಯರ್ ಮತ್ತು ಯೂತ್ ಬಾಕ್ಸಿಂಗ್ ಶಿಬಿರದಲ್ಲಿ ಅವರು ತರಬೇತಿ ನೀಡುತ್ತಿದ್ದಾರೆ.

ಭಾರತೀಯ ನ್ಯಾಯಸಂಹಿತೆಯ ಸೆಕ್ಷನ್ 115 (ಗಾಯಗೊಳಿಸಿರುವುದು) ಹಾಗೂ 351(3)(ಬೆದರಿಕೆ) ಮತ್ತು ಮಕ್ಕಳನ್ನು ಲೈಂಗಿಕ ದೌರ್ಜನ್ಯದಿಂದ ರಕ್ಷಿಸುವ ಕಾಯಿದೆ 10 (ತೀವ್ರತರವಾದ ಲೈಂಗಿಕ ದೌರ್ಜನ್ಯ) ಅಡಿಯಲ್ಲಿ ಎಫ್‌ಐಆರ್ ದಾಖಲಾಗಿದೆ.

‘ಇದುವರೆಗೆ ನಮಗೆ ಎಫ್‌ಐಆರ್‌ ಲಭ್ಯವಾಗಿಲ್ಲ. ಎನ್‌ಬಿಎ ರೋಹ್ಟಕ್‌ನ ಮಹಿಳಾ ಬಾಕ್ಸರ್‌ ಇಮೇಲ್ ಮೂಲಕ 2025ರ ಏಪ್ರಿಲ್ 24ರಂದು ದೂರು ನೀಡಿದ್ದಾರೆ. ಅದರಲ್ಲಿ ಅವರು ಐರ್ಲೆಂಡ್‌ನಲ್ಲಿ ಹೋದ ಮಾರ್ಚ್‌ನಲ್ಲಿ ನಡೆದ ಆಹ್ವಾನಿತ ಬಾಕ್ಸಿಂಗ್ ಸ್ಪರ್ಧೆಯ ಸಂದರ್ಭದಲ್ಲಿ ತಮ್ಮ ಮೇಲೆ ಮಹಿಳಾ ಕೋಚ್‌ ಮಾನಸಿಕ ಮತ್ತು ದೈಹಿಕ ದೌರ್ಜನ್ಯ ಎಸಗಿದ್ದಾರೆಂದು  ಉಲ್ಲೇಖಿಸಿದ್ದಾರೆ. ಆದರೆ ಅದರಲ್ಲಿ ಲೈಂಗಿಕ ದೌರ್ಜನ್ಯ ಕುರಿತು ಹೇಳಿಲ್ಲ’ ಎಂದು ಸೋನಿಪತ್‌ನ ಎಸ್‌ಎಐ ಪ್ರಾದೇಶಿಕ ಕೇಂದ್ರವು ತಿಳಿಸಿದೆ. 

‘ಕ್ರೀಡೆಯಲ್ಲಿ ಸ್ವಚ್ಧ ಆಡಳಿತ ಮತ್ತು ಪಾರದರ್ಶಕ ನಿರ್ವಹಣೆಗೆ ನಾವು ಬದ್ಧ. ತನಿಖೆಗೆ ಬೇಕಾದ ಎಲ್ಲ ರೀತಿಯ ಸಹಕಾರ ನೀಡಲು ತಾವು ಸಿದ್ಧ’ಎಂದು ಎಸ್‌ಎಐ ತಿಳಿಸಿದೆ. 

ಆದರೆ ಬಿಎಫ್‌ಐ ಈ ಪ್ರಕರಣವನ್ನು ನಿರ್ವಹಿಸಿದ ರೀತಿ ಸರಿಯಿಲ್ಲ ಎಂದು  ಸಂತ್ರಸ್ತೆಯ ಪಾಲಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

‘ಆರೋಪಿ ಕೋಚ್ ತಮ್ಮ ಮಗಳೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ. ಆದರೆ ಆರಂಭದಲ್ಲಿ ಇದು ಮಗಳ ಅರಿವಿಗೆ ಬಂದಿಲ್ಲ. ಐರ್ಲೆಂಡ್ ಪ್ರವಾಸದ ಸಂದರ್ಭದಲ್ಲಿ ತಮ್ಮ ಮಾತು ಕೇಳದ ಮಗಳಿಗೆ ಅತ್ಯಂತ ಕಠಿಣ ದೈಹಿಕ ವ್ಯಾಯಾಮಗಳನ್ನು ಮಾಡುವ ಶಿಕ್ಷೆಯನ್ನೂ ಕೋಚ್ ವಿಧಿಸಿದ್ದರು. ಅಲ್ಲದೇ ಸೆಕೆಂಡಿಂಗ್ (ಬೌಟ್ ಸಂದರ್ಭದಲ್ಲಿ ತರಬೇತಿ ನೆರವು) ನೀಡುವಂತೆ ಮಾಡುವ ಮನವಿಯನ್ನೂ ಕೋಚ್ ತಿರಸ್ಕರಿಸಿದ್ದರು. ಅಷ್ಟೇ ಅಲ್ಲ. ಬೇರೆ ಯಾವುದೇ ಕೋಚ್ ಅಥವಾ ಬಾಕ್ಸರ್ ನಮ್ಮ ಮಗಳೊಂದಿಗೆ ಹೋಗದಂತೆ ತಡೆದಿದ್ದರು. ಇದರಿಂದಾಗಿ ರಿಂಗ್‌ನಲ್ಲಿ ಏಕಾಂಗಿಯಾಗಿ ಅಭ್ಯಾಸ ಮಾಡಿದ ಸಿಸಿಟಿವಿ ದೃಶ್ಯಗಳು ನಮ್ಮ ಬಳಿ ಇವೆ’ ಎಂದು ಪಾಲಕರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.