ನವದೆಹಲಿ: ಕುತೂಹಲದಿಂದ ಕಾಯಲಾಗುತ್ತಿರುವ ರಾಷ್ಟ್ರೀಯ ಕ್ರೀಡಾ ಮಂಡಳಿಯನ್ನು ಡಿಸೆಂಬರ್ ಅಂತ್ಯದೊಳಗೆ ರೂಪಿಸಲಾಗುತ್ತದೆ. ರಾಷ್ಟ್ರೀಯ ಫೆಡರೇಷನ್‌ಗಳಿಗೆ ಮಾನ್ಯತೆ ನೀಡುವ ಅಥವಾ ಅಮಾನತು ಮಾಡುವ, ಅವುಗಳ ಹಣಕಾಸು ವ್ಯವಹಾರಗಳ ಕಣ್ಗಾವಲಿಡುವ ಪರಮಾಧಿಕಾರವನ್ನು ಈ ಮಂಡಳಿ ಹೊಂದಿದೆ.
ಬರುವ ಜನವರಿಯಿಂದ ಕ್ರೀಡಾನೀತಿ ಪೂರ್ಣಪ್ರಮಾಣದಲ್ಲಿ ಅನುಷ್ಠಾನಕ್ಕೆ ಬರಲಿದೆ ಎಂದು ಕ್ರೀಡಾ ಸಚಿವ ಮನ್ಸುಖ್ ಮಾಂಡವೀಯ ಭರವಸೆ ನೀಡಿದ್ದರು. ಈಗ ಕ್ರೀಡಾ ಮಂಡಳಿಯ ರಚನೆ ಈ ಪ್ರಕ್ರಿಯೆಯಲ್ಲಿ ಮಹತ್ವದ ಮೈಲಿಗಲ್ಲಾಗಲಿದೆ.
‘ರಾಷ್ಟ್ರೀಯ ಕ್ರೀಡಾ ಮಂಡಳಿಯನ್ನು ಮೂರು ತಿಂಗಳಲ್ಲಿ ರಚಿಸಲಾಗುತ್ತದೆ. ಪ್ರಕ್ರಿಯೆಗೆ ಈಗಾಗಲೇ ವೇಗ ನೀಡಲಾಗಿದೆ. ನಿಯಮಗಳನ್ನು ರೂಪಿಸುವ ಮತ್ತು ಕ್ರೀಡಾ ನೀತಿಯ ಜಾರಿ ಕೆಲಸವೂ ನಡೆಯುತ್ತಿದೆ’ ಎಂದು ಕ್ರೀಡಾ ಸಚಿವಾಲಯದ ಮೂಲವು ಶನಿವಾರ ಪಿಟಿಐಗೆ ತಿಳಿಸಿದೆ. ಆದರೆ ಇದಕ್ಕೆ ಸಂಬಂಧಿಸಿ ವಿವರಗಳನ್ನು ಬಹಿರಂಗಪಡಿಸಲಿಲ್ಲ.
ಕ್ರೀಡಾ ಮಂಡಳಿಯು ಅಧ್ಯಕ್ಷರನ್ನು ಮತ್ತು ಸದಸ್ಯರನ್ನು (ಅವರ ಸಂಖ್ಯೆ ನಿರ್ಧಾರವಾಗಬೇಕಿದೆ) ಹೊಂದಲಿದೆ. ಆಡಳಿತ, ಕ್ರೀಡಾ ಆಡಳಿತ, ಕ್ರೀಡಾ ನಿಯಮ ಮತ್ತು ಇತರ ಕ್ಷೇತ್ರಗಳಲ್ಲಿ ಅನುಭವ, ಸಾಮರ್ಥ್ಯ, ಸಚ್ಚಾರಿತ್ರ್ಯ, ವಿಶ್ವಾಸಾರ್ಹತೆ ಹೊಂದಿರುವವರನ್ನು ನೇಮಕ ಮಾಡಲಾಗುವುದು ಎಂದು ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.