
ಸಾಂದರ್ಭಿಕ ಚಿತ್ರ
ಕೃಪೆ: ಎಐ
ನವದೆಹಲಿ: ಹೊಸ ಕ್ರೀಡಾ ನೀತಿಯಡಿ ಹೆಚ್ಚಿನ ಅಧಿಕಾರ ಪಡೆಯುವ ರಾಷ್ಟ್ರೀಯ ಕ್ರೀಡಾ ಮಂಡಳಿಗೆ (ಎನ್‌ಎಸ್‌ಬಿ) ಹೆಸರುಗಳನ್ನು ಶಿಫಾರಸು ಮಾಡಲು ಕ್ರೀಡಾ ಸಚಿವಾಲಯದ ಶೋಧ ಮತ್ತು ಆಯ್ಕೆ ಸಮಿತಿಯಲ್ಲಿ ಐವರು ಸದಸ್ಯರು ಇರಲಿದ್ದಾರೆ.
ಕೇಂದ್ರ ಸಂಪುಟ ಕಾರ್ಯದರ್ಶಿ ಈ ಸಮಿತಿಯ ನೇತೃತ್ವ ವಹಿಸಲಿದ್ದಾರೆ. ಹಿರಿಯ ಐಎಎಸ್ ಅಧಿಕಾರಿ ಟಿ.ವಿ.ಸೋಮನಾಥನ್ ಅವರು ಸದ್ಯ ಈ ಹುದ್ದೆಯಲ್ಲಿದ್ದಾರೆ. ಕ್ರೀಡಾ ಇಲಾಖೆ ಕಾರ್ಯದರ್ಶಿ (ಪ್ರಸ್ತುತ ಹರಿ ರಂಜನ್ ರಾವ್) ಅವರೂ ಸಮಿತಿಯಲ್ಲಿ ಇರುತ್ತಾರೆ. ಹರಿರಂಜನ್ ಅವರು ಕ್ರೀಡಾ ಆಡಳಿತಗಾರರಾಗಿ ಅನುಭವ ಹೊಂದಿದ್ದು ಎರಡು ರಾಷ್ಟ್ರೀಯ ಕ್ರೀಡಾ ಪ್ರಶಸ್ತಿಗಳನ್ನು ಪಡೆದಿದ್ದಾರೆ.
ಕೇಂದ್ರ ಸರ್ಕಾರವು ರಾಷ್ಟ್ರೀಯ ಕ್ರೀಡಾ ಆಡಳಿತ ಕಾಯ್ದೆಯಡಿ 2026ರ ರಾಷ್ಟ್ರೀಯ ಕ್ರೀಡಾ ಮಂಡಳಿ ಶೋಧ ಮತ್ತು ಆಯ್ಕೆ ಸಮಿತಿ ನಿಯಮಕ್ಕೆ ಅಧಿಸೂಚನೆ ಹೊರಡಿಸಿದೆ ಎಂದು ಕ್ರೀಡಾ ಸಚಿವಾಲಯ ತಿಳಿಸಿದೆ.
ಈ ಅಧಿಸೂಚನೆಯು ಸರ್ಕಾರಕ್ಕೆ ಶೋಧ ಮತ್ತು ಆಯ್ಕೆ ಸಮಿತಿ (ಸರ್ಚ್ ಕಂ ಸೆಲೆಕ್ಷನ್ ಕಮಿಟಿ) ರಚಿಸಲು ಅಧಿಕಾರ ನೀಡಲಿದೆ. ಸಂಪುಟ ಕಾರ್ಯದರ್ಶಿ, ಕ್ರೀಡಾ ಇಲಾಖೆ ಕಾರ್ಯದರ್ಶಿ, ಕ್ರೀಡಾ ಆಡಳಿತದಲ್ಲಿ ಅನುಭವವಿರುವ ಒಬ್ಬರು ಮತ್ತು ರಾಷ್ಟ್ರೀಯ ಕ್ರೀಡಾ ಪ್ರಶಸ್ತಿಗಳ ವಿಜೇತರಿಬ್ಬರು ಈ ಸಮಿತಿಯಲ್ಲಿ ಇರುತ್ತಾರೆ.
ರಾವ್ ಮತ್ತು ಸೋಮನಾಥನ್ ಅವರು ಈಗಿನ ಹುದ್ದೆಯ ಆಧಾರದಲ್ಲಿ ನೇಮಕಗೊಂಡಿದ್ದಾರೆ. ಇತರ ಮೂವರು ಸದಸ್ಯರ ನೇಮಕಕ್ಕೆ ಈ ಅಧಿಸೂಚನೆಯಿಂದ ಹಾದಿ ಸುಗಮವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.