ADVERTISEMENT

ರಾಷ್ಟ್ರೀಯ ಶಾಲಾ ಚೆಸ್‌: ಸಿಬಿಎಸ್‌ಇಗೆ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 9 ಡಿಸೆಂಬರ್ 2025, 15:59 IST
Last Updated 9 ಡಿಸೆಂಬರ್ 2025, 15:59 IST
ಚೆಸ್‌ (ಸಾಂದರ್ಭಿಕ ಚಿತ್ರ)
ಚೆಸ್‌ (ಸಾಂದರ್ಭಿಕ ಚಿತ್ರ)   

ಬೆಂಗಳೂರು: ಸಿಬಿಎಸ್‌ಇ ಮತ್ತು ಮಹಾರಾಷ್ಟ್ರ ತಂಡಗಳು, ಸರ್ಜಾಪುರದ ಗ್ರೀನ್‌ವುಡ್‌ ಹೈ ಇಂಟರ್‌ನ್ಯಾಷನಲ್‌ ಸ್ಕೂಲ್‌ನಲ್ಲಿ ಸೋಮವಾರ ಮುಕ್ತಾಯಗೊಂಡ 69ನೇ ರಾಷ್ಟ್ರೀಯ ಶಾಲಾ ಕ್ರೀಡೆಗಳ ಚೆಸ್‌ ಟೂರ್ನಿಯಲ್ಲಿ ಕ್ರಮವಾಗಿ ಬಾಲಕರ ಮತ್ತು ಬಾಲಕಿಯರ ವಿಭಾಗದಲ್ಲಿ ಪ್ರಶಸ್ತಿ ಗೆದ್ದುಕೊಂಡವು.

ಸಿಐಎಸ್‌ಸಿಇ ಆಶ್ರಯದಲ್ಲಿ ಟೂರ್ನಿ ನಡೆಯಿತು. ಒಟ್ಟು 64 ತಂಡಗಳು ಭಾಗವಹಿಸಿದ್ದವು. ಸಿಬಿಎಸ್‌ಇ ತಂಡವು 19 ವರ್ಷದೊಳಗಿನ ಬಾಲಕರ ವಿಭಾಗದಲ್ಲಿ ಆರು ಸುತ್ತುಗಳಿಂದ 10 ಮ್ಯಾಚ್‌ ಪಾಯಿಂಟ್ಸ್ ಪಡೆಯಿತು. ಮಹಾರಾಷ್ಟ್ರ ಸಹ ಇಷ್ಟೇ ಅಂಕ ಪಡೆದರೂ ಟೈಬ್ರೇಕರ್‌ನಲ್ಲಿ ಎರಡನೇ ಸ್ಥಾನ ಪಡೆಯಬೇಕಾಯಿತು. ತಮಿಳುನಾಡು ತಂಡ (9 ಪಾಯಿಂಟ್‌) ಮೂರನೇ ಸ್ಥಾನ ಗಳಿಸಿತು.

ಬಾಲಕಿಯರ ವಿಭಾಗದಲ್ಲಿ ಮಹಾರಾಷ್ಟ್ರ 12 ಮ್ಯಾಚ್‌ ಪಾಯಿಂಟ್ಸ್ ಗಳಿಸಿ ಚಾಂಪಿಯನ್ ಎನಿಸಿತು. ಸಿಬಿಎಸ್‌ಇ ತಂಡ ಎರಡನೇ ಮತ್ತು ಸಿಐಎಸ್‌ಸಿಇ ತಂಡ ಮೂರನೇ ಸ್ಥಾನ ಗಳಿಸಿತು.

ADVERTISEMENT

ಬಾಲಕರ ವಿಭಾಗದಲ್ಲಿ ಭಾಗವಹಿಸಿದ್ದ 155 ಆಟಗಾರರಲ್ಲಿ 114 ಮಂದಿ ರೇಟಿಂಗ್ ಪಡೆದಿದ್ದು ಕಣ ಪ್ರಬಲವಾಗಿತ್ತು. ಬಾಲಕಿಯರ ವಿಭಾಗದಲ್ಲಿ ಆಡಿದ್ದ 157 ಮಂದಿಯಲ್ಲಿ 81 ಮಂದಿ ರೇಟಿಂಗ್ ಗಳಿಸಿದ್ದರು. ಐಎಂ ದೇವಿಕ್ ವಾಧ್ವಾನ್‌ (2409), ಸಾಹಿಬ್‌ ಸಿಂಗ್ (2376) ಬಾಲಕರ ವಿಭಾಗದ ಸ್ಪರ್ಧಿಗಳಲ್ಲಿ ಒಳಗೊಂಡಿದ್ದರು.

ಬಹುಮಾನ ವಿತರಣೆ ಸಮಾರಂಭದಲ್ಲಿ ಗ್ರ್ಯಾಂಡ್‌ಮಾಸ್ಟರ್‌ ತೇಜ್‌ಕುಮಾರ್, ಸಿಐಎಸ್‌ಸಿಇ ಸ್ಪೋರ್ಟ್ಸ್‌ ಅಂಡ್ ಗೇಮ್ಸ್ ಮ್ಯಾನೇಜರ್ ಆರ್ನವ್‌ ಕುಮಾರ್ ಶಾ, ಎಸ್‌ಜಿಎಫ್‌ಐ ಕ್ಷೇತ್ರ ಅಧಿಕಾರಿ ತೃಪ್ತಿ ಅಗರವಾಲ್ ಅತಿಥಿಗಳಾಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.